ಕನ್ನಡ ಚಿತ್ರರಂಗದಲ್ಲಿ ದಿನ ಕಳೆದಂತೆ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಅದರಂತೆಯೇ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಆ ಸಾಲಿಗೆ ಈಗ ಎನ್. ವಿನಾಯಕ ಕೂಡ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ವಿನಾಯಕ ಅವರಿಗೆ ಸಿನಿಮಾ ಹೊಸದೇನಲ್ಲ. ಮೂಲತಃ ಎಂಜಿನಿಯರಿಂಗ್ ಮುಗಿಸಿರುವ ವಿನಾಯಕ್ ಕೋಟೆ ನಾಡಿನ ಹುಡುಗ. ಸಿನಿಮಾ ನಿರ್ದೇಶಕರಾಗಬೇಕು ಅಂತ ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ವಿನಾಯಕ ಅವರು, ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಹಲವು ಆಲ್ಬಂ ಸಾಂಗ್ ಮತ್ತು ಕಿರುಚಿತ್ರಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ. ಇವರ ಲಾಸ್ಟ್ ಸೀನ್ ಎಂಬ ಆಲ್ಬಂ ಸಾಂಗ್ ನಾಲ್ಕು ಭಾಷೆಯಲ್ಲಿ ರಿಲೀಸ್ ಆಗಿ ಪ್ಯಾನ್ ಇಂಡಿಯಾ ಸಾಂಗ್ ಎಂಬ ಮೆಚ್ಚುಗೆ ಪಡೆದಿದೆ. ಇದರೊಂದಿಗೆ ಮಿ.ಬೀಜ ಕಿರುಚಿತ್ರ ಕೂಡ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇವಿಷ್ಟು ಅನುಭವದ ಮೇಲೆ ವಿನಾಯಕ ಅವರು ಇದೀಗ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ.
ಹೌದು, ಈಗಾಗಲೇ ‘ಫ್ಯಾಮಿಲಿ ಪ್ಯಾಕ್’, ‘ಸಂಕಷ್ಟಕರ ಗಣಪತಿ’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಹೀರೋ ಲಿಖಿತ್ ಶೆಟ್ಟಿ ಅವರಿಗೊಂದು ಸಿನಿಮಾ ಮಾಡುತ್ತಿದ್ದಾರೆ ವಿನಾಯಕ. ತನ್ನ ನಿರ್ದೇಶನದಲ್ಲಿ ಮೂಡಿಬರಲಿರುವ ರೊಮ್ಯಾಂಟಿಕ್- ಕಾಮಿಡಿ ಥೀಮ್ ಹೊಂದಿರುವ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನಡೆದಿದೆ. ಸ್ವತಃ ಲಿಖಿತಿ ಶೆಟ್ಟಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ‘ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಸ್ನೇಹಿತನ ಜೊತೆ ಸಹ ನಿರ್ಮಾಪಕರಾಗಿದ್ದ ಲಿಖಿತ್ ಶೆಟ್ಟಿ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗುತ್ತಿದ್ದಾರೆ.
‘ಸಂಕಷ್ಟ ಕರ ಗಣಪತಿ’ ಮತ್ತು ಪಿ ಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿ , ಓ ಟಿ ಟಿಯಲ್ಲಿ ಬಿಡುಗಡೆಯಾಗಿ ಜನ ಮನ್ನಣೆ ಗಳಿಸಿದ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ಲಿಖಿತ್ ಶೆಟ್ಟಿ, ಇದೀಗ ಕೆ. ಎಮ್. ಚೈತನ್ಯ ನಿರ್ದೇಶನದ ‘ಅಬ್ಬಬ್ಬಾ’ ಸಿನೆಮಾದಲ್ಲಿ ನಟಿಸುತ್ತಿದ್ದು, ಅದು ಮೇ ಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಕಿರಿಕ್ ಕೀರ್ತಿ ನಿರ್ದೇಶನದ ‘ಲವ್ ಮದುವೆ ಇತ್ಯಾದಿ’ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಎನ್ ವಿನಾಯಕ ಹೇಳಿದ ಕತೆ ಮೆಚ್ಚಿದ ಲಿಖಿತ್ ಶೆಟ್ಟಿ, ನಟನೆ ಜೊತೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಜುಲೈ ನಲ್ಲಿ ಶೂಟಿಂಗ್ ಆರಂಭಿಸುವ ಯೋಚನೆಯಲ್ಲೂ ಅವರಿದ್ದಾರೆ. ಇನ್ನು, ಹೊಸ ನಿರ್ದೇಶಕ ಎನ್ ವಿನಾಯಕ ಹಲವಾರು ಕನ್ನಡ ಸಿನೆಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವದ ಮೇಲೆ ಈ ಚಿತ್ರಕ್ಕೆ ಕೈ ಹಾಕಿದ್ದಾರೆ. ಸದ್ಯಕ್ಕಿಷ್ಟು ಮಾಹಿತಿ. ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಕುರಿತು ಇನ್ನಷ್ಟೇ ಮಾಹಿತಿ ನೀಡುವುದಾಗಿ ಹೇಳುತ್ತಾರೆ ನಿರ್ದೇಶಕ ವಿನಾಯಕ.







