ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಪ್ರಭುದೇವಾ ಮೊದಲಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವ “ಲಕ್ಕಿ ಮ್ಯಾನ್” ಚಿತ್ರ ಈ ಶುಕ್ರವಾರ(ಸೆ.9) ರಾಜ್ಯಾದ್ಯಂತ ಅಲ್ಲದೆ ದೇಶ- ವಿದೇಶಗಳಲ್ಲೂ ಸಹ ಅದ್ದೂರಿಯಾಗಿ ತೆರೆಕಾಣಲಿದೆ. ತನ್ನ ಕೊನೇ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಭಗವಾನ್ ಮಹಾವಿಷ್ಣು ಅವತಾರದಲ್ಲಿ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷ.
ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಹಾಗೂ ರೋಶನಿ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಅಧಿಕಾರಿಗಳು ಸಹ ಮೆಚ್ಚಿಕೊಂಡಿದ್ದು, ಯಾವುದೇ ಕಟ್ಸ್ ಇಲ್ಲದೆ ‘ಯು’ ಪ್ರಮಾಣಪತ್ರ ನೀಡಿದ್ದಾರೆ. ಕಾಕತಾಳೀಯ ಎನ್ನುವಂತೆ ಹಿಂದೆ ಡಾ.ರಾಜ್ ಕುಮಾರ್ ಹಾಗೂ ಪುನೀತ್ ಅಭಿನಯಿಸಿದ್ದ ಭಕ್ತಪ್ರಹ್ಲಾದ ಚಿತ್ರವೂ ಸಹ ಸೆ.೯ರಂದೇ ತೆರೆಕಂಡಿತ್ತು.
ಅಣ್ಣಾವ್ರ ಮೇಲೆ ರಚಿಸಲಾಗಿರುವ ಪುನೀತ್ -ಪ್ರಭುದೇವಾ ಅಭಿನಯದ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಮೊದಲ ಬಾರಿಗೆ ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ಆಕ್ಷನ್ಕಟ್ ಹೇಳಿದ್ದಾರೆ. ತಮಿಳಿನ ಓಮೈ ಕಡವುಲೆ ಚಿತ್ರದ ರೀಮೇಕ್ ಆದ ಲಕ್ಕಿಮ್ಯಾನ್ ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ರಾಜ್, ಸುಧಾ ಬೆಳವಾಡಿ, ಮಾಳವಿಕಾ ನಟಿಸಿದ್ದಾರೆ.
ಪಿ.ಆರ್.ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ಅವರ ನಿರ್ಮಾಣದ ಈ ಚಿತ್ರಕ್ಕೆ ಕಾರ್ತಿಕೇಯನ್ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕೆಲಸಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿ೨ ವಿಜಯ್ ಮತ್ತು ವಿಕ್ಕಿ ಅವರ ಸಂಗೀತ ಸಂಯೋಜನೆ, ಧನಂಜಯ ರಂಜನ್ ಅವರ ಸಾಹಿತ್ಯವಿದೆ, ಜೀವಾಶಂಕರ್ ಅವರ ಛಾಯಾಗ್ರಹಣ, ಬಾಲಾಜಿ ಅವರ ಸಂಕಲನ, ಅಶ್ವಥ್ ಮಾರಿಮುತ್ತು ಅವರ ಕಥೆ, ಮಂಜು ಮಾಂಡವ್ಯ, ಸಂಪತ್ ಸಿರಿಮನೆ ಹಾಗೂ
ರಘುನಂದನ್ ಕಾನಡ್ಕ ಅವರ ಸಂಭಾಷಣೆ ಈ ಚಿತ್ರಕ್ಕಿದೆ.