ರುಬಿ ಫಿಲ್ಮಂಸ್ ನಡಿ ಮಾಜಿ ಶಾಸಕ ಇವಾನ್ ನಿಗ್ಲಿ ಕಥೆ ಬರೆದು ನಿರ್ಮಾಣ ಮಾಡಿರುವ ‘ಸೆಪ್ಟಂಬರ್ 13 ಸಿನಿಮಾ’ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಹೆಸರಾಂತ ನಿರ್ಮಾಪಕ ಡಾ.ರಾಜಾ ಬಾಲಕೃಷ್ಣನ್ ಈ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಂಕಲನ, ಛಾಯಾಗ್ರಾಹಣ ಜವಾಬ್ದಾರಿಯನ್ನೂ ನಿಭಾಯಿಸಿ ಸಿನಿಮಾದಲ್ಲಿ ಖಳನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳು ಚಿತ್ರತಂಡ ಮಾಧ್ಯಮದವರ ಮುಂದೆ ಹಾಜರಾಗಿತ್ತು. ಈ ವೇಳೆ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದೆ.
ಚಿತ್ರದ ನಿರ್ಮಾಪಕ ಇವಾನ್ ನಿಗ್ಲಿ ಮಾತನಾಡಿ, ಈ ಕಥೆ ಬರೆಯೋದಿಕ್ಕೆ ಕಾರಣ ಇದೆ. ನನಗೆ ಮೊದಲು ಕೊರೋನಾ ಬಂತು. ಆ ನಂತ್ರ ನನ್ನ ಪತ್ನಿ.. ಆ ಬಳಿಕ ನನ್ನ ಮಗನಿಗೆ ಬಂತು. ತುಂಬಾ ಸೀರೀಯಸ್ ಆಗಿಬಿಡ್ತು. ಈ ಸ್ಫೂರ್ತಿಯಿಂದ ಕಥೆ ಬರೆದಿದ್ದೇನೆ. ನಾನು ಕಿರುಚಿತ್ರಗಳು, ಧಾರಾವಾಹಿ ಮಾಡಿದ್ದೇನೆ. ನಾನು ಈ ಮೊದಲ ಮಲಯಾಳಂ, ತಮಿಳು ಸಿನಿಮಾದಲ್ಲಿ ನಟಿಸಿದ್ದೇನೆ. ಇದು ನನ್ನ ಮೂರನೇ ಚಿತ್ರ. ಈ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿರುವುದರ ಜೊತೆಗೆ ನಟನೆ ಕೂಡ ಮಾಡಿದ್ದೇನೆ ಎಂದು ತಿಳಿಸಿದರು.
ವಿನಯ ಪ್ರಸಾದ್ ಮಾತನಾಡಿ, ನರ್ಸ್ ಜೀವನ ಬಹಳ ಚಾಲೆಂಜಿಂಗ್. ಪ್ರತಿಯೊಬ್ಬರು ನರ್ಸ್ ಗಳನ್ನು ನಾವು ಭೇಟಿ ಮಾಡೇ ಇರ್ತಿವಿ. ಎಂತಹ ಚಾಲೆಂಜಿಂಗ್ ಅಂದ್ರೆ ಅವರು. ಪ್ರತಿ ನಿಮಿಷ, ರೋಗ ರುಜಿನ ಕೋಪ ಆತಂಕ ಇದರ ಜೊತೆಯಲಿ ಜೀವನ ಮಾಡ್ತಾರೆ. ಇದರ ಪ್ರಮುಖ ಭಾಗವೇ ರೋಗ ರುಜಿನ. ಅಂತಹವರು ತಮ್ಮ ಮನೆಗೆ ಹೋಗಿ ಹೇಗೆ ಜೀವನ ಮಾಡ್ತಾರೆ? ಹೇಗೆಲ್ಲಾ ಸಮಸ್ಯೆಗಳನ್ನು ಎದುರಿಸ್ತಾರೆ? ಅನ್ನೋದು ಚಿತ್ರದ ತಿರುಳು ಅಂತಾ ಹೇಳಿದರು.
ನಿರ್ದೇಶಕ ಡಾ.ರಾಜಾ ಬಾಲಕೃಷ್ಣನ್ ಮಾತನಾಡಿ, ಒಂದಷ್ಟು ಹಿರಿಯರು ಜೊತೆಗೆ ಒಂದಷ್ಟು ಹೊಸಬರು ಸೇರಿ ಸಿನಿಮಾ ಮಾಡಿದ್ದೇವೆ. ನಾನು ಕನ್ನಡ ಇಂಡಸ್ಟ್ರೀಗೆ ಹೊಸಬ. ಹೊಸಬರು ನನಗೆ ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತರು, ಇಡೀ ತಂಡಕ್ಕೆ ಧನ್ಯವಾದ ಎಂದರು.
ಕೋವಿಡ್ ಸಮಯದಲ್ಲಿ ಜಗತ್ತು ನಲುಗಿ ಹೋಗಿತ್ತು. ಈ ಸಮಯದಲ್ಲಿ ಸಮರ್ಪಣಾ ಭಾವದಿಂದ ದುಡಿದವರು ವೈದ್ಯರು. ಅದ್ರಲ್ಲಿಯೂ ನರ್ಸಿಂಗ್ ಸಮುದಾಯದ ಸೇವೆ ಗಣನೀಯ. ಇಂತಹ ನರ್ಸಿಂಗ್ ಜೀವನದ ಕಥೆಯನ್ನೊಳಗೊಂಡ ‘ಸೆಪ್ಟಂಬರ್ 13 ಸಿನಿಮಾ’ ಸಿನಿಮಾದಲ್ಲಿ ಹಿರಿಯ ಕಲಾವಿದರಾದ ವಿನಯ ಪ್ರಸಾದ್, ಜೈ ಜಗದೀಶ್, ಯಮುನಾ ಶ್ರೀನಿಧಿ ನಟಿಸಿದ್ದು, ಶ್ರೀಯಾರಿಧಿಬನ್ ನಾಯಕಿಯಾಗಿ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಉಳಿದಂತೆ ಒಂದಷ್ಟು ಯುವ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಶೀರ್ಘದಲ್ಲಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ.