ಮರ್ಡರ್ ಲೈವ್ ನಲ್ಲಿ ಶರ್ಮಿಳಾ ಮಾಂಡ್ರೆ! ಹಾಲಿವುಡ್ ಶೈಲಿಯ ಕನ್ನಡ, ತಮಿಳು ಸಿನಿಮಾ…

ಕನ್ನಡತಿ ಶರ್ಮಿಳಾ ಮಾಂಡ್ರೆ ‘ಮಿರತ್ತಲ್’ ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ 10 ವರ್ಷಗಳ ನಂತರ ‘ಮರ್ಡರ್ ಲೈವ್’ ಎಂಬ ಹಾಲಿವುಡ್ ಶೈಲಿಯ ಕನ್ನಡ ಮತ್ತು ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
‘ಮರ್ಡರ್ ಲೈವ್’ ಒಂದು ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ‘ಬ್ಲೈಂಡ್ ಡೇಟ್’, ‘ಸ್ಕೈ ಹೈ’, ‘ಗ್ಲಿಚ್’ ಮುಂತಾದ ಹಾಲಿವುಡ್ ಚಿತ್ರಗಳನ್ನು ನಿರ್ದೇಶಿಸಿರುವ ನಿಕೋ ಮಾಸ್ತೋರಾಕಿಸ್ ಅವರ ಕಥೆಯನ್ನು ಆಧರಿಸಿದೆ.

ಸೈಕೋ ಕಿಲ್ಲರ್ ಮತ್ತು ನಾಲ್ವರು ಮಹಿಳೆಯರ ಸುತ್ತ ಸುತ್ತುವ ಈ ಚಿತ್ರದಲ್ಲಿ, ಕಷ್ಟದ ಪರಿಸ್ಥಿಯಲ್ಲಿ ಸಾಮಾನ್ಯ ಮನುಷ್ಯರೂ ಹೇಗೆ ಸಿಡಿದೆದ್ದು ಹೀರೋಗಳಾಗುತ್ತಾರೆ ಎಂದು ಹೇಳಲಾಗಿದೆ.


ಸೈಕೋ ಕಿಲ್ಲರ್ ಒಬ್ಬ ಜಗತ್ತಿನ ಯಾವುದೇ ಕಂಪ್ಯೂಟರ್ ಹ್ಯಾಕ್ ಮಾಡಿ, ಅದರ ಮೂಲಕ ಲೈವ್ ಆಗಿ ಕೊಲೆ ಮಾಡುವ ಕಥೆ ಇರುವ ಈ ಚಿತ್ರವನ್ನು ಸಂಪೂರ್ಣವಾಗಿ ಇಂಗ್ಲೆಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಸೂರ್ಯ ಅಭಿನಯದ ‘ಇಟಿ’ ಮತ್ತು ಶಿವಕಾರ್ತಿಕೇಯನ್ ಅಭಿನಯದ ‘ಡಾಕ್ಟರ್’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದ ವಿನಯ್ ರೈ, ಈ ಚಿತ್ರದಲ್ಲಿ ಬಹಳ ಕ್ಲಿಷ್ಟಕರವಾದ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಲವು ವಿಭಿನ್ನ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಕನ್ನಡತಿ ಶರ್ಮಿಳಾ ಮಾಂಡ್ರೆ, ಈ ದ್ವಿಭಾಷಾ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಇವರಿಬ್ಬರ ಜೊತೆಗೆ ಹಾಲಿವುಡ್ ನಟಿ ನವೋಮಿ ವಿಲ್ಲೋ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡಾಟ್‌ಕಾಮ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಿದ್ದು, ಮುರುಗೇಶ್ ನಿರ್ದೇಶನ ಮಾಡಿದ್ದಾರೆ. ಅಪಾರ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಅತ್ಯುನ್ನತ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗಿದೆ.

ಪ್ರಶಾಂತ್ ಡಿ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಮದನ್ ಅವರ ಸಂಕಲನವಿದೆ.
ಈಗಾಗಲೇ ‘ಮರ್ಡರ್ ಲೈವ್’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

Related Posts

error: Content is protected !!