ಇವಳು ಕಲ್ಲಿನ ಕೋಟೆ ಹುಡುಗನ ಕನಸಿನ ಹುಡುಗಿ ! ಮೀರಾ ಎಂಬ ವೆಬ್ ಸೀರೀಸ್ ಗೆ ಚಿತ್ರದುರ್ಗ ಪ್ರತಿಭೆಯ ಆ್ಯಕ್ಷನ್ ಕಟ್…

ಕನ್ನಡ ಚಿತ್ರರಂಗ ಈಗ ಎಲ್ಲೆಡೆ ಜೋರು ಸದ್ದು ಮಾಡುತ್ತಿದೆ. ಅದರಲ್ಲೂ ಹೊಸಬರದ್ದೇ ಈಗ ಹವಾ. ಹೌದು, ಇಲ್ಲಿ ಹೊಸ ಪ್ರತಿಭೆಗಳ ಆಗಮನ ನಿರಂತರವಾಗಿದೆ. ಸಿನಿಮಾ ಜೊತೆ ಜೊತೆಯಲ್ಲಿ ಈಗ ಕನ್ನಡ ವೆಬ್ ಸೀರೀಸ್ ಜಮಾನ. ಹಾಗಾಗಿ ಅದು ಕೂಡ ಚಾಲ್ತಿಯಲ್ಲಿದೆ. ಈಗಾಗಲೇ ಹಲವು ಹೊಸ ಪ್ರತಿಭಾವಂತರು ವೆಬ್ ಸೀರೀಸ್ ಮೊರೆ ಹೋಗಿದ್ದಾರೆ. ಆ ಮೂಲಕ ಸದ್ದು ಮಾಡಿದ ಉದಾಹರಣೆಯೇ ಹೆಚ್ಚು. ಈಗ ಅಂತಹ ವೆಬ್ ಸೀರೀಸ್ ಹಿಂದೆ ನರಸಿಂಹಮೂರ್ತಿ (ಮೂರ್ತಿ ದುರ್ಗ) ಎಂಬ ಹೊಸ ಪ್ರತಿಭೆಯೂ ಸೇರಿದೆ

ಅಂದಹಾಗೆ, ನರಸಿಂಹಮೂರ್ತಿ ಮೂಲತಃ ಚಿತ್ರದುರ್ಗದ ಹುಡುಗ. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಆ ಅನುಭವ ಈಗ ಇದೇ‌ ಮೊದಲ‌ ಸಲ ವೆಬ್ ಸೀರೀಸ್ ಮೂಲಕ ನಿರ್ದೇಶಕನಾಗಲು ಹೊರಟಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಇವರದೇ. ಈ ನಿಟ್ಟಿನಲ್ಲಿ ಈಗಾಗಲೇ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ ಕೂಡ. ಅವರ ಕನಸಿನ‌ ವೆಬ್ ಸೀರೀಸ್ ಗೆ ಅವರಿಟ್ಟ ಹೆಸರು ಮೀರಾ. ಇದು ಕನ್ನಡ, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ತಯಾರಾಗುತ್ತಿರುವ ಸೀರೀಸ್.
ಮೀರಾ ಈ ಹೆಸರೇ ಹೇಳುವಂತೆ ಇದೊಂದು‌ ಮಹಿಳಾ ಕಥಾಹಂದರ ಹೊಂದಿರುವ ಸ್ಟೋರಿ. ಸದ್ದಿಲ್ಲದೆಯೇ ಒಂದು ಎಪಿಸೋಡ್ ಚಿತ್ರೀಕರಿಸಿರುವ ನಿರ್ದೇಶಕ ನರಸಿಂಹಮೂರ್ತಿ, ತಮ್ಮದೇ ಉತ್ಸಾಹಿ ತಂಡ ಕಟ್ಟಿಕೊಂಡು ವೆಬ್ ಸೀರೀಸ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಮೀರಾ ಅಂದಾಕ್ಷಣ, ನೆನಪಾಗೊದೇ ಒಂದು ಮಹಿಳಾ ಪ್ರಧಾನವಾಗಿರುವ ಕಥೆ. ಅದು ನಿಜ ಕೂಡ. ಈಗಿನ ವಾಸ್ತವ ಅಂಶಗಳೇ ಈ ವೆಬ್ ಸೀರೀಸ್ ಜೀವಾಳ. ಒಂದು ಹೆಣ್ ದನಿಯ ಆರ್ತನಾದ, ಅವಳ ನೋವು, ದುಗುಡ-ದುಮ್ಮಾನ, ದೌರ್ಜನ್ಯ ಅವಳನ್ನು ಸಮಾಜ ನೋಡುವ ಪರಿ, ಆಕೆಯ ಸಮಸ್ಯೆಗೆ ಸ್ಪಂದಿಸದ ಸಮಾಜ ಇನ್ನು ಇತ್ಯಾದಿ ಸಮಸ್ಯೆಗಳ ಕುರಿತು ಸಾಗುವ ಕಥೆಯಲ್ಲಿ ಹಲವು ಮಜಲುಗಳಿವೆ. ಇಡೀ ಕಥೆ ಹೆಣ್ಣಿನ ಸುತ್ತವೇ ಸುತ್ತಲಿದ್ದು, ನೈಜ ಘಟನೆಗಳಿಗೆ ಸಾಕ್ಷಿ ಎಂಬಂತೆಯೇ ನಿರೂಪಣೆ ಇರಲಿದೆ ಅನ್ನೋದು ನಿರ್ದೇಶಕ ನರಸಿಂಹಮೂರ್ತಿ ಅವರ ಮಾತು.

ಇನ್ನು ಈ ವೆಬ್ ಸೀರೀಸ್ ಗೆ ಹಂಸ ನಿರ್ಮಾಪಕರು. ಬೆಂಕಿ ಮುರಳಿ ಮತ್ತು ವಿನಯ್ ಕುಮಾರ್ ಸಹ ನಿರ್ಮಾಪಕರಾಗಿದ್ದಾರೆ. ಈ ದಿನಮಾನದಲ್ಲಿ ಸಿನಿಮಾ ಮಾಡಲು ಹಿಂದೇಟು ಹಾಕುವ ನಿರ್ಮಾಪಕರೇ ಇರುವಾಗ, ಹಂಸ, ಬೆಂಕಿ ಮುರುಳಿ ಮತ್ತು ವಿನಯ್ ಕುಮಾರ್ ನಿರ್ದೇಶಕ ನರಸಿಂಹಮೂರ್ತಿ ಅವರ ಚಂದದ ಮತಗತು ಮನಮುಟ್ಟುವ ಕಥೆ ಕೇಳಿ‌ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹೆಸರಘಟ್ಟ ಸುತ್ತಮುತ್ತ, ಅವರು ಚಿತ್ರೀಕರಣ ಮಾಡಿದ್ದಾರೆ. ಈ ವೆಬ್ ಸೀರೀಸ್ ಗೆ ಕುಮಾರ್ ಗೌಡ ಕ್ಯಾಮೆರಾ ಹಿಡಿದರೆ, ಆರ್.ಬಿ. ಉಮೇಶ್ ಅವರ ಸಂಕಲನವಿದೆ.

ಇನ್ನು ಈ ವೆಬ್ ಸೀರೀಸ್ ಗೆ ಸಿಂಹ ರಂಗ ಮತ್ತು ನಿಧಿ ಹೈಲೈಟ್. ಮಿಕ್ಕಂತೆ ಒಂದಷ್ಟು ಪ್ರತಿಭಾವಂತರು ಈ‌ವೆಬ್ ಸೀರೀಸ್ ಭಾಗವಾಗಿದ್ದಾರೆ. ಅದೇನೆ ಇರಲಿ ನಿರ್ದೇಶಕ ಮೂರ್ತಿ ದುರ್ಗ ಅವರ ಕನಸಿನ ಈ ಮೀರಾ ವೆಬ್ ಸೀರೀಸ್ ಮಹಿಳೆಯರ ದನಿಯಾಗಲಿ ಅನ್ನೋದು ಆಶಯ.

Related Posts

error: Content is protected !!