ಜೇನುಗೂಡು ಸಿನಿಮಾ ಬ್ಯಾನರ್ ನಡಿ ಕೆ.ಎನ್.ಶ್ರೀಧರ್ ನಿರ್ಮಾಣ ಮಾಡಿರುವ ವಾಸಂತಿ ನಲಿದಾಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕೇಳ್ರಪ್ಪೋ ಕೇಳಿ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಈ ವೇಳೆ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ, ಒಂದೊಳ್ಳೆ ತಂಡ ಸೇರಿಕೊಂಡು ಸಿನಿಮಾ ಮಾಡಿದ್ದೇವೆ. ಒಂದು ವರ್ಷದ ಜರ್ನಿ ಇದು. ಯೂತ್ ಫುಲ್ ಎಂಟರ್ ಟ್ರೈನ್ಮೆಂಟ್ ಚಿತ್ರವಿದು. ಕಂಟೆಂಟ್ ತುಂಬಾ ಚೆನ್ನಾಗಿದೆ ಪ್ರತಿಯೊಬ್ಬರು ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡರು.
ನಿರ್ಮಾಪಕ ಕೆ.ಎನ್.ಶ್ರೀಧರ್ ಮಾತನಾಡಿ, ಸಿನಿಮಾದ ಕೌಂಟ್ ಡೌನ್ ಶುರುವಾಗಿದೆ. ಇನ್ನೂ 30 ದಿನಕ್ಕೆ ಸಿನಿಮಾ ಬೆಳ್ಳಿತೆರೆ ಮೇಲೆ ಇರುತ್ತದೆ. ರಾಜ್ಯಾದ್ಯಂತ ಸಿನಿಮಾವನ್ನು ಜಯಣ್ಣ ವಿತರಣೆ ಮಾಡುತ್ತಿದ್ದಾರೆ. ಚಂದ್ರಣ್ಣ, ಭೋಗಣ್ಣ ಜಯಣ್ಣ ನಮ್ಮ ಸಿನಿಮಾ ತಂಡದ ವತಿಯಿಂದ ಧನ್ಯವಾದ. ಮನೆ ಮಂದಿ ಕುಳಿತು ನೋಡುವ ಚಿತ್ರವಿದು. ಅಕ್ಟೋಬರ್ 14ರಂದು ಸಿನಿಮಾ ತೆರೆಗೆ ಬರ್ತಿದೆ ಪ್ರತಿಯೊಬ್ಬರು ಬೆಂಬಲ ಕೊಡಿ ಎಂದರು.
ಕಾಲೇಜ್ ಸ್ಟೋರಿ ಜೊತೆಗೆ ಒಂದೊಳ್ಳೆ ಪ್ರೇಮಕಥನ ಒಳಗೊಂಡಿರುವ ವಾಸಂತಿ ನಲಿದಾಗ ಸಿನಿಮಾಗೆ ರವೀಂದ್ರ ವೆಂಶಿ ಆಕ್ಷನ್ ಕಟ್ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್ ಶ್ರೀಧರ್ ನಾಯಕನಾಗಿ, ಭಾವನಾ ಶ್ರೀನಿವಾಸ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.
ಚಿತ್ರಕ್ಕೆ ಶ್ರೀಗುರು ಸಂಗೀತವಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣವಿದೆ. ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕರ ಮುನ್ನುಡಿ ಬರೆದಿರುವ ಚಿತ್ರತಂಡ ಮುಂದಿನ ಅಕ್ಟೋಬರ್ 14ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.