ಜೂನ್ 24ಕ್ಕೆ ತ್ರಿವಿಕ್ರಮನ ಪರಾಕ್ರಮ! ವಿಕ್ರಮ್ ಬರ್ತಾನೆ‌ ದಾರಿ ಬಿಡಿ…

ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ” ತ್ರಿವಿಕ್ರಮ ” ಚಿತ್ರ ಜೂನ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಿಡುಗಡೆ ಘೋಷಣೆಗೆ ತಾರಾ, ನಟರಾದ ಮನುರಂಜನ್, ಸಾಧುಕೋಕಿಲ, ಶರಣ್, ಆದಿ ಲೋಕೇಶ್, ನಿರ್ದೇಕರಾದ ಶಿವಮಣಿ, ಸಂತೋಷ್ ಆನಂದರಾಮ್, ಚೇತನ್ ಕುಮಾರ್ ಮುಂತಾದ ಗಣ್ಯರು ಸಾಕ್ಷಿಯಾದರು.

ನಮ್ಮ ಚಿತ್ರ ಪೂರ್ಣವಾಗಿ ಮೂರು ವರ್ಷವಾಯಿತು. ಕೋವಿಡ್ ಕಾರಣದಿಂದ ತಡವಾಯಿತು. ಈ ಸಮಯದಲ್ಲಿ ನಾನು ಪುನೀತ್ ಸರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಈ ಚಿತ್ರದ ಕಥೆ ಅವರಿಗೆ ಹೇಳಿದ್ದೆ. ಕೇಳಿ ಖುಷಿ ಪಟ್ಟಿದ್ದರು. ನಾನು ಒಂದು ಹಾಡು ಹಾಡುತ್ತೀನಿ ಅಂದಿದ್ದರು. ನೀನು ಚೆನ್ನಾಗಿ ಡ್ಯಾನ್ಸ್ ಮಾಡಬೇಕು. ಇಲ್ಲದಿದ್ದರೆ ಹೊಡೀತಿನಿ ಅಂದಿದ್ದರು ಪ್ರೀತಿಯಿಂದ. ಅವರು ಇಲ್ಲ ಅಂತ ಹೇಳಲ್ಲ. ಇಲ್ಲೇ ಇದ್ದಾರೆ. ಈ ಚಿತ್ರದ ಕಥೆ ನಾನು ನಮ್ಮ ತಂದೆಯವರಿಗೂ ಪೂರ್ತಿ ಹೇಳಿಲ್ಲ. ಕಥೆ ಗೊತ್ತಿರುವುದು ನನಗೆ, ಅಪ್ಪು ಸರ್ ಗೆ ಹಾಗೂ ಶಿವಣ್ಣ ಅವರಿಗೆ. ನಾನು ರವಿಚಂದ್ರನ್ ಅವರ ಮಗ ಹೌದು. ಆದರೆ ಚಿತ್ರರಂಗಕ್ಕೆ ನಾಯಕನಾಗಿ ಹೊಸಬ. ನಮ್ಮ ಚಿತ್ರ ನೋಡಿ ಹಾರೈಸಿ. ಅವಕಾಶ ನೀಡಿದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ನಾಯಕ ವಿಕ್ರಮ್ ರವಿಚಂದ್ರನ್.

ವಿಕ್ರಮ್ ಅವರ ನಟನೆಗೆ ನೂರಕ್ಕೆ ಸಾವಿರ ಅಂಕ ಕೊಡಬಹುದು. ಮಧ್ಯಮರ್ಗದ ಹುಡುಗನಾಗಿ ವಿಕ್ರಮ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗ, ಹೈ ಕ್ಲಾಸ್ ಫ್ಯಾಮಿಲಿ ಹುಡುಗಿಯನ್ನು ಏಕೆ ಲವ್ ಮಾಡಬಾರದು? ಎಂಬ ವಿಷಯವನ್ನು ಈ ಚಿತ್ರದಲ್ಲಿ ಹೇಳ ಹೊರಟಿದ್ದೇನೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಅಮ್ಮನ ಕುರಿತಾದ ಹಾಡು ಈಗಾಗಲೇ ಜನಮನ ಗೆದ್ದಿದೆ.
ಚಿತ್ರಕ್ಕೆ ನಿರ್ಮಾಪಕ ಸೋಮಣ್ಣನವರ ಸಹಕಾರ ಅಪಾರ. ಜೂನ್ 24 ಚಿತ್ರ ತೆರೆಗೆ ಬರಲಿದೆ. ಇದು ನನ್ನ ಮೂರನೇ ಚಿತ್ರ. ಹಿಂದಿನ ಚಿತ್ರಗಳಿಗೆ ತಾವು ನೀಡಿದ ಪ್ರೋತ್ಸಾಹವನ್ನು ಈ ಚಿತ್ರಕ್ಕೂ ಮುಂದುವರಿಸಿ ಎಂದರು ನಿರ್ದೇಶಕ ಸಹನಾಮೂರ್ತಿ.

ನಿರ್ದೇಶಕ ಸಹನಾಮೂರ್ತಿ ನನ್ನ ಸ್ನೇಹಿತ. ಆತ ಈ ಚಿತ್ರದ ಕಥೆ ಸಿದ್ದಮಾಡಿಕೊಂಡು ಅನೇಕರ ಹತ್ತಿರ ಹೇಳುತ್ತಿದ್ದ. ಕೊನೆಗೆ‌ ನಾನು ಕೇಳಿದ್ದೆ. ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಹಾಗಾಗಿ ನಾನು ಸಿನಿಮಾ ಮಾಡಲು ಒಪ್ಪಿಕೊಂಡೆ. 2019ರಲ್ಲಿ ಚಿತ್ರ ಆರಂಭವಾಯಿತು. ಅಪ್ಪು ಸರ್ ಬಂದು ಕ್ಲಾಪ್ ಮಾಡಿದ್ದರು. ಚಿತ್ರದ ಎಲ್ಲಾ ಇವೆಂಟ್ ಗಳಗೂ ಬರುವ ಭರವಸೆ ನೀಡಿದ್ದರು. ಆದರೆ ವಿಧಿಲಿಖಿತವೇ ಬೇರೆಯಾಗಿತ್ತು. ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದರು ನಿರ್ಮಾಪಕ ಸೋಮಣ್ಣ.

ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಅಭಿನಯಿಸುವಾಗ ವಿಕ್ರಮ್ ಸರ್ ಸಾಕಷ್ಟು ಸಹಾಯ ಮಾಡಿದರು ಎಂದು ನಾಯಕಿ ಆಕಾಂಕ್ಷ ಶರ್ಮ ಹೇಳಿಕೊಂಡರು.

ಹಿಂದೆ “ಜನುಮದ ಜೋಡಿ” ಚಿತ್ರ ಬಂದಾಗ, ಜನ ಎಷ್ಟೋ ದಿನ ಅದೇ ಗುಂಗಿನಲಿದ್ದರು. ಈಗ ” ಕೆ.ಜಿ.ಎಫ್ 2″ ಚಿತ್ರವನ್ನು ಅದೇ ರೀತಿ ನೋಡುತ್ತಿದ್ದಾರೆ. ಜನರನ್ನು ಮತ್ತೆ ಚಿತ್ರಮಂದಿರದತ್ತ ಕರೆದುಕೊಂಡು ಬರುವ ಚಿತ್ರ ಬರಬೇಕು. ಅಂತಹ ಚಿತ್ರ “ತ್ರಿವಿಕ್ರಮ” ಆಗಲಿ. ವಿಕ್ಕಿ ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಸಾಧುಕೋಕಿಲ.

ಹಿರಿಯ ನಿರ್ದೇಶಕ ಶಿವಮಣಿ ಅವರು ಸಹ ಈ ಚಿತ್ರದ ತಮ್ಮ ಪಾತ್ರದ ಕುರಿತು ಹೇಳಿಕೊಂಡರು.

ಮನುರಂಜನ್ ರವಿಚಂದ್ರನ್, ತಾರಾ, ಸಂತೋಷ್ ಆನಂದರಾಮ್, ಚೇತನ್, ಶರಣ್, ಆದಿ ಲೋಕೇಶ್ ತಮ್ಮ ಪ್ರೋತ್ಸಾಹಭರಿತ ಮಾತುಗಳಿಂದ ಚಿತ್ರತಂಡಕ್ಕೆ ಶುಭ ಕೋರಿದರು.

Related Posts

error: Content is protected !!