ಕನ್ನಡ ಹೀರೋಗಳು ಡೇಟ್ ಕೊಡದೆ ಆಟ ಆಡಿದ್ರು, ಕೊನೆಗೆ ಇವರೇ ಹೀರೋ ಆದ್ರು: ಇದು ಎಂಟೆಕ್ ಹುಡುಗನ ಸಿನಿಮಾ ಪ್ರೀತಿ ಕಣ್ರೀ…
ಸಿನಿಮಾ ಆಂದರೇನೆ ಹಾಗೆ. ಅದೊಂದು ಕ್ರೇಜ್. ನಿತ್ಯವೂ ನೂರಾರು ಪ್ರತಿಭೆಗಳು ಗಾಂಧಿ ನಗರದ ಅಂಗಳವನ್ನು ಸ್ಪರ್ಶಿಸುತ್ತಿವೆ. ಕಲರ್ ಫುಲ್ ಕಣ್ಣಲ್ಲಿ ಬೆಟ್ಟದ್ದಷ್ಟು ಕನಸು ಹೊತ್ತು ಬಂದವರಿಗೆ ಇಲ್ಲಿ ಲೆಕ್ಕವಿಲ್ಲ. ಹಾಗೆ ಬಂದು ಗಟ್ಟಿನೆಲೆ ಕಾಣಬೇಕು ಅಂದುಕೊಂಡವರಲ್ಲಿ ಅಶೋಕ್ ಸಾಮ್ರಾಟ್ ಕೂಡ ಒಬ್ಬರು. ಅಶೋಕ್ ಸಾಮ್ರಾಟ್ ‘ಅಂಬಾಸಡರ್’ ಸಿನಿಮಾ ನಿರ್ದೇಶಕರು. ಅಷ್ಟೇ ಅಲ್ಲ, ಹೀರೋ ಕೂಡ ಹೌದು, ಇದಷ್ಟೇ ಅಲ್ಲ, ನಿರ್ಮಾಪಕರೂ ಅವರೇ. ಅಷ್ಟಕ್ಕೂ ಅಶೋಕ್ ಸಾಮ್ರಾಟ್ ಹೀರೋ ಆಗಿದ್ದೇಕೆ? ಆ ಕುರಿತು ಸ್ವತಃ ಅವರೇ ಸಿನಿಲಹರಿ ಜೊತೆ ಮಾತಾಡಿದ್ದಾರೆ…
ಓವರ್ ಟು ಅಶೋಕ್ ಸಾಮ್ರಾಟ್
‘ನನಗೆ ಮೊದಲಿಂದಲೂ ಸಿನಿಮಾ ಮೇಲೆ ಪ್ರೀತಿ ಇತ್ತು. ಹಾಗಂತ ಏಕಾಏಕಿ ಬರೋದು ಕಷ್ಟ ಅಂತಾನೂ ಗೊತ್ತಿತ್ತು. ಮೊದಲು ಬದುಕು ಗಟ್ಟಿಯಾಗಿರಬೇಕು ಅಂತ ಸ್ಟಡಿ ಬಗ್ಗೆ ಗಮನಹರಿಸಿದೆ. ಎಂಟೆಕ್ ಕೂಡ ಮುಗಿಸಿದೆ. ನಂತರ ಸಿನಿಮಾ ಫೀಲ್ಡ್ ಗೆ ಕಡೆ ಎಂಟ್ರಿ ಕೊಟ್ಟೆ. ನಿರ್ದೇಶಕನ ಕನಸು ಹೊತ್ತು ಬಂದ ನಾನು ಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದೆ. ಕೊನೆಗೆ ನಿರ್ದೇಶನಕ್ಕೂ ಅಣಿಯಾದೆ.
ಹೀರೋ ಬೇಡ ಅಂತ ಡಿಸೈಡ್ ಆದೆ
ಶ್ರೀ ಮುರಳಿ ಅಭಿನಯದ ‘ಹರೇ ರಾಮ ಹರೇ ಕೃಷ್ಣ’ ಸಿನಿಮಾ ನಿರ್ದೇಶಿಸಿದೆ. ಆ ಸಿನಿಮಾಗೆ ಇಳೆಯರಾಜ ಸಂಗೀತ, ಹಂಸಲೇಖ ಸಾಹಿತ್ಯವಿತ್ತು. ಅದಾದ ನಂತರ ಮತ್ತೊಂದು ಒಳ್ಳೆಯ ಕಥೆ ರೆಡಿ ಮಾಡಿ ಹೀರೋ ಒಬ್ಬರಿಗೆ ಕಥೆ ಹೇಳಲು ಹೋದೆ. ನಾಳೆ, ನಾಡಿದ್ದು, ವಾರ, ತಿಂಗಳು ಹೀಗೆ ಹೇಳಿ ಹೇಳಿ ಆರೇಳು ತಿಂಗಳು ಅಲೆದಾಡಿದರೂ ಕಥೆ ಕೇಳಲೇ ಇಲ್ಲ. ಒಳ್ಳೆಯ ಕಥೆ ಒಳ್ಳೆಯ ಬಜೆಟ್ ಇದ್ದರೂ ಯಾರೊಬ್ಬರೂ ಕಥೆ ಕೇಳೋಕು ಮುಂದಾಗಲಿಲ್ಲ.
ಕೊನೆಗೆ, ನನ್ನ ಜೊತೆ ಇದ್ದ ಟೀಮ್, ಈ ಕಥೆಗೆ ನೀವೇ ಹೀರೋ ಆಗಿ, ಕಥೆ ಹೊಂದುತ್ತೆ ಅಂದಾಗ, ನನಗೂ ಹಾಗೆ ಅನಿಸ್ತು. ಹೀರೋಗಳಿಗೆ ಕಥೆ ಹಿಡಿದು ಅಲೆದಾಡೋದು ಸಾಕು, ಈ ಅವಕಾಶನ ನಾನೇ ಉಪಯೋಗಿಸಿಕೊಳ್ಳಲು ರೆಡಿಯಾದೆ.
ಆಗ ಶುರುವಾಗಿದ್ದೇ ‘ಅಂಬಾಸಡರ್’. ಅಂಬಾಸಡರ್ ಅಂದರೆ ರಾಯಭಾರಿ. ಇಲ್ಲಿ ಕೃಷ್ಣನ ಆದರ್ಶಗಳಿವೆ. ಕುರುಕ್ಷೇತ್ರದಲ್ಲಿನ ಕೆಲ ಅಂಶಗಳ ಕಥೆ ಇಲ್ಲಿದೆ. ಈಗಿನ ವ್ಯವಸ್ಥೆ, ವಿರುದ್ಧ ಹೋರಾಡುವ ಯುವಕನೊಬ್ಬನ ಕಥೆ ಇದೆ. ಅಲ್ಲಲ್ಲಿ ವೈಲೆನ್ಸ್ ಕೂಡ ಇದೆ. ವಿನಾಕಾರಣ ವೈಲೆನ್ಸ್ ಇಲ್ಲ. ಅದಕ್ಕೂ ರೀಸನ್ ಇದೆ.
ಕಾಂಪ್ರಮೈಸ್ ಇಲ್ಲವೇ ಇಲ್ಲ
ಇನ್ನು ಇದೊಂದು ಕಮರ್ಷಿಯಲ್ ಕಥೆ. ಮೊದಲೇ ಹೇಳಿದಂತೆ ನಾನು ಹೀರೋ ಆಗಲೇಬೇಕು ಅಂದುಕೊಂಡವನಲ್ಲ. ಅನಿರೀಕ್ಷಿತವಾಗಿ ಹೀರೋ ಆದೆ. ಅದ್ಧೂರಿಯಾಗಿ ಚಿತ್ರ ತಯಾರಾಗಿದೆ. ಇಲ್ಲಿ ನಿರ್ದೇಶಕ ಕಮ್ ಹೀರೋ ನಾನೇ ಆಗಿದ್ದರಿಂದ ಎಲ್ಲೂ ಕಾಂಪ್ರಮೈಸ್ ಇಲ್ಲ. ಕಥೆಗೆ ಏನು ಬೇಕೋ ಎಲ್ಲವನ್ನೂ ಒದಗಿಸಿದ್ದೇನೆ. ಅಶೋಕ್ ಸಾಮ್ರಾಟ್ ಎಂಟರ್ಪ್ರೈಸಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ.
ಇಷ್ಟ ಪಟ್ಟರೆ ಯಾವುದೂ ಕಷ್ಟ ಅಲ್ಲ
ಇಲ್ಲಿ ನಿರ್ದೇಶನದ ಜೊತೆ ನಾಯಕನಾಗಿದ್ದರೂ, ನನಗೆ ಈ ಎರಡು ಕೆಲಸ ಕಷ್ಟ ಎನಿಸಲಿಲ್ಲ. ಯಾಕೆಂದರೆ, ಸಿನಿಮಾ ಅನ್ನೋದೇ ಎಂಜಾಯ್ ಮಾಡಿಕೊಂಡು ಮಾಡುವ ಕೆಲಸ. ಯಾವತ್ತೂ ಕಷ್ಟ ಆಗಲಿಲ್ಲ.
ಫೆಬ್ರವರಿ 10 ಅದ್ಧೂರಿ ಬಿಡುಗಡೆ
ಇನ್ನು ಚಿತ್ರದಲ್ಲಿ ದೀಪ್ತಿ, ಸಂಗೀತ, ಅಕ್ಷತಾ ನಾಯಕಿಯರು. ಇವರೊಂದಿಗೆ ದೊಡ್ಡ ತಾರಾಬಳಗವಿದೆ. ಪ್ರಕಾಶ್ ರೈ, ಸೋನುಸೂದ್, ಚಿತ್ರಾ ಶೆಣೈ ಇತರರು ಇದ್ದಾರೆ. ಗುರುಕಿರಣ್ ಅವರ ಸಂಗೀತವಿದೆ. ಇಳೆಯರಾಜ ಅವರ ಹಿನ್ನೆಲೆ ಸಂಗೀತವಿದೆ.
ಪಿಕೆಎಚ್ ದಾಸ್ ಕ್ಯಾಮೆರಾ ಹಿಡಿದಿದ್ದಾರೆ.
95 ದಿನಗಳ ಕಾಲ ಬೆಂಗಳೂರು, ಹೈದರಾಬಾದ್, ಮುಂಬೈನಲ್ಲಿ ಚಿತ್ರೀಕರಣವಾಗಿದೆ. ನಾಲ್ಕು ಹಾಡುಗಳಿರುವ ಈ ಚಿತ್ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದೆ.