ವೆಡ್ಡಿಂಗ್‌ ಗಿಫ್ಟ್‌ ಕೊಡ್ತಾರೆ ನಟಿ ಪ್ರೇಮ! ಜೂನ್‌ ವೇಳೆ ಹೊಸ ಸಿನಿಮಾ ರಿಲೀಸ್…

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ನಿರ್ಮಾಪಕ ಭಾ.ಮ.ಹರೀಶ್ ಹಾಗೂ ಸುನೀಲ್ ಕಾರ್ಯಕ್ರಮದ ಆಕರ್ಷಣೆಯಾಗಿದ್ದರು. ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಪ್ರೇಮ, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು, ಸಂಕಲನಕಾರ ವಿಜೇತ್ ಚಂದ್ರ ಹಾಗೂ ಛಾಯಾಗ್ರಾಹಕ ಉದಯಲೀಲ ಹಾಡುಗಳ ಬಿಡುಗಡೆಗೆ ಸಾಕ್ಷಿಯಾದರು.

ನಿರ್ದೇಶಕ ವಿಕ್ರಂ ಪ್ರಭು ಕಳೆದ ಹತ್ತೊಂಬತ್ತು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರದಲ್ಲಿ ಕೆಲಸ ಮಾಡಿದ್ದರು. ಆ ಬಳಿಕ ಅವರು ಇಂಡಸ್ಟ್ರಿ ಕಡೆ ಮುಖ ಮಾಡಲಿಲ್ಲ. ಆ ಕುರಿತು ಅವರು ಹೇಳುವುದಿಷ್ಟು. “ಲವ್‌ ಸಿನಿಮಾ ಬಳಿಕ ನಾನು ಪುಣೆಯಲ್ಲಿ ಬಿಜಿನೆಸ್ ಶುರುಮಾಡಿದೆ. ಹಾಗಾಗಿ ಅತ್ತ ಗಮನಹರಿಸಿದ್ದೆ. ಈಗ ಚಿತ್ರರಂಗಕ್ಕೆ ಬಂದು “ವೆಡ್ಡಿಂಗ್ ಗಿಫ್ಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ. ಕೆಲವು ಹೆಣ್ಣು ಮಕ್ಕಳು ಕಾನೂನನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದೇ ಕಥಾಹಂದರ.

ಹಿರಿಯ ನಟಿ ಪ್ರೇಮ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಶಾಂತ್, ಸೋನು ಗೌಡ, ಅಚ್ಯುತಕುಮಾರ್, ಪವಿತ್ರ ಲೋಕೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈಗ ಹಾಡುಗಳ ಬಿಡುಗಡೆಯಾಗಿದೆ. ಮೇ ತಿಂಗಳನ್ನು‌ ಪ್ರಚಾರಕ್ಕೆ ಮೀಸಲಿಟ್ಟು, ಜೂನ್ ನಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ವಿಕ್ರಂಪ್ರಭು.

ನಾನು ದುಡ್ಡಿಗಾಗಿ ಸಿನಿಮಾ ಮಾಡುವವಳಲ್ಲ. ಉತ್ತಮ ಕಥೆ ಇದ್ದರೆ ಮಾತ್ರ ಮಾಡುತ್ತೇನೆ.‌ ವಿಕ್ರಂಪ್ರಭು ಅವರು ಈ ಚಿತ್ರದ ಕಥೆ ಹೇಳಿದ ತಕ್ಷಣ ಮಾಡಬೇಕೆನಿಸಿತು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾಯಕನ ಪರ ವಕಾಲತ್ತು ವಹಿಸುವ ವಕೀಲೆಯಾಗಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಹಿರಿಯ ನಟಿ ಪ್ರೇಮ.

ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಶುಭ ಕೋರಿದರು. ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

Related Posts

error: Content is protected !!