ಇಷ್ಟರಲ್ಲೇ ದೊಡ್ಡಹಟ್ಟಿ ಬೋರೇಗೌಡರು ಸೌಂಡ್ ಮಾಡ್ತಾರೆ! ಈ ಗೌಡ್ರುಗೆ ಪ್ರಶಸ್ತಿಯೂ ಬಂದಿದೆ…

ಇದೊಂದು ವಿಭಿನ್ನ ಕಥೆಯ ಚಿತ್ರ. ಈ ಚಿತ್ರಕ್ಕೆ 2021 ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.

“ತರ್ಲೆವಿಲೇಜ್”, “ಪರಸಂಗ”, ಚಿತ್ರಗಳ ನಿರ್ದೇಶಕ ಕೆ ಎಂ ರಘು ನಿರ್ದೇಶಿಸಿರುವ ” ದೊಡ್ಡಹಟ್ಟಿ ಬೋರೇಗೌಡ” ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ರಾಜರಾಜೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ “ದೊಡ್ಡಹಟ್ಟಿ ಬೋರೇಗೌಡ” ಚಿತ್ರ 2021ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಪ್ರಥಮ ಅತ್ಯುತ್ತಮ ಚಲನಚಿತ್ರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸನ್ಮಾನ್ಯ ರಾಜ್ಯಪಾಲರು ಪ್ರಶಸ್ತಿ ನೀಡಿದ್ದರು.

ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ಹಳ್ಳಿಗಳಲ್ಲಿ ಬಡವರಿಗೆ ಸರ್ಕಾರದಿಂದ ಆಶ್ರಯ ಮನೆ ನೀಡುತ್ತಾರೆ. ಆ ಮಂಜೂರಾದ ಮನೆ ಪಡೆಯಲು ಒಬ್ಬ ವ್ಯಕ್ತಿ ಎಷ್ಟೆಲ್ಲಾ ಕಷ್ಟ ಪಡುತ್ತಾನೆ ಎಂಬುದು ಚಿತ್ರದ ಪ್ರಮುಖ ಕಥಸಾರಾಂಶ.

ಚಿತ್ರದಲ್ಲಿ ಸಂಪೂರ್ಣ ಗ್ರಾಮೀಣ ಪ್ರತಿಭೆಗಳೇ ನಟಿಸಿದ್ದಾರೆ. ಎಲ್ಲಾ ಕಲಾವಿದರಿಗೂ ಮೂರು ತಿಂಗಳ ಅಭಿನಯ ತರಭೇತಿ ನೀಡಿ ನಂತರ ಚಿತ್ರೀಕರಣ ಮಾಡಲಾಯಿತು. ಇದೊಂದು ಹಾಸ್ಯದ ಮೂಲಕ ಜನರನ್ನು ತಲುಪುವ ಉತ್ತಮ ಚಿತ್ರವಾಗಲಿದೆ.


ಈಗ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ನಂತರ ಚಿತ್ರದ ಮೂರು ಹಾಡುಗಳನ್ನು ಒಂದಾದ ಮೇಲೆ ಒಂದರಂತೆ ಬಿಡುಗಡೆ ಮಾಡುತ್ತೇವೆ. ಆನಂತರ ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ನಿರ್ದೇಶಕ ರಘು ತಿಳಿಸಿದ್ದಾರೆ.

ಶಿವಣ್ಣ ಬೀರುಹುಂಡಿ, ಗೀತಾ, ಸಂಪತ್, ಪ್ರಕಾಶ್ ಶೆಣೈ, ಲಾವಣ್ಯ, ಅಭಿಜ್ವಲ್, ಕಲಾರತಿ ಮಹದೇವ್,
ದಯಾನಂದ್ ಕಟ್ಟೆ ಹೀಗೆ ಹೊಸಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಶಶಿಕುಮಾರ್ ಬಿ ಸಿ ಮತ್ತು ಕೆ ಎಂ ಲೋಕೇಶ್ ಬಂಡವಾಳ ಹೂಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ ಹಾಗೂ ನಾಗರಾಜ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಹುಣಸೂರು ತಾಲೂಕಿನ ಗದ್ದಿಗೆಯಲ್ಲಿ ಹಾಗು ಎಚ್.ಡಿ. ಕೋಟೆ ತಾಲೂಕಿನಲ್ಲಿ ಚಿತ್ರೀಕರಣ ನಡೆದಿದೆ,

Related Posts

error: Content is protected !!