ಈಗ ಮೊದಲಿನಂತಿಲ್ಲ. ಕಲಾಸಕ್ತರು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಕಷ್ಟು ವೇದಿಕೆಗಳಿವೆ. ಅಂತಹ ಪ್ರತಿಭಾ ಪ್ರದರ್ಶನಕ್ಕೆ ಮತ್ತೊಂದು ಉತ್ತಮ ವೇದಿಕೆ “ಟಾಕೀಸ್” ಆಪ್. ಇತ್ತೀಚೆಗೆ “ಟಾಕೀಸ್” ಆಪ್ ಗೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಚಾಲನೆ ನೀಡಿದರು.
ಕಟ್ಟಡ ನಿರ್ಮಾಣದಿಂದ ಹಿಡಿದು, ಸಿನಿಮಾ ನಿರ್ಮಾಣದ ತನಕ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸ್ವಯಂಪ್ರಭ ಸಂಸ್ಥೆ ಈ ಉಪಯುಕ್ತ “ಟಾಕೀಸ್” ಆಪ್ ಬಿಡುಗಡೆ ಮಾಡಿದೆ. ಕನ್ನಡಿಗರಿಂದ ಕನ್ನಡಿಗರಿಗಾಗಿ ಎಂಬ ವಾಕ್ಯದ ಮೂಲಕ ಈ ಆಪ್ ಕಾರ್ಯ ನಿರ್ವಹಿಸಲಿದೆ. ಮೂಲತಃ ಉದ್ಯಮಿಯಾಗಿರುವ ರತ್ನಾಕರ್ ಕಾಮತ್ ಈ ಸಂಸ್ಥೆಯ ಮುಖ್ಯಸ್ಥರು. ಈ ಹಿಂದೆ ವಿಜಯ ರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್” ಚಿತ್ರವನ್ನು ನಿರ್ಮಾಣ ಮಾಡಿದ್ದರು.
ಸುಮಾರು 200 ಜನರ ಪರಿಶ್ರಮ, 700 ಕ್ಕೂ ಅಧಿಕ ತಂತ್ರಜ್ಞರು ಹಾಗೂ 1200 ಕ್ಕೂ ಮೀರಿದ ಕಲಾವಿದರು ಈ “ಟಾಕೀಸ್” ನ ವಿವಿಧ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ.
ವೆಬ್ ಸೀರೀಸ್, ಧಾರಾವಾಹಿ, ಕಿರುಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಚಲನಚಿತ್ರಗಳನ್ನು “ಟಾಕೀಸ್” ಮೂಲಕ ತಾವು ವೀಕ್ಷಿಸಬಹುದು. ಇದಕ್ಕೆ ತಗಲುವ ವೆಚ್ಚ ಒಂದು ವರ್ಷಕ್ಕೆ ಕೇವಲ 365 ರೂಪಾಯಿ ಮಾತ್ರ. ದಿನಕ್ಕೆ ಒಂದು ರೂಪಾಯಿಯ ಹಾಗೆ. ಬೇರೆ ಯಾವುದೇ ವೆಚ್ಚ ಇದಕ್ಕೆ ಇರುವುದಿಲ್ಲ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಮನೋರಂಜನೆ ನೀಡುವ ಯೋಜನೆ “ಟಾಕೀಸ್” ತಂಡದ್ದು.
ಈ ಸಂಸ್ಥೆಯ ಬೆಳವಣಿಗೆ ಕಂಡು ಖುಷಿಯಾಗುತ್ತಿದೆ. ಅಪ್ಪಾಜಿ ಹೇಳುತ್ತಿದ್ದರು. ಕೆಲಸ ಕೊಟ್ಟವರು ಅನ್ನದಾತರು ಅಂತ. ರತ್ನಾಕರ್ ಅವರನ್ನು ನೋಡಿದರೆ ಹಾಗೆ ಅನಿಸುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇನ್ನೂ “ಟಾಕೀಸ್” ಬಗ್ಗೆ ಹೇಳಬೇಕಾದರೆ, ಟೆಕ್ನಾಲಜಿ ಬದಲಾದ ಹಾಗೆ ನಾವು ಬದಲಾಗಬೇಕು. ನಾನು ಈ ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದ್ದೇನೆ. ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ವೆಬ್ ಸೀರೀಸ್ ನೋಡಿದ್ದೀನಿ. ನನ್ನ ಮಗಳು ನಿರ್ಮಿಸಿರುವ ವೆಬ್ ಸೀರೀಸ್ ಸಹ ಸದ್ಯದಲ್ಲೇ ಇದೇ “ಟಾಕೀಸ್” ನಲ್ಲಿ ಬರಲಿದೆ. ಮುಂದೆ ನಾನು ಕೂಡ ಒಂದು ವೆಬ್ ಸೀರೀಸ್ ನಿರ್ಮಿಸಿ, ನಟಿಸಲಿದ್ದೇನೆ. “ಟಾಕೀಸ್” ತಂಡಕ್ಕೆ ಒಳ್ಳೆಯದಾಗಲಿ ಎಂದರು ಶಿವರಾಜಕುಮಾರ್.
ನಟ ಹರೀಶ್ ರಾಜ್ ಸಹ “ಟಾಕೀಸ್” ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
“ಟಾಕೀಸ್” ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರೋಗ್ರಾಮಿಂಗ್ ಹೆಡ್ ಸೂರಜ್ ಬೋಳಾರ್ ನೀಡಿದರು. ಹೇಗೆ ಬಳಸಬೇಕೆಂಬ ವಿವರಣೆಯನ್ನು ನಟಿ ರಂಜನಿ ರಾಘವನ್ ವಿಡಿಯೋ ಮೂಲಕ ವಿವರಿಸಿದರು.
ಸ್ವಯಂಪ್ರಭ ಸಂಸ್ಥೆಯ ರುವಾರಿಗಳು ಹಾಗೂ ಈ ಆಪ್ ನ ಸ್ಥಾಪಕರೂ ಆದ ರತ್ನಾಕರ್ ಕಾಮತ್, ಲಕ್ಷ್ಮೀ ರತ್ನಾಕರ್ ಕಾಮತ್ ಹಾಗೂ ಗಣೇಶ್ ರತ್ನಾಕರ್ ಕಾಮತ್ ಇದ್ದರು.