ಕೋಳಿ ಎಸ್ರು ಸಿನಿಮಾಗೆ ಪ್ರಶಸ್ತಿ ಸುರಿಮಳೆ: ‘ಅಮ್ಮಚ್ಚಿಯೆಂಬ ನೆನಪು’ ತಂಡದ ಮತ್ತೊಂದು ಚಿತ್ರ

ನಾಲ್ಕು ವರ್ಷಗಳ ಹಿಂದೆ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ರಾಷ್ಟೀಯ, ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದಿತ್ತು. ಅಲ್ಲದೆ ಥಿಯೇಟರ್‌ನಲ್ಲಿ ರಿಲೀಸ್ ಕೂಡ ಆಗಿ ಯಶಸ್ವಿ 31 ದಿನಗಳ ಕಾಲ ಪ್ರದರ್ಶನವಾಗಿತ್ತು. ಇದೀಗ ಅದೇ ತಂಡದಿಂದ ‘ಕೋಳಿ ಎಸ್ರು’ ಎಂಬ ವಿಭಿನ್ನ ಸಿನಿಮಾ ಸಿದ್ಧವಾಗಿದೆ. ಈಗಾಗಲೇ ರಾಷ್ಟ್ರೀಯ, ಅಂತರಾಷ್ಟ್ರೀಯ ಫಿಲ್ಮ್ ಪೆಸ್ಟಿವೆಲ್‌ಗಳಲ್ಲಿ ಪ್ರದರ್ಶನಗೊಂಡ ‘ಕೋಳಿ ಎಸ್ರು’ ಪ್ರಶಂಸೆಯ ಜೋತೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ನಿರ್ದೇಶಕಿ ಚಂಪಾ ಶೆಟ್ಟಿ ‘ನಮ್ಮ ಮೊದಲ ಪ್ರಯತ್ನದ ‘ಅಮ್ಮಚ್ಚಿಯಂಬ ನೆನಪು’ ಚಿತ್ರಕ್ಕೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ನಂತರ ಮತ್ತೊಂದು ಸಿನಿಮಾ ಮಾಡಲು ಯೋಚನೆ ಮಾಡಿ ಸಾಕಷ್ಟು ಕಥೆಗಳನ್ನು ಹುಡುಕುತಿದ್ದೆ. ಆಗ ನಾನು ನಟಿಸಿದ್ದ ನಾಟಕದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಲು ಮುಂದಾದೆ. ಈ ಚಿತ್ರವನ್ನು ಕಾ.ತಾ ಚಿಕ್ಕಣ್ಣ ಅವರು ಬರೆದ ‘ಹುಚ್ಚೇರಿಯ ಎಸರಿನ ಪ್ರಸಂಗ’ ಕಥೆಯನ್ನು ಆಧರಿಸಿ ಮಾಡಲಾಗಿದೆ. ಇದು ನಾಟಕವಾಗಿಯೋ ಪ್ರದರ್ಶನ ಕಂಡು ಯಶಸ್ವಿಯಾಗಿತ್ತು. 80ರ ದಶಕದ ಈ ಕಥೆ ತೆಗೆದುಕೊಂಡು ಇಂದಿನ ಸಮಾಜಕ್ಕೆ ಒಗ್ಗುವಂತೆ ಮೂಲ ಕತೆಗೆ ದಕ್ಕೆ ಆಗದಂತೆ ಸಿನಿಮಾ ಮಾಡಲಾಗಿದೆ.

ಇದರಲ್ಲಿ ಒಂದು ಹೆಣ್ಣು ಎನೆಲ್ಲಾ ಕಷ್ಟ ಅನುಭವಿಸಿ ಗೆಲ್ಲುತ್ತಾಳೆ ಎಂಬುದನ್ನು ತೋರಿಸಲಾಗಿದೆ. ಹಳ್ಳಿ ಬ್ಯಾಗರೌಂಡ್‌ನಲ್ಲಿ ಚಿತ್ರವಿದ್ದು, ಕಲಾತ್ಮಕವಾಗಿ ಮಾಡಲಾಗಿದೆ. ಇದೀಗ ಈ ಸಿನಿಮಾ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಖುಷಿ ಇದೆ. ಈ ಚಿತ್ರ ನಿರ್ಮಾಣಕ್ಕೆ ಮುನಿವೆಕಟಪ್ಪನವರು ಸೇರಿದಂತೆ ಸಾಕಷ್ಟು ಜನ ಕೈ ಜೋಡಿಸಿದ್ದಾರೆ’ ಎಂದು ಹೇಳಿದರು.

ವೇದಿಕೆಯಲ್ಲಿ ಕಥೆಗಾರ ಕಾ.ತಾ ಚಿಕ್ಕಣ್ಣ ‘ಕಥೆಯಲ್ಲಿ ಹಳ್ಳಿಯ ಹೆಣ್ಣು ಮಗಳೋಬ್ಬಳು ಬಡತನದಿಂದ ಊರಲ್ಲಿ ಯಾರ ಮನೆಯಲ್ಲಿ ಕೋಳಿ ಸಾರ್ ಮಾಡಿದರೂ, ಎಸರಿಗಾಗಿ ಕಾಯ್ದು ತೆಗೆದುಕೊಂಡು ಬರುತಿರುತ್ತಾಳೆ. ತನ್ನ ಧಾರಿಯಲ್ಲಿಯೇ ಮಗಳು ಕೂಡ ಸಾಗುತ್ತಿರುವುದನ್ನು ಕಂಡು ಹೇಗೆ ಬದಲಾದಳು ಎಂಬ ಕತೆ ಇದೆ. ಮೂಲ ಕತೆಗೆ ದಕ್ಕೆ ಆಗದಂತೆ ಚಂಪಾ ಸುಂದರವಾಗಿ ಸಿನಿಮಾ ಮಾಡಿದ್ದು, ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅದರಲ್ಲೂ ಈ ಕತೆ ನಾಟಕವಾಗಿ ಪ್ರದರ್ಶನ ಕಂಡಾಗ ಹುಚ್ಚೇರಿ ಪಾತ್ರಕ್ಕೆ ಪ್ರಶಸ್ತಿ ಬಂದಿತ್ತು. ಈಗ ಚಿತ್ರದಲ್ಲೂ ಆ ಪಾತ್ರಕ್ಕೆ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ’ ಎಂದರು. ಅಂದಂಗೆ ‘ಕೋಳಿ ಎಸ್ರು’ ಸಿನಿಮಾ ಈಗಾಗಲೇ ‘ನ್ಯೂಯಾರ್ಕ್ ಇಂಡಿಯನ್ ಫಿಲ್ಮ ಫೆಸ್ಟಿವಲ್’ಗೆ ಆಯ್ಕೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಇತ್ತೀಚೆಗೆ ಔರಂಗಾಬಾದ್‌ನಲ್ಲಿ ನಡೆದ ಪ್ರತಿಷ್ಠಿತ ‘ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಅಲ್ಲದೆ ಇಂಡಿಯನ್ ಕಾಂಪಿಟೆಷನ್ ಸ್ಪರ್ದೆಯಲ್ಲಿ ಇನ್ನೋಳಿದ ಎಂಟು ಚಿತ್ರಗಳೊಂದಿಗೆ ಸ್ಪರ್ದಿಸಿ ಎರಡು ಪ್ರಶಸ್ತಿಗಳನ್ನು ‘ಕೋಳಿ ಎಸ್ರು’ ಬಾಚಿಕೊಂಡಿದೆ.

ಹೌದು ಔರಂಗಾಬಾದ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ ಮತ್ತು ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಬಾಲ ನಟಿ ಅಪೇಕ್ಷಾ ಚೋರನಹಳ್ಳಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ಸಾಕಷ್ಟು ಚಿತ್ರೋತ್ಸಗಳಿಗೆ ಸಿನಿಮಾವನ್ನು ಕಳಿಸುವ ಜೊತೆಗೆ ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ತಂಡ ತಯಾರಿ ನಡೆಸಿದೆ. ಪತ್ರಿಕಾಗೋಷ್ಠಿಯಲ್ಲಿ ನಟಿ ಅಕ್ಷತಾ ಪಾಂಡವಪುರ ಹಾಗೂ ಚಿತ್ರದ ಸಂಕಲನಕಾರ ಹರೀಶ್ ತಮ್ಮ ಅನುಭವ ಹಂಚಿಕೊಂಡರು.

Related Posts

error: Content is protected !!