ಕಣ್ಣಲ್ಲೇ ನಟಿಸುವ ನಾಯಕ.. ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ತಮ್ಮ ಅಮೋಘ ನಟನೆಯಿಂದ ಚಿತ್ರರಸಿಕರನ್ನು ರಂಜಿಸ್ತಿರುವ ವಸಿಷ್ಠ ನಾಯಕ ನಟನಾಗಿಯೂ, ಖಳನಾಯಕನಾಗಿಯೂ ಬೆಳ್ಳಿಪರದೆಯ ಮೇಲೆ ದಿಬ್ಬಣ ಹೋಗ್ತಿದ್ದಾರೆ. ಸದ್ಯ ವಸಿಷ್ಠ ನಾಯಕ ನಟನಾಗಿ ಬಣ್ಣ ಹಚ್ಚಿರುವ ಕಾಲಚಕ್ರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಜೊತೆಗೆ ಚಿಟ್ಟೆ ತಲ್ವಾರ್ ಪೇಟೆ ಸಿನಿಮಾದಲ್ಲಿ ಹೀರೋ ಆಗಿ ನಟಿಸ್ತಿದ್ದಾರೆ. ಈಗ ವಸಿಷ್ಠ ಮತ್ತೊಂದು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲು ಸಜ್ಜಾಗಿದ್ದಾರೆ.
‘Love…ಲಿ’ ಎಂದ ಚಿಟ್ಟೆ
ವಸಿಷ್ಠ ಹೀರೋ ಆಗಿ ನಟಿಸ್ತಿರುವ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ‘Love…ಲಿ’ ಎಂಬ ಬ್ಯೂಟಿಫುಲ್ ಟೈಟಲ್ ಇಡಲಾಗಿದ್ದು, ಇವತ್ತು ಬೆಂಗಳೂರಿನ ಸರ್ಕಲ್ ಮಾರಮ್ಮ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿದೆ. ಮುಹೂರ್ತ ಮುಗಿಸಿರುವ ಚಿತ್ರತಂಡ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಬೈಕ್ ಮೇಲೆ ಕುಳಿತು.. ಧಮ್ ಹೊಡೆಯುತ್ತಾ, ಸಖತ್ ಸ್ಟೈಲೀಶ್ ಲುಕ್ ನಲ್ಲಿ ಚಿಟ್ಟಿ ಮಿಂಚಿದ್ದಾರೆ.
‘Love…ಲಿ’ ಕಮರ್ಷಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೋಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ಕಳೆದ ಎಂಟು ವರ್ಷಗಳಿಂದ ವಸಿಷ್ಠ ಸಿಂಹ ಜೊತೆಯಲಿ ಇರುವ ಹಾಗೂ ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ‘Love…ಲಿ’ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸದ್ಯದಲ್ಲಿ ಉಳಿದ ಕಲಾಬಳಗವನ್ನು ಚಿತ್ರತಂಡ ಪರಿಚಯಿಸಲಿದೆ.
ಅಂದಹಾಗೇ ವಸಿಷ್ಠ ಸಿಂಹ ಖಾತೆಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ. ಹೆಡ್ ಬುಷ್, ಸಿಂಬಾ, ಓದೆಲಾ ರೈಲ್ವೇ ಸ್ಟೇಷನ್ ಸಿನಿಮಾ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ವಸಿಷ್ಠ ಬ್ಯುಸಿಯಾಗಿದ್ದಾರೆ.