ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿರುವ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಸಿನಿಮಾ ನಿರ್ದೇಶಕನಾಗುವ ಆಸೆಹೊತ್ತ ಮಧ್ಯಮವರ್ಗದ
ಯವಕನೊಬ್ಬನ ಸುತ್ತ ನಡೆಯುವ ಕಥೆ ಇದು. ಇದರಲ್ಲಿ ನಾನು ಗಿರಿಕೃಷ್ಣ ಎಂಬ ಪಾತ್ರ ಮಾಡಿದ್ದೀನಿ. ಗಿರಿ ಅಂದರೆ ನಾನೊಬ್ಬನ ಹೆಸರಲ್ಲ. ಹೀರೋಯಿನ್ ಹೆಸರು ಗಿರಿಜಾ ಥಾಮಸ್ ಹಾಗೂ ವಿಲನ್ ಹೆಸರು ಗಿರಿ ಅಂತ. ಹೀಗೆ ನಮ್ಮ ಚಿತ್ರದಲ್ಲಿ ಹಲವು ಗಿರಿಗಳ ಸಂಗಮವಾಗಿದೆ.
ಸಿನಿಮಾ ಮಾಡಲು ಹೊರಟಿರುವ ಅನೇಕರ ಕಥೆಯಿದು. ಅದ್ಬುತವಾದ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜೂನ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎರಡು ಗಂಟೆಳ ಕಾಲ ಸಂಪೂರ್ಣ ಮನೋರಂಜನೆಯಿರುವ ಸಿನಿಮಾ ನಮ್ಮದು. ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು ರಿಷಭ್ ಶೆಟ್ಟಿ.
ನಮ್ಮ ಚಿತ್ರತಂಡದ ಸಹಕಾರದಿಂದ ಚೆನ್ನಾಗಿ ಬಂದಿದೆ. ನಾನು ಹಾಗೂ ರಿಷಭ್ “ಕಥಾಸಂಗಮ” ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ಗಿರಿಕೃಷ್ಣ ಈ ಚಿತ್ರದ ಕಥೆ ಬರೆದಿದ್ದರು. ಆನಂತರ ನಾನು ಹಾಗೂ ಅನಿರುದ್ಧ್ ಮಹೇಶ್ ಸೇರಿ ಈ ಚಿತ್ರ ನಿರ್ದೇಶನ ಮಾಡಿದ್ದೇವೆ ಎಂದರು ಕರಣ್ ಅನಂತ್ . ಮತ್ತೊಬ್ಬ ನಿರ್ದೇಶಕ ಅನಿರುದ್ಧ್ ಮಹೇಶ್ ಚಿತ್ರದ ಕುರಿತು ಮಾತನಾಡಿದರು.
ನಾನು ಈ ಚಿತ್ರದಲ್ಲಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ನಟಿಯಾಗಬೇಕೆಂಬ ಆಸೆ ಹೊತ್ತ ಹುಡುಗಿ. ತಾಯಿ ಇರುವುದಿಲ್ಲ. ತಂದೆ ಹಾಗೂ ಅಣ್ಣ ಇರುತ್ತಾರೆ ಎಂದು ನಾಯಕಿ ರಚನಾ ಇಂದರ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
ನನ್ನ ಪಾತ್ರ ಕೂಡ ಚೆನ್ನಾಗಿದೆ. ಖುಷಿ ಜೋಕುಮಾರಸ್ವಾಮಿ ನನ್ನ ಪಾತ್ರದ ಹೆಸರು ಎಂದರು ನಟಿ ತಪಸ್ವಿನಿ.
ನಾನು ಈ ಹಿಂದೆ ಜೋಕುಮಾರಸ್ವಾಮಿ ನಾಟಕದಲ್ಲಿ ಅಭಿನಯಿಸಿದ್ದೆ.ಇದರಲ್ಲೂ ಅದೇ ಹೆಸರು . ಆದರೆ ಮಂತ್ರಿಯಾಗಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ ನಟ ದಿನೇಶ್ ಮಂಗಳೂರು.
ನಾನು ಎಲ್ಲಾ ಜವಾಬ್ದಾರಿಯನ್ನು ರಿಷಭ್ ಅವರಿಗೆ ನೀಡಿದ್ದೀನಿ. ಅವರ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ಜಯಣ್ಣ ಈ ಚಿತ್ರದ ಹಂಚಿಕೆದಾರರು. ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಸಂದೇಶ್ ಎನ್.
ರಿಷಭ್ ಶೆಟ್ಟಿ, ರಚನ ಇಂದರ್, ತಪಸ್ವಿನಿ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.
ರಂಗನಾಥ್ – ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಭರತ್ ದೀಪ್ ಅವರ ಸಂಕಲನ ಈ ಚಿತ್ರಕ್ಕಿದೆ.