“ನನ್ನವನು”, ” ಕೋಟೆ”, “ದಂಡುಪಾಳ್ಯ” , “ಶಿವ” ಮುಂತಾದ ಚಿತ್ರಗಳ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದ “ಹುಬ್ಬಳ್ಳಿ ಡಾಬಾ” ಚಿತ್ರ ಇದೇ ನವೆಂಬರ್ 11 ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಕೊರೋನ ಎರಡನೇ ಅಲೆ ಸಮಯದಲ್ಲಿ ಆರಂಭವಾದ ಸಿನಿಮಾವಿದು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗಿ, ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ. ತೆಲುಗಿನ ನವೀನ್ ಚಂದ್ರ ಈ ಚಿತ್ರದ ನಾಯಕ. ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ ನಾಯಕಿಯರು. ರವಿಶಂಕರ್, ರಾಜಾ ರವೀಂದ್ರ, ನಾಗಾ ಬಾಬು, ಅಯ್ಯಪ್ಪ ಶರ್ಮ, ಪೂಜಾ ಗಾಂಧಿ, ರವಿಕಾಳೆ, ಮಕರಂದ ದೇಶಪಾಂಡೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ವಿಶೇಷ ಸಂದರ್ಭದಲ್ಲಿ “ದಂಡುಪಾಳ್ಯ” ಗ್ಯಾಂಗ್ ನವರ ಸನ್ನಿವೇಶಗಳು ಸಹ ಬರುತ್ತದೆ. ಹಾಗಾಗಿ ಆ ಚಿತ್ರದಲ್ಲಿ ಅಭಿನಯಿಸಿದ್ದ ಕಲಾವಿದರು ಈ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಮೂರು ಹಾಡುಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚರಣ್ ಅರ್ಜುನ್ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಈ ಚಿತ್ರದ ಛಾಯಾಗ್ರಹಕರು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದ್ದ ನಿರ್ದೇಶಕ ಶ್ರೀನಿವಾಸರಾಜು, ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು.
ನನಗೆ ಶ್ರೀನಿವಾಸರಾಜು “ಕೋಟೆ” ಚಿತ್ರದಲ್ಲಿ ಅವಕಾಶ ನೀಡಿದ್ದರು. “ದಂಡುಪಾಳ್ಯ” ಚಿತ್ರದಲ್ಲೂ ನಟಿಸಿದ್ದೆ. ಈ ಚಿತ್ರದಲ್ಲಿ ನಾನು ಚಲಪತಿ ಹೆಸರಿನ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ಕುರಿತು ಇನ್ನೊಂದು ಹೆಮ್ಮೆಯ ವಿಷಯವೆಂದರೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಎಂಭತ್ತರ ದಶಕದಲ್ಲಿ ಸಂಗೀತ ನೀಡಿದ್ದ, ಜನಪ್ರಿಯ ತಮಿಳು ಚಿತ್ರದ ಗೀತೆಯೊಂದರ ಟ್ಯೂನ್ ಬಳಸಿಕೊಳ್ಳಲು ಶ್ರೀನಿವಾಸರಾಜು ಅವರಿಗೆ ಅವಕಾಶ ನೀಡಿದ್ದಾರೆ.
ಈ ಹಾಡು ಇಳಯರಾಜ ಅವರ ಅಭಿಮಾನಿಯಾಗಿರುವ ನನ್ನ ಜನಪ್ರಿಯ ಗೀತೆಯೂ ಹೌದು ಎಂದು ನಟ ರವಿಶಂಕರ್ ತಿಳಿಸಿದರು. ಕ್ಲೈಮ್ಯಾಕ್ಸ್ ಸಾಹಸ ಸನ್ನಿವೇಶವನ್ನು ಹನ್ನೆರಡು ದಿನಗಳ ಕಾಲ ಚಿತ್ರಿಸಿರುವುದು ಚಿತ್ರದ ವಿಶೇಷಗಳಲ್ಲೊಂದು ಎಂದರು ರವಿಶಂಕರ್.