ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಕಿರುಚಿತ್ರ ನಿರ್ದೇಶನ ಉತ್ತಮ ವೇದಿಕೆ. ಬೆಳ್ಳಿತೆರೆ ಮೇಲೆ ದೊಡ್ಡ ಚಿತ್ರಗಳನ್ನು ನಿರ್ದೇಶಿಸುವ ಆಸೆ ಹೊತ್ತ ಉತ್ಸಾಹಿ ಯುವಕರು, ತಮ್ಮ ಮೊದಲ ಪ್ರಯತ್ನವಾಗಿ ಕಿರುಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದ, ಅಭಿನಯ ತರಂಗ ಹಾಗೂ ವಿಜಯನಗರ ಬಿಂಬದಲ್ಲಿ ನಾಟಕಗಳಲ್ಲಿ ಅಭಿನಯ. ಆನಂತರ ಆಲ್ ಓಕೆ ಸೇರಿದಂತೆ ಕನ್ನಡದ ಸುಪ್ರಸಿದ್ಧ ರ್ಯಾಪರ್ಸ್ಲ್ಬ ಆಲ್ಬಂ ಸಾಂಗ್ ಗಳಿಗೆ ಛಾಯಾಗ್ರಹಣ ಹಾಗೂ ಸಂಕಲನ ಮಾಡಿರುವ ಆಕಾಶ್ ಜೋಶಿ ಈಗ “ಅಂತರ್ ಕಲಹ” ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.
ಇದೊಂದು ಸೈಕಾಲಿಜಿಕಲ್ ಥ್ರಿಲ್ಲರ್. ಪ್ರತಿಯೊಬ್ಬ ಮನುಷ್ಯನ ಒಳಗೂ “ಅಂತರ್ ಕಲಹ” ಇರುತ್ತದೆ. ಅದನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಏನಾಗುತ್ತದೆ ಎಂಬುದನ್ನು ಈ ಕಿರುಚಿತ್ರದ ಮೂಲಕ ಹೇಳ ಹೊರಟಿದ್ದೇನೆ. ನಮ್ಮ ತಂಡಕ್ಕೆ ಸಿನಿಮಾ ಮಾಡುವ ಆಸೆಯಿದೆ. ಅದಕ್ಕೆ ಇದು ಮೊದಲ ಹೆಜ್ಜೆ. ನಾನೇ ಕಥೆ ಬರೆದು, ಛಾಯಾಗ್ರಹಣ ಹಾಗೂ ಸಂಕಲನದೊಂದಿಗೆ ನಿರ್ದೇಶನ ಮಾಡಿದ್ದೇನೆ. ಸುನಿಲ್ ಬಿ.ಟಿ ಹಾಗೂ ಪ್ರಿಯಾಂಕ ಜೋಶಿ ನಿರ್ಮಾಣ ಮಾಡಿದ್ದಾರೆ. ಸುನಿಲ್ ಬಿ.ಟಿ, ಅರುಣ್ ಸಾಗರ್, ರಾಣಾ, ಅನ್ನಪೂರ್ಣ, ಆರ್ತಿ ಪಡುಬಿದ್ರಿ ಅಭಿನಯಿಸಿದ್ದಾರೆ. ಆದಷ್ಟು ಬೇಗ ಜನಪ್ರಿಯ ಓಟಿಟಿಯಲ್ಲಿ ಈ ಕಿರು ಚಿತ್ರ ಬಿಡುಗಡೆಯಾಗಲಿದೆ ಎಂದರು ಆಕಾಶ್ ಜೋಶಿ.
ನನಗೆ ನನ್ನ ಗುರುಗಳಾದ ಬಿ.ವಿ.ಕಾರಂತರು ಹೇಳುತ್ತಿದ್ದರು. ಹೊಸಬರಿಗೆ ನಿನ್ನ ಕೈಲಾದ ಸಹಾಯ ಮಾಡು ಎಂದು. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಈ ತಂಡದವರು ಬಂದು ಈ ರೀತಿಯ ಪಾತ್ರ ಇದೆ ನೀವು ಬಂದು ಮಾಡಿ ಎಂದಾಗ ಆಯ್ತು ಎಂದೆ. ಈ ಉತ್ಸಾಹಿ ಯುವ ತಂಡಕ್ಕೆ ಶುಭವಾಗಲಿ ಎಂದರು ಅರುಣ್ ಸಾಗರ್.
ಹಿರಿಯ ನಟ ದೊಡ್ಡಣ್ಣ ಸಹ ಕಿರುಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಆಲ್ ಓಕೆ, ನಿರಂಜನ್ ದೇಶಪಾಂಡೆ, ರಘು ಗೌಡ, ಶಮಂತ್ (ಬ್ರೋ ಗೌಡ), ರೋಹಿತ್ ಭಾನುಪ್ರಕಾಶ್, ಸಾಗರ್ ಪುರಾಣಿಕ್ ಹಾಗೂ ಸಂಜಯ್ ಶರ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿ, ಆಕಾಶ್ ಜೋಶಿ ತಂಡಕ್ಕೆ ಶುಭ ಕೋರಿದರು.