ಹೊಸಬರು ದಿಲ್ ಖುಷ್! ಬ್ರಾಹ್ಮಿ ಮುಹೂರ್ತಕ್ಕೆ ಹೊಸ ಚಿತ್ರ ಶುರು…

ಸೂರ್ಯೋದಯಕ್ಕೂ ಪೂರ್ವದಲ್ಲಿ ಬರುವ ಸಮಯವನ್ನು ಬ್ರಾಹ್ಮಿ ಮುಹೂರ್ತ ಎನ್ನುತ್ತಾರೆ. ಆ ಸಮಯದಲ್ಲಿ ಮಾಡುವ ಎಲ್ಲಾ ಕೆಲಸಗಳು ಉತ್ತಮ ಫಲ ಕೊಡುತ್ತದೆ ಎಂಬ ನಂಬಿಕೆಯಿದೆ.‌

ಇದೇ ನಂಬಿಕೆಯೊಂದಿಗೆ ” ದಿಲ್ ಖುಷ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಶ್ರೀ ವರಸಿದ್ದಿ ವಿನಾಯಕ‌ ವೆಂಕಟೇಶ್ವರ ಮಂದಿರದಲ್ಲಿ ನಡೆದಿದೆ.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ‌ಪ್ರವೀಣ್ ಹಾಗೂ ಪ್ರಭಾ ಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಮೋದ್ ಜಯ ನಿರ್ದೇಶಿಸುತ್ತಿದ್ದಾರೆ.

ನಾನು ಸಿಂಪಲ್ ಸುನಿ ಅವರ ಬಳಿ ಕೆಲಸ ಮಾಡಿದ್ದೀನಿ. “ಬಜಾರ್” ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದೇನೆ‌. “ದಿಲ್ ಖುಷ್” ನನ್ನ ಪ್ರಥಮ ನಿರ್ದೇಶನದ ಚಿತ್ರ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ನನ್ನ ಜೀವನದ ಕೆಲವು ಅನುಭವಗಳೊಂದಿಗೆ, ನಾನು‌ ಕಂಡ ಕೆಲವು ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ತೊಂಭತ್ತರಷ್ಟು ಭಾಗ ಮನೋರಂಜನೆ ಇದ್ದರೆ, ಹತ್ತು ಭಾಗದಷ್ಟು ಭಾವನಾತ್ಮಕ ಸನ್ನಿವೇಶಗಳಿರುತ್ತದೆ. ಈ ತಿಂಗಳ ಹದಿನೈದರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಶನಿವಾರ ಸಂತೆಯಲ್ಲಿ ಚಿತ್ರೀಕರಣ ನಡೆಯಲಿದೆ. ಕ್ಲೈಮ್ಯಾಕ್ಸ್ ನೋಡಿದ ಪ್ರೇಕ್ಷಕನ ಕಣ್ಣಂಚಿನಲ್ಲಿ ನೀರು ಬರುವುದು ಖಂಡಿತಾ ಎನ್ನುತ್ತಾರೆ ನಿರ್ದೇಶಕ ಪ್ರಮೋದ್ ಜಯ.

ನಾಟಕ, ಧಾರಾವಾಹಿ, ಕಿರುಚಿತ್ರ ಹಾಗೂ ಹಿರಿತೆರೆಯ ಕೆಲವು ಚಿತ್ರಗಳಲ್ಲಿ‌ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಸದಾ ಲವಲವಿಕೆಯಿಂದಿರುವ ಹುಡುಗನ ಪಾತ್ರ ನನ್ನದು ಎಂದರು ನಾಯಕ ರಂಜಿತ್.

ಧಾರಾವಾಹಿಯಲ್ಲಿ ‌ನಟಿಸಿದ್ದ ನನಗೆ ಇದು ಮೊದಲ ಚಿತ್ರ. ಈಗಿನ ಕಾಲದ ಹುಡುಗಿಯರು ಹೇಗಿರುತ್ತಾರೊ, ಅದೇ ರೀತಿಯಿರುವ ಹುಡುಗಿಯ ಪಾತ್ರ ನನ್ನದು. ನಿರ್ದೇಶಕರು ಹೇಳಿದ ಕಥೆ ಕೇಳೀ ಖುಷಿಯಾಯಿತು‌ ಎನ್ನುತ್ತಾರೆ ನಾಯಕಿ ಸ್ಪಂದನ ಸೋಮಣ್ಣ.

ನಿರ್ದೇಶಕರು ಹೇಳಿದರು, ಇದೊಂದು ರೊಮ್ಯಾಂಟಿಕ್ ಕಾಮಿಡಿ ಅಂತ. ರೊಮ್ಯಾಂಟಿಕ್ ಗೆ ನಾಯಕ, ನಾಯಕಿ ಇದ್ದಾರೆ. ಕಾಮಿಡಿ ಮಾಡಲು ನಾನು, ರಂಗಾಯಣ ರಘು ಹಾಗೂ ರಘು ರಮಣಕೊಪ್ಪ ಇದ್ದೇವೆ ಎಂದರು ನಟ ಧರ್ಮಣ್ಣ.

“ಯಜಮಾನ”, ” ಅವನ್ನೇ ಶ್ರೀಮನ್ನಾರಾಯಣ” ಚಿತ್ರಗಳಲ್ಲಿ ನನ್ನ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದರು . ಈ ಚಿತ್ರದಲ್ಲೂ ಒಳ್ಳೆಯ ಪಾತ್ರವಿದೆ ಎಂದರು ನಟ ಸೂರ್ಯಪ್ರವೀಣ್.

ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಟ ರಘು ರಮಣಕೊಪ್ಪ.

ಸಂಗೀತ ನಿರ್ದೇಶಕ ಪ್ರಸಾದ್ ಶೆಟ್ಟಿ, ಛಾಯಾಗ್ರಾಹಕ ನಿವಾಸ್ ನಾರಾಯಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದರು.

Related Posts

error: Content is protected !!