ಚಿತ್ರ ವಿಮರ್ಶೆ – ರೇಟಿಂಗ್ : 5 / 3.5
ಚಿತ್ರ: ಪುರುಷೋತ್ತಮ
ನಿರ್ದೇಶನ: ಅಮರ್ ನಾಥ್
ನಿರ್ಮಾಣ: ರವಿ ಜಿಮ್ ಪ್ರೊಡಕ್ಷನ್ಸ್
ತಾರಾಗಣ: ರವಿ, ಅಪೂರ್ವ ಇತರರು.
ಇದು ಕೋರ್ಟ್ ಗೆ ಹೋಗಬೇಕಾಗಿರೋ ಕೇಸ್ ಅಲ್ಲ ಮೇಡಮ್… ನಾನು ಮುಗಿಸಬೇಕಾಗಿರೋ ಕೇಸ್…
ವಾಸುಕಿ ಪುರುಷೋತ್ತಮ್ ಈ ಮಾತು ಹೇಳುವ ಹೊತ್ತಿಗೆ, ಅವಳ ಲೈಫಲ್ಲಿ ಮರೆಯಲಾರದ ಕೆಟ್ಟ ಘಟನೆಯೊಂದು ನಡೆದು ಹೋಗಿರುತ್ತೆ. ತನ್ನ ಬದುಕಿಗೆ ಮಸಿ ಬಳಿದವರ ವಿರುದ್ಧ ಆಕೆ ಸಿಡಿದೆದ್ದು ನಿಲ್ಲಬೇಕು ಅಂತ ಹೋರಾಟಕ್ಕೆ ಟೊಂಕ ಕಟ್ಟಿ ನಿಲ್ಲುತ್ತಾಳೆ. ಅಲ್ಲಿ ಆಕೆ ಹೇಗೆಲ್ಲಾ ಹೋರಾಟ ಮಾಡ್ತಾಳೆ ಅನ್ನೋದೇ ಈ ಚಿತ್ರದ ಕಥಾವಸ್ತು.
ಭಾವುಕ ಪಯಣ…
ಪುರುಷೋತ್ತಮ ಈ ವಾರ ತೆರೆ ಕಂಡ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ, ಹೆಸರಿಗೆ ತಕ್ಕಂತಹ ಉತ್ತಮ ಸಿನಿಮಾವಿದು. ಹಾಗಂತ, ಇಲ್ಲಿರೋದೆಲ್ಲವೂ ಸರಿ ಅಂತ ಹೇಳುತ್ತಿಲ್ಲ. ಸಣ್ಣಪುಟ್ಟ ದೋಷಗಳಿದ್ದರೂ ಅಲ್ಲಲ್ಲಿ ಕಾಣು ಹಾಡು, ಕಚಗುಳಿ ಇಡುವ ಮಾತುಗಳು ಆ ದೋಷಗಳನ್ನು ಬದಿಗೊತ್ತಿವೆ. ಇಲ್ಲೊಂದು ಭಾವ ಸ್ಪರ್ಷವೆನಿಸೋ ಕಥೆ ಇದೆ. ಅದಕ್ಕೊಂದು ಚಂದದ ನಿರೂಪಣೆಯೂ ಇದೆ. ಅಲ್ಲಲ್ಲಿ ಕುತೂಹಲಕ್ಕೆ ಕರೆದೊಯ್ಯುವ ಕಥೆ ಚಿತ್ರದ ವೇಗಕ್ಕೆ ಸಾಕ್ಷಿ. ಒಂದೊಳ್ಳೆಯ ಸಿನಿಮಾಗೆ ಏನೆಲ್ಲಾ ಇರಬೇಕೋ ಅದೆಲ್ಲವೂ ಪುರುಷೋತ್ತಮ ಚಿತ್ರದಲ್ಲಿದೆ. ಒಳ್ಳೇ ಕಥೆಗೆ ಪೂರಕವಾಗಿ ಚಿತ್ರಕಥೆ ಸಾಗಿದೆ. ವಿನಾಕಾರಣ ಎನಿಸುವ ದೃಶ್ಯಗಳಿಲ್ಲ. ಸುಮ್ಮನೆ ತೂರಿಬರುವ ಹಾಡುಗಳೂ ಇಲ್ಲ. ಹೀರೋಯಿಸಂ ತೋರಿಸೋಕೆ ಫೈಟೂ ಇಲ್ಲ. ಇಂತಹ ಕಥೆಗಳಿಗೆ ಅದು ಬೇಕಾಗಿಯೂ ಇಲ್ಲ. ಊಟಕ್ಕೆ ಉಪ್ಪಿನಕಾಯಿ ರುಚಿ ಎಷ್ಟಿರಬೇಕೋ ಅಷ್ಟೇ ಹಾಸ್ಯ ಇಲ್ಲಿದೆ. ಉಳಿದಂತೆ ಇಲ್ಲಿ ಗಟ್ಟಿತನದ ಕಥೆಯೇ ಮೇಳೈಸಿದೆ. ಒಂದರ್ಥದಲ್ಲಿ ಇದು ಫುಲ್ ಫ್ಯಾಮಿಲಿ ಪ್ಯಾಕ್ಡ್ ಸಿನಿಮಾ.
ಒಮ್ಮೆ ನೋಡಿ..
ಒಂದು ಸಿನಿಮಾ ಮೊದಲು ಕಣ್ಣಿಗೆ ತಂಪೆನಿಸುವಂತಿರಬೇಕು, ಕಿವಿಗೆ ಇಂಪೆನಿಸುವಂತಿರಬೇಕು ಜೊತೆಗೆ ಹೃದಯಕ್ಕೆ ನಾಟುವಂತಿರಬೇಕು ಈ ಮೂರು ಅಂಶಗಳು ಇಲ್ಲಿವೆ ಅನ್ನೋದೇ ಸಮಾಧಾನ. ಇವೆಲ್ಲವನ್ನು ಅನುಭವಿಸುವ ಯೋಚನೆ ಇದ್ದರೆ ಒಮ್ಮೆ ಪುರುಷೋತ್ತಮನ ಪೌರುಷವನ್ನು ನೋಡಲೇಬೇಕು.
ಏನೇನಿದೆ…
ಇಲ್ಲಿ ಗಂಡ, ಹೆಂಡತಿ ಮತ್ತು ಮುದ್ದಾದ ಮಗಳಿರುವ ಸುಂದರ ಕುಟುಂಬವಿದೆ. ಅಲ್ಲಿ ನಗುವಿದೆ, ಅಳುವಿದೆ, ಭಾವನೆಗಳಿವೆ, ದುಗುಡ, ದುಮ್ಮಾನವೂ ಹೆಚ್ಚಿದೆ. ಆ ಕುಟುಂಬದ ಅಕ್ಕಪಕ್ಕ ಜನರಿಂದ ಆಗಾಗ ಅಡಚಣೆ ಆಗುವ ವಿಷಯಗಳೂ ಇವೆ. ಒಮ್ಮೊಮ್ಮೆ ಭಾವುಕತೆಯೂ ಇಣುಕು ಹಾಕುತ್ತದೆ. ಅಲ್ಲಲ್ಲಿ ಮನಸ್ಸು ಭಾರವಾಗುವಂತಹ ಅಂಶಗಳು ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಈಗಿನ ಹೊಡಿ, ಬಡಿ, ಕೊಲ್ಲು ಎನ್ನುವ ಚಿತ್ರಗಳ ಸಾಲಿಗೆ ಬೇರೇನೆ ವಿಷಯ ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನ ಒಂದರ್ಥದಲ್ಲಿ ಸಾರ್ಥಕವೆನಿಸಿದೆ. ಒಟ್ಟಾರೆ ಇದು ಎಲ್ಲಾ ವರ್ಗಕ್ಕೂ ಇಷ್ಟ ಎನಿಸುವ ಹೊಸತರಹದ ಸಿನಿಮಾ ಎಂಬುದೇ ಸಮಾಧಾನ.
ಕಥೆ ಇಷ್ಟು…
ಕಥೆ ಬಗ್ಗೆ ಹೇಳೋದಾದರೆ, ಪುರುಷೋತ್ತಮ ಒಬ್ಬ ಲಾಯರ್ ಕಮ್ ಆಂಕರ್. ಹೆಂಡತಿ, ಮಗಳು ಅವನಿಗೆ ಪ್ರಪಂಚ. ಅವರಿಬ್ಬರನ್ನು ಪ್ರಾಣಕ್ಕಿಂತಲೂ ಪ್ರೀತಿಸೋ ಗುಣ ಅವನದು. ಲಾಯರ್ ಆದ ಅವನಿಗೆ ಬರೀ ಡೈವರ್ಸ್ ಕೇಸ್ ಗಳೇ ಹೆಚ್ಚು. ಒಂದು ಡೈವರ್ಸ್ ಅನ್ನು ಕೊಡಿಸದೆ ಕಾಂಪ್ರಮೈಸ್ ಮಾಡಿ ಕಳಿಸೋ ವ್ಯಕ್ತಿತ್ವ. ಹೀಗಿರುವಾಗ ಅವನ ಹೆಂಡತಿಯೊಬ್ಬಳ ಲೈಫಲ್ಲಿ ಒಂದು ದುರ್ಘಟನೆ ನಡೆಯುತ್ತೆ. ಅದನ್ನು ಅತ್ತ ಗಂಡನಿಗೆ, ನೆರೆಹೊರೆಯದವರಿಗೆ ಹೇಳಲಾಗದ ಪರಿಸ್ಥಿತಿ. ಅದರಿಂದ ಆಕೆ ಹೇಗೆ ಹೊರ ಬರುತ್ತಾಳೆ ಅನ್ನೋದು ಕ್ಲೈಮ್ಯಾಕ್ಸ್. ಆ ಘಟನೆಯೇ ಇಲ್ಲಿ ಇಂಟ್ರೆಸ್ಟಿಂಗ್. ಅಲ್ಲೊಂದು ತನಿಖೆಯ ಜಾಡು ಕೂಡ ಅಷ್ಟೇ ಮಜ ಕೊಡುತ್ತೆ. ಆಮೇಲೆ ಏನಾಗುತ್ತೆ ಅಂತ ತಿಳಿಯೋಕೆ ಸಿನಿಮಾ ನೋಡಿ.
ಪುರುಷೋತ್ತಮನಾಗಿ ರವಿ ಜಿಮ್ ಇಲ್ಲಿ ಪರಿಪೂರ್ಣ ಇಷ್ಟ ಆಗುತ್ತಾರೆ. ಇಡೀ ಸಿನಿಮಾ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಎಲ್ಲೂ ಎಡವದೆ ನಡೆದಿದ್ದಾರೆ. ಮಾತಿನ ನಗೆಚಟಾಕಿ ಜೊತೆ ಹಾಡಲ್ಲೂ ಸ್ಟೆಪ್ ಹಾಕಿ ಸೈ ಎನಿಸಿಕೊಂಡಿದ್ದಾರೆ. ಡೀಸೆಂಟ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಪೂರ್ವ ಕೂಡ ಇಲ್ಲಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೂ ಇಲ್ಲಿ ಗಮನ ಸೆಳೆಯುತ್ತವೆ.
ಮುಖ್ಯವಾಗಿ ಇಲ್ಲಿ ಕ್ಯಾಮೆರಾ ಕೈಚಳಕ ಖುಷಿ ಕೊಡುತ್ತದೆ. ಶ್ರೀಧರ್ ವಿ. ಸಂಭ್ರಮ್ ಅವರ ಹಾಡಲ್ಲಿ ಸಂಭ್ರಮವಿದೆ. ಕತ್ತರಿ ಕೆಲಸವೂ ಚಿತ್ರದ ವೇಗ ಹೆಚ್ಚಿಸಿದೆ.