ಕನ್ನಡದಲ್ಲಿ ಉತ್ತರ ಕರ್ನಾಟಕ ಸೊಗಡಿನ ಅನೇಕ ಕಥೆಗಳಿರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಪಕ್ಕಾ ದೇಸಿತನ ಹೊಂದಿರುವ, ರಗಡ್ ಕಥೆಯಲ್ಲೊಂದು ಮುದ್ದಾದ ಪ್ರೇಮಕಥೆ ಇಟ್ಟುಕೊಂಡು ಸೊಗಸಾದ ಸಿನಿಮಾ ಕಟ್ಟಿಕೊಡಲು ಹೊಸ ಪ್ರತಿಭಾವಂತರ ತಂಡವೊಂದು ಆಗಮಿಸಿದೆ. ಜಯ ಜಯ ಜಾನಕಿರಾಮ ಸಿನಿಮಾ ಮೂಲಕ ಜಯ ಸಾಧಿಸಲು ಹೊರಟಿದೆ
ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸ ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ ಪ್ರತಿಭಾವಂತ ಯುವ ನಿರ್ದೇಶಕರೊಬ್ಬರು ಎಂಟ್ರಿಯಾಗಿದ್ದಾರೆ. ಹೌದು, ಸಿದ್ಧಾರ್ಥ್ ಮರಡೆಪ್ಪ ಈಗಷ್ಟೇ ನಿರ್ದೇಶಕನ ಸ್ಥಾನ ಅಲಂಕರಿಸಿದ್ದಾರೆ. ಕನ್ನಡದ ಎವರ್ ಗ್ರೀನ್ ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ಅಭಿನಯದ ಹೊಸ ಚಿತ್ರದ ಮೂಲಕ. ಇಂಡಸ್ಟ್ರಿಗೆ ಬಂದಿದ್ದಾರೆ. ಅಂದಹಾಗೆ, ಸಿದ್ಧಾರ್ಥ್ ಮರಡೆಪ್ಪ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ‘ ಜಯ ಜಯ ಜಾನಕಿರಾಮ’ ಎಂಬ ಶೀರ್ಷಿಕೆ ಇಡಲಾಗಿದೆ.
ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರವಾದರೂ ಕನ್ನಡ ಸಿನಿಮಾರಂಗ ಅವರಿಗೆ ಹೊಸದೇನಲ್ಲ. ಮೂಲತಃ ಉತ್ತರ ಕರ್ನಾಟಕದವರಾದ ಸಿದ್ಧಾರ್ಥ್, ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ‘ಮಾಸ್ತಿಗುಡಿ’, ‘ಮೈನಾ’, ‘ದೃಶ್ಯ 1’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಸೋಸಿಯೇಟ್ ಆಗಿ , ಕೋ ಡೈರೆಕ್ಟರ್ ಆಗಿ ದುಡಿದಿದ್ದಾರೆ. ಆ ಅನುಭವ ಈಗ ಚೊಚ್ಚಲ ನಿರ್ದೇಶನಕ್ಕೆ ಕಾರಣವಾಗಿದೆ.
ಇದೊಂದು ಉತ್ತರ ಕರ್ನಾಟಕ ಭಾಗದ ಕಥೆಯಾಗಿದ್ದು, ಬಹುತೇಕ ಅಲ್ಲಿನ ಭಾಷೆಯೇ ಸಿನಿಮಾದ ಜೀವಾಳ. ಈಗಿನ ಟ್ರೆಂಡ್ ಕಥೆ ಚಿತ್ರದಲ್ಲಿದೆ. ಮಾಸ ಫೀಲ್ ಇರುವ ಸಿನಿಮಾದಲ್ಲಿ ಒಂದು ಮುದ್ದಾದ ಪ್ರೇಮ ಕಥೆ ಇದೆ. ಅಲ್ಲಿ ಂತೆ, ಬಾಂಧವ್ಯ, ದ್ವೇಷ, ಸ್ನೇಹ, ನಿಷ್ಕಲ್ಮಷ ಪ್ರೀತಿ ಗೀತಿ ಇತ್ಯಾದಿ ಕೂಡ ಸಿನಿಮಾದಲ್ಲಿದೆ.
ಒಟ್ಟಾರೆ, ಮಕ್ಕಳಿಂದ ಹಿಡಿದು ವಯಸ್ಸಿನವರಿಗೂ ಈ ಸಿನಿಮಾ ಇಷ್ಟವಾಗುತ್ತೆ. ಇಲ್ಲಿ ಕಥೆ, ಪಾತ್ರಗಳು ಮತ್ತು ಚಿತ್ರಕಥೆ ಪ್ರಮುಖ ಪಾತ್ರವಹಿಸುತ್ತವೆ ಎನ್ನುತ್ತಾರೆ ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ.
ಇನ್ನು ಆದಿತ್ಯ ಶಶಿಕುಮಾರ್ ಅವರಿಗೆ ನಾಯಕಿಯಾಗಿ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಅವರ ಅಪೂರ್ವ ಮೂಲಕ ಕಾಲಿಟ್ಟ ಅಪೂರ್ವ, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಿ ಪಕ್ಕಾ ದೇಸಿ ಹುಡುಗಿಯಾಗಿ ಅವರು ಸ್ಕ್ರೀನ್ ಮೇಲೆ ಎಂಟ್ರಿಯಾಗುತ್ತಿದ್ದಾರೆ. ಆದಿತ್ಯ ಕೂಡ ಸಿನಿಮಾ ಕಥೆ, ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ.
ಚಿತ್ರದಲ್ಲಿ ಮತ್ತೊಂದು ಹೈಲೆಟ್ ಅಂದರೆ, ರವಿಶಂಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಲ್ಲಿ ಖಳನಟರಾಗಿ ಅಬ್ಬರಿಸುತ್ತಿದ್ದಾರೆ. ಹೀರೋ ತಾಯಿಯಾಗಿ ಶ್ರುತಿ ನಟಿಸುತ್ತಿದ್ದಾರೆ. ತಾರಾ ಕೂಡ ನಾಯಕಿಯ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಹಲವು ಕಲಾವಿದರೂ ಇದ್ದಾರೆ.
ಇನ್ನು, ಕಥೆ ಮತ್ತು ಕಲಾವಿದರು ಹೇಗೆ ಸ್ಟ್ರಾಂಗ್ ಇದೆಯೋ ಹಾಗೆಯೇ ತಾಂತ್ರಿಕ ವರ್ಗವೂ ಇಲ್ಲಿ ಸ್ಟ್ರಾಂಗ್ ಆಗಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಡಾ.ರವಿ ವರ್ಮ ಸ್ಟಂಟ್ ಮಾಡಿಸುತ್ತಿದ್ದಾರೆ.
ಉದಯ್ ಬಲ್ಲಾಳ್ ಕ್ಯಾಮೆರಾ ಹಿಡಿದರೆ, ಮೋಹನ್ ಕೊಲ್ಲಾಪುರ ಸಂಕಲನ ಮಾಡುತ್ತಿದ್ದಾರೆ. ಯೋಗರಾಜಭಟ್, ನಾಗೇಂದ್ರಪ್ರಸಾದ್ ಮತ್ತು ಗೌಸ್ ಪೀರ್ ಗೀತೆ ಬರೆಯುತ್ತಿದ್ದಾರೆ. ಸದ್ಯ ಚಿತ್ರೀಕರಣ ಜೋರಾಗಿ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ.