ಆರ್ಕೇಸ್ಟ್ರಾದಲ್ಲಿ ಡಾಲಿಯ ಹಾಡು-ಪಾಡು! ಸಿನಿಮಾ ಟ್ರೇಲರ್ ರಿಲೀಸ್…

Share on facebook
Share on twitter
Share on linkedin
Share on whatsapp
Share on telegram

ಗಣೇಶನ ಹಬ್ಬ, ಕನ್ನಡ ರಾಜ್ಯೋತ್ಸವ, ಅಣ್ಣಮ್ಮ, ಮದುವೆ ಹೀಗೆ ಯಾವುದೇ ಕಾರ್ಯಕ್ರಮಗಳಲ್ಲಿ ಜನಪ್ರಿಯ ಕಾರ್ಯಕ್ರಮ “ಆರ್ಕೇಸ್ಟ್ರಾ” ಇದ್ದೆ ಇರುತ್ತದೆ.

ಇಂತಹ “ಆರ್ಕೇಸ್ಟ್ರಾ” ಕುರಿತಾಗಿ ಚಿತ್ರವೊಂದು ನಿರ್ಮಾಣವಾಗಿ, ತೆರೆಗೆ ಬರಲು ಸಿದ್ದವಾಗಿದೆ. ಮೈಸೂರು ಎಂಬ ಅಡಿಬರಹ ಈ ಚಿತ್ರಕ್ಕಿದೆ. ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದ್ದು, ನೋಡಿದವರು ಸೂಪರ್ ಎನ್ನುತ್ತಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ನಟನಾಗಿ ಜನರ ಮನಗೆದ್ದಿರುವ ಡಾಲಿ ಧನಂಜಯ, ರಘು ದೀಕ್ಷಿತ್ ಸಂಗೀತ ನೀಡಿರುವ ಈ ಚಿತ್ರದ ಎಂಟು ಹಾಡುಗಳನ್ನು ಬರೆದಿದ್ದಾರೆ. ಮೊದಲ ಬಾರಿಗೆ ಒಂದು ಚಿತ್ರದ ಅಷ್ಟು ಹಾಡುಗಳನ್ನು ಡಾಲಿ ರಚಿಸಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಮೈಸೂರಿನ ಹುಡುಗರೆಲ್ಲಾ ಸೇರಿ ನಿರ್ಮಾಣ ಮಾಡಿದ್ದ “ಬಾರಿಸು ಕನ್ನಡ ಡಿಂಡಿಮವ” ಹಾಡು ತುಂಬಾ ಜನಪ್ರಿಯವಾಯಿತು. ಈಗ ಅದೇ ತಂಡ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ನಾನು ಮೊದಲು ಮೈಸೂರಿನ ನೇತ್ರಣ್ಣ ಹಾಗೂ ಕೃಪಾಕರ್, ಸೇನಾನಿ ಅವರನ್ನು ನೆನೆದು ಮಾತು ಆರಂಭಿಸುತ್ತೇನೆ. ಮೈಸೂರಿನಲ್ಲಿ ನಮ್ಮದೊಂದು ತಂಡ. ಗೆಳೆಯರಿಗೆಲ್ಲಾ ರಂಗಭೂಮಿಯಲ್ಲಿ ಆಸಕ್ತಿ. ‌ಧನಂಜಯ ನನಗೆ ಕಾಲೇಜಿನಲ್ಲಿ ಸೀನಿಯರ್. ಆಗಿನಿಂದಲೂ ಗೆಳೆಯ ಮತ್ತು ಸಹಕಾರ ನೀಡಿದವ. “ಮೈಸೂರು” ಆರ್ಕೇಸ್ಟ್ರಾ ತುಂಬಾ ಜನಪ್ರಿಯ. ಈ ಕುರಿತು ಕಥೆ ಮಾಡಿ‌ ಸಿನಿಮಾ ಮಾಡಬೇಕೆಂದು ಕನಸು. ಕೆಲವು ಗೆಳೆಯರ ಸಹಾಯದಿಂದ ಚಿತ್ರ ಆರಂಭಿಸಿದ್ದೆವು.‌ ಬೆಂಗಳೂರಿನ ಗಾಂಧಿನಗರ ಸಿನಿಮಾದವರಿಗೆ ಹೆಸರುವಾಸಿ. ಹಾಗೆ, ಮೈಸೂರಿನ ಗಾಂಧಿನಗರ “ಆರ್ಕೆಸ್ಟ್ರಾ” ದವರಿಗೆ ಹೆಸರುವಾಸಿ. ಅಲ್ಲಿ ಸಂಪರ್ಕ ಮಾಡಿ ಎಲ್ಲೆಲ್ಲಿ “ಆರ್ಕೇಸ್ಟ್ರಾ” ನಡೆಯುತ್ತದೆ? ಎಂಬ ಮಾಹಿತಿ ಪಡೆದು, ಅಲ್ಲೇ ಹೋಗಿ ನೈಜವಾಗಿ ಚಿತ್ರೀಕರಣ ಮಾಡುತ್ತಿದ್ದೆವು. ಒಂದು ನೈಜತೆಗಾಗಿ, ಮತ್ತೊಂದು ಸೆಟ್ ಹಾಕುವಷ್ಟು ಹಣವಿರಲಿಲ್ಲ. “ಆರ್ಕೇಸ್ಟ್ರಾ” ಹಾಡುಗಾರನಾಗಬೇಕೆಂಬ ಆಸೆಹೊತ್ತ ಹುಡುಗನೊಬ್ಬನ ಸುತ್ತ ಹೆಣೆದಿರುವ ಕಥೆಯಿದು. ಪೂರ್ಣ ಈ ಚಿತ್ರದ ನಾಯಕ. ರಾಜಲಕ್ಷ್ಮೀ ನಾಯಕಿ. ದಿಲೀಪ್ ರಾಜ್,
ನಾಗಭೂಷಣ್, ಮಹೇಶ್ ಮುಂತಾದ ರಂಗಭೂಮಿ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಜೋಸಫ್ ಛಾಯಾಗ್ರಹಣ ಮಾಡಿದ್ದಾರೆ. ಡಾಲಿ ಎಲ್ಲಾ ಹಾಡುಗಳನ್ನು ಬರೆದಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ. Krg ಸ್ಟುಡಿಯೋಸ್ ಹಾಗೂ ಡಾಲಿ ಪಿಕ್ಚರ್ಸ್ ನಮ್ಮ ಚಿತ್ರವನ್ನು ಅರ್ಪಿಸುತ್ತಿದ್ದಾರೆ ಎಂದು ನಿರ್ದೇಶಕ ಸುನೀಲ್ ಮಾಹಿತಿ ನೀಡಿದರು.

ಮೈಸೂರಿನ ಕಲಾಮಂದಿರ ಹಾಗೂ ರಂಗಾಯಣದ ಸುತ್ತ ನಾವು ಕಥೆಯ ಬಗ್ಗೆ ಮಾತನಾಡುತ್ತಾ ತಿರುಗುತ್ತಿದಾಗ, ಅದನ್ನು ಗಮನಿಸಿದ ಕೃಪಾಕರ್, ಸೇನಾನಿ ಅವರು ತಮ್ಮದೇ ಕ್ಯಾಮೆರಾ ಹಾಗೂ ಎಡಿಟಿಂಗ್ ಸೆಟಪ್ ಹಾಗೂ ಜೋಸೆಫ್ ಎಂಬ ಛಾಯಾಗ್ರಾಹಕನನ್ನು ನೀಡಿ ನಮಗೆ ಸಹಾಯ ಮಾಡಿದರು. ಚಿತ್ರೀಕರಣ ತಡವಾದರೆ ಧನಂಜಯ ಬೇಗ ಶುರುಮಾಡುವಂತೆ ಹುರಿದುಂಬಿಸುತ್ತಿದ್ದರು. ಸಂಗೀತ ನಿರ್ದೇಶಕ ರಘದೀಕ್ಷಿತ್ ನಮ್ಮ ಸಹಾಯಕ್ಕೆ ನಿಂತರು. ಈಗ ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬಿಡುಗಡೆಗೆ ಬೇಕಾದ ಅನುಕೂಲ ಮಾಡಿಕೊಡುತ್ತಿದ್ದಾರೆ. ಎಲ್ಲರಿಗೂ ಧನ್ಯವಾದ.

ನಾನು ಮೂಲತಃ ರಂಗಭೂಮಿಯವನು. “ಆರ್ಕೇಸ್ಟ್ರಾ” ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. ಯುವಕರ ತಂಡದ ಶ್ರಮದಿಂದ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರಕೂಡ ಚೆನ್ನಾಗಿದೆ ಎಂದರು ನಟ ದಿಲೀಪ್ ರಾಜ್.

ನಾನು ಮೈಸೂರಿನವನು. ನಟ ನಾಗಭೂಷಣ್ ಮೂಲಕ ಈ ತಂಡದ ಪರಿಚಯವಾಯಿತು. ನಿರ್ದೇಶಕ ಸುನೀಲ್ ಪೆನ್ ಡ್ರೈವ್ ಮೂಲಕ ಈ ಚಿತ್ರದ ಕಥೆ ಕಳಿಸಿದ್ದರು. ನೋಡಿ ಕೆಲಸ ಶುರು ಮಾಡಿದೆ. ಮೈಸೂರಿನ ನೇತ್ರಣ್ಣ ಅವರ ಜಾಗವೇ ನಮ್ಮ ಆಫೀಸ್. ಡಾಲಿ ಬರೆದ ಎರಡು ಸಾಲುಗಳು ನನಗೆ ಇಷ್ಟವಾಯಿತು. ವಿಶೇಷವೆಂದರೆ ಈ ಚಿತ್ರದ ಎಂಟು ಹಾಡುಗಳನ್ನು ಡಾಲಿ ಅವರೆ ಬರೆದಿದ್ದಾರೆ. ಹಣ ಪಡೆಯದೆ
ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತು ಕೊಂಡಿದ್ದೇನೆ. ಹಾಗಾಗಿ ನನ್ನನ್ನು ನಿರ್ಮಾಪಕ ಅಂತ ನಿರ್ಧರಿಸಿದ್ದಾರೆ ಎಂದರು ರಘು ದೀಕ್ಷಿತ್.

ನಾವೆಲ್ಲಾ ಮೈಸೂರಿನ ಕಾಲೇಜ್ ನಲ್ಲಿ ನಾಟಕ ಮಾಡಬೇಕಾದರೆ, ಬೀಳುತ್ತಿದ್ದ ವಿಸಿಲ್ ಗೆ ನಮ್ಮ ತಲೆ ತಿರುಗುತ್ತಿತ್ತು. ಆಮೇಲೆ ಸಿನಿಮಾ ನಟನೆಗೆ ಬಂದ ಮೇಲೆ ವಾಸ್ತವ ಅರ್ಥವಾಯಿತು. ಆನಂತರ ಮತ್ತೆ ಜನ ಕೈ ಹಿಡಿದರು. ನನ್ನ ಮೊದಲ ದಿನಗಳಿಂದಲೂ ನನ್ನ ಸ್ನೇಹಿತರು ನನ್ನ ಜೊತೆ ಇದ್ದಾರೆ. ನಾನು ಅವರ ಜೊತೆ ಇರುತ್ತೇನೆ . ನಮ್ಮೊಂದಿಗೆ ಕೆ.ಆರ್.ಜಿ ಸ್ಟುಡಿಯೋಸ್ ಅವರು ಇದ್ದಾರೆ ಎಂದರು ಡಾಲಿ ಧನಂಜಯ.

ಸಿನಿಮಾ ಚೆನ್ನಾಗಿದೆ. ಆತುರ ಪಟ್ಟು ಬಿಡುಗಡೆ ಮಾಡುವುದಿಲ್ಲ. ಗಣೇಶನ ಹಬ್ಬದಿಂದ ರಾಜ್ಯೋತ್ಸವದ ತನಕ
” ಆರ್ಕೇಸ್ಟ್ರಾ ” ಸೀಸನ್ ಆ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದರು ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ. ಯೋಗಿ.ಜಿ.ರಾಜ್ ಸಹ ಚಿತ್ರತಂಡಕ್ಕೆ ಶುಭ ಕೋರಿದರು.

Related Posts

error: Content is protected !!