ಪುನೀತ ಪರ್ವಕ್ಕೆ ಸೌತ್ ಇಂಡಿಯನ್ ಸ್ಟಾರ್ಸ್ ಆಗಮನ: ಅ.28 ಕ್ಕೆ ಅಪ್ಪು ಗಂಧದ ಗುಡಿ ರಿಲೀಸ್…

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿಜ ಜೀವನದ ಸ್ಟಾರ್ ಆಗಿ ಕಾಣಿಸಿಕೊಂಡಿರುವ ‘ಗಂಧದ ಗುಡಿ’ ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದೆ.

‘ಗಂಧದ ಗುಡಿ’ ಅಕ್ಟೋಬರ್ 28ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುನ್ನ ಅಕ್ಟೋಬರ್ 21ರ ಶುಕ್ರವಾರ ಚಿತ್ರದ ಫ್ರೀ ರಿಲೀಸ್ ಇವೆಂಟ್ ನಡೆಯಲಿದೆ.ಈ ಅಪರೂಪದ ಸಮಾರಂಭಕ್ಕೆ ‘ಪುನೀತ ಪರ್ವ’ ಎಂದು ಹೆಸರಿಡಲಾಗಿದೆ.

ಈ ಪುನೀತ ಪರ್ವ ಕಾರ್ಯಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದ್ದು, ಇದರ ಜೊತೆಗೆ ಭಾರತೀಯ ಚಿತ್ರರಂಗದ ತಾರೆಯರನ್ನು ಆಹ್ವಾನಿಸಲಾಗಿದೆ.

ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಮಂಗಳವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ಯುವ ರಾಜಕುಮಾರ್ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.

ಸೌತ್ ಇಂಡಿಯನ್ ಸ್ಟಾರ್ಸ್ ರಜನಿಕಾಂತ್, ಚಿರಂಜೀವಿ, ಸೂರ್ಯ ಸೇರಿದಂತೆ ಹಲವು ನಟರು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಪ್ಪು ಅವರಿಗೆ ಆತ್ಮೀಯರಾದ ತಮಿಳು ಹಾಗೂ ತೆಲುಗು ಚಿತ್ರರಂಗದ ನಟರು ಆಗಮಿಸಲಿದ್ದಾರೆ.

ಕಳೆದ ವಾರ ಅಪ್ಪು ‘ಗಂಧದ ಗುಡಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ದಾಖಲೆ ವೀಕ್ಷಣೆ ಕಂಡಿದೆ.

ಪುನೀತ್ ರಾಜ್‍ಕುಮಾರ್ ಅರಣ್ಯದ ಪ್ರಾಣಿ ಪಕ್ಷಿಗಳ ಬಗ್ಗೆ ವಿವರಣೆ ನೀಡುವುದರ ಜೊತೆ ಒಂದಷ್ಟು ಅಪರೂಪದ ಕ್ಷಣಗಳನ್ನು ಕಳೆದಿದ್ದಾರೆ. ಸಾಗರದ ಆಳದಲ್ಲೂ ಅಪ್ಪು ಈಜಿ ಅಲ್ಲಿನ ನಿಗೂಢ ಜಗತ್ತಿನ ಬಗ್ಗೆಯೂ ಹೇಳಿದ್ದಾರೆ. ಒಟ್ಟಾರೆ ಟ್ರೇಲರ್ ಗಂಧದ ಗುಡಿ ನೋಡಲೇಬೇಕೆಂಬ ಕುತೂಹಲ ಮೂಡಿಸಿದೆ.

ಅಪ್ಪು ಅವರು ಕಣ್ಮರೆಯಾಗಿ ಒಂದು ವರ್ಷ ಆಗುತ್ತಿರುವಾಗ ಅವರ ಪುಣ್ಯ ಸ್ಮರಣೆಯ ಒಂದು ದಿನ ಮುನ್ನ, ಅಕ್ಟೋಬರ್‌ 28ರಂದು ‘ಗಂಧದ ಗುಡಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿಜ ಜೀವನದ ಅಪ್ಪುವಾಗಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

Related Posts

error: Content is protected !!