ಟ್ವೆಂಟಿ ಒನ್ ಅವರ್ಸ್- ಇದು ಡಾಲಿ ಸಿನಿಮಾ- ಮೇ 20ರಂದು ಬಿಡುಗಡೆ

“ಟಗರು” ಮೂಲಕ ಡಾಲಿ ಎಂಬ ಹೆಸರಿನಿಂದ ಜನಪ್ರಿಯರಾದ ಧನಂಜಯ್, “ಪಷ್ಪ” ಮೂಲಕ ದಕ್ಷಿಣ ಭಾರತದಾದ್ಯಂತ ಚಿರಪರಿಚಿತರಾದರು. “ಬಡವ ರಾಸ್ಕಲ್” ಚಿತ್ರದಿಂದ ನಿರ್ಮಾಪಕರೂ ಆದರು. ಇಷ್ಟು ಕಾರ್ಯದೊತ್ತಡದ ನಡುವೆ ಧನಂಜಯ್ “ಟ್ವೆಂಟಿ ಒನ್ ಅವರ್ಸ್” ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೈಶಂಕರ್ ಪಂಡಿತ್ ನಿರ್ದೇಶಿಸಿರುವ ಈ ಚಿತ್ರ ಇದೇ ಇಪ್ಪತ್ತರಂದು ಬರುತ್ತಿದೆ. ಕೆ.ಆರ್.ಜಿ ಸ್ಟೂಡಿಯೋಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಈ ಚಿತ್ರದ ಕುರಿತು ಪೋಸ್ಟ್ ಹಾಕಿದಾಗ, ಯಾವ ಗ್ಯಾಪ್ ನಲ್ಲಿ ಈ ಸಿನಿಮಾ ಮಾಡಿದ್ದೀರಾ? ಅಂತ ಗೆಳೆಯರು ಕೇಳಿದರು.
ಮೊದಲ ಲಾಕ್ ಡೌನ್ ನಂತರ ಮಾಡಿರುವ ಸಿನಿಮಾ ಇದು. ಮಲೆಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ನಡೆಯುವ ಕಥೆಯಿದು. ನಾನು ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕರ್ನಾಟಕ ಹಾಗೂ ಕೇರಳದಲ್ಲಿ ನಡೆಯುವ ಕಥೆಯಾಗಿರುವುದರಿಂದ ಕನ್ನಡ ಹಾಗೂ ಮಲೆಯಾಳಂನಲ್ಲಿ ಸಂಭಾಷಣೆ ಇರುತ್ತದೆ. ಆದರೆ ಕರ್ನಾಟಕದಲ್ಲಿ ಈ ಚಿತ್ರ ಪೂರ್ತಿ ಕನ್ನಡದ ಸಂಭಾಷಣೆಯಲ್ಲಿ ಬಿಡುಗಡೆಯಾಗುತ್ತದೆ. ಇಲ್ಲಿ ಬಿಡುಗಡೆಯಾದ ನಂತರ ಕೇರಳದಲ್ಲಿ ತೆರೆ ಕಾಣುತ್ತದೆ. ಒಳ್ಳೆಯ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರ ತಂಡ. ಬಹಳ ದಿನಗಳ ನಂತರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದರಲ್ಲಿ ನಟಿಸಿದ್ದೇನೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ಡಾಲಿ ಧನಂಜಯ್.

ನಾನು ಮೂಲತಃ ಕರ್ನಾಟದವನು. ಆದರೆ ಕೇರಳದಲ್ಲಿದ್ದೀನಿ. ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಖ್ಯಾತ ನಟರು ಅಭಿನಯಿಸಿರುವ ಜಾಹೀರಾತುಗಳನ್ನು ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಇಪ್ಪತ್ತೊಂದು ಗಂಟೆಗಳಲ್ಲಿ ನಡೆಯುವ ವಿಶೇಷ ಕಥೆ ಹೊಂದಿರುವ ಚಿತ್ರವಿದು. ಧನಂಜಯ್ ನಿರ್ದೇಶಕರ ನಟ. ಅವರ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮುಖ್ಯಭೂಮಿಕೆಯಲ್ಲಿ ದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಜೈಶಂಕರ್ ಪಂಡಿತ್.

ನಾನು ಈ ಹಿಂದೆ “ಓಲ್ಡ್ ಮಾಂಕ್” ಚಿತ್ರದಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಧನಂಜಯ್ ಜೊತೆಗೆ ಅಭಿನಯಿಸಿದ್ದು ಖುಷಿಯ ವಿಚಾರವೆಂದರು ನಟ ಸುದೇವ್ ನಾಯರ್.

ನಾನು ಉಡುಪಿಯವನು. ಆದರೆ ಕೇರಳದಲ್ಲಿ ಬೆಳದಿದ್ದು. ಹಿಂದೆ ಟ.ಎನ್.ಸೀತಾರಾಮ್ ಅವರ “ಕಾಫಿತೋಟ” ದಲ್ಲಿ ಅಭಿನಯಿಸಿದ್ದೆ. ಈಗ ಈ ಚಿತ್ರದಲ್ಲಿ ನಟಿಸಿದ್ದೇನೆ. ‌ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಟ ರಾಹುಲ್ ಮಾಧವ್.

ನಿರ್ಮಾಪಕರಾದ ಬಾಲಕೃಷ್ಣ ಎನ್.ಎಸ್, ಅಭಿಷೇಕ್ ರುದ್ರಮೂರ್ತಿ, ಸುನೀಲ್ ಗೌಡ, ಹಾಗೂ ಪ್ರವೀಣ್ ಮಹದೇವ್ ಸಹ ನಿರ್ಮಾಣದ ಬಗ್ಗೆ ಮಾತನಾಡಿದರು.

ರುಪರ್ಟ್ ಫರ್ನಾಂಡಿಸ್ ಸಂಗೀತ ನಿರ್ದೇಶನ, ತಿರುನವುಕ್ಕರಸು ಛಾಯಾಗ್ರಹಣ, ರಿಚರ್ಡ್ ಕೆವಿನ್ ಸಂಕಲನ ಹಾಗೂ ಪ್ರತಾಪ್ ಆರ್ ಮೆಂಡನ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಸುಕೃತ್ ವಿ ಹಾಗೂ ಡಿ.ವಿ.ಬಾಲಸುಬ್ರಹ್ಮಣ್ಯ ಸಂಭಾಷಣೆ ಬರೆದಿದ್ದಾರೆ. ಶೋಭ ಅಂಜನಪ್ಪ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

Related Posts

error: Content is protected !!