ಇತ್ತೀಚೆಗಷ್ಟೇ ‘ಗಾಳಿಪಟ 2’ ಎಂಬ ಬ್ಲಾಕ್ಬಸ್ಟರ್ ಚಿತ್ರವನ್ನು ತಮ್ಮ ಸೂರಜ್ ಪ್ರೊಡಕ್ಷನ್ಸ್ನಡಿ ನಿರ್ಮಿಸಿದ್ದ ರಮೇಶ್ ರೆಡ್ಡಿ, ಇದೀಗ ಇನ್ನೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದಲ್ಲಿ, ಶಿವರಾಜಕುಮಾರ್ ಅಭಿನಯದಲ್ಲಿ ಅವರು ‘45’ ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಈಗ ಈ ಚಿತ್ರಕ್ಕೆ ಉಪೇಂದ್ರ ಸೇರ್ಪಡೆಯಾಗಿದ್ದು, ಅವರೂ ಇನ್ನೊಬ್ಬ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಶಿವಣ್ಣ ಮತ್ತು ಉಪೇಂದ್ರ ಜೊತೆಯಾಗಿ ಕೆಲಸ ಮಾಡುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ ‘ಓಂ’ ಚಿತ್ರದಲ್ಲಿ ಶಿವಣ್ಣ ಅವರನ್ನು ನಿರ್ದೇಶಿಸಿದ್ದರು ಉಪೇಂದ್ರ. ಆ ನಂತರ ಇಬ್ಬರೂ ‘ಪ್ರೀತ್ಸೇ‘ ಮತ್ತು ‘ಲವ-ಕುಶ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈಗ ದೊಡ್ಡ ಗ್ಯಾಪ್ನ ನಂತರ ಅವರಿಬ್ಬರೂ ‘45’ ಚಿತ್ರದಲ್ಲಿ ಮತ್ತೆ ಒಟ್ಟಾಗಿ ನಟಿಸಲಿದ್ದಾರೆ.
ಶಿವರಾಜಕುಮಾರ್ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಣೆಯಾದ ‘45’, ಈಗ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣವು ಡಿಸೆಂಬರ್ನಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಸಹ ಅವರೇ ಹೊತ್ತಿದ್ದಾರೆ. ಈಗಾಗಲೇ ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಚಿತ್ರದ ಆಡಿಯೋ ಹಕ್ಕುಗಳಿಗೆ ಭಾರೀ ಡಿಮ್ಯಾಂಡ್ ಉಂಟಾಗಿದೆ.