ಮಾರ್ಚ್ 17… ಈ ದಿನಕ್ಕಾಗಿ ಇಡೀ ಕರುನಾಡೇ ಕಾಯುತ್ತಿದೆ… ಅದಕ್ಕೆ ಕಾರಣ ಅಂದು ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಹೌದು. ಅಂದು ಅವರ ಫ್ಯಾನ್ಸ್ ಸೇರಿದಂತೆ ಕನ್ನಡಿಗರಿಗೆ ಡಬಲ್ ಧಮಾಕ. ಪುನೀತ್ ಇಲ್ಲ ಎಂಬ ಭಾವನೆ ಈಗ ಯಾರಲ್ಲೂ ಇಲ್ಲ. ಹಾಗಾಗಿ, ಅವರ ಬಹುನಿರೀಕ್ಷಿತ ಸಿನಿಮಾ ಜೇಮ್ಸ್ ಚಿತ್ರ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗುತ್ತಿದೆ. ಆ ಚಿತ್ರವನ್ನು ಅದ್ಧೂರಿಯಾಗಿಯೇ ಸ್ವಾಗತಿಸಲು ಕನ್ನಡ ಚಿತ್ರರಂಗ ಕೂಡ ಸಜ್ಜಾಗಿದೆ. ಜೇಮ್ಸ್ ರಿಲೀಸ್ ಆಗುತ್ತಿದೆ ಅನ್ನುವ ವಿಷಯವೇ ಅದೊಂದು ಹಬ್ಬ. ಪುನೀತ್ ರಾಜ್ಕುಮಾರ್ ಅಭಿನಯದ ಕೊನೆ ಸಿನಿಮಾ ಆಗಿರುವುದರಿಂದ ಅದಕ್ಕೆ ಕೋಟ್ಯಾಂತರ ಕನ್ನಡಿಗರು ಸಿನಿಮಾ ನೋಡುವ ಕಾತುರದಲ್ಲಿದ್ದಾರೆ. ‘ಜೇಮ್ಸ್’ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಚಿತ್ರ ರಿಲೀಸ್ ಆಗುತ್ತಿದೆ ಎಂಬ ಒಂದೇ ಒಂದು ಕಾರಣಕ್ಕೆ ಅಂದು ಬೇರೆ ಯಾವುದೇ ಸಿನಿಮಾಗಳೂ ರಿಲೀಸ್ ಆಗುತ್ತಿಲ್ಲ. ಹಾಗಾಗಿಯೇ ಆ ಒಂದು ವಾರ ಜೇಮ್ಸ್ ಜಾತ್ರೆ ಜೋರು…
ಬಹುಶಃ ‘ಜೇಮ್ಸ್’ ಚಿತ್ರದ ಸಂಭ್ರಮಕ್ಕೆ ಒಂದುವಾರ ಸಾಕಾಗುವುದಿಲ್ಲ ಬಿಡಿ. ಅಷ್ಟರ ಮಟ್ಟಿಗೆ ಚಿತ್ರದ ಬಗ್ಗೆ ಸಿಕ್ಕಾ ಪಟ್ಟೆ ಕ್ರೇಜ್ ಹುಟ್ಟುಕೊಂಡಿದೆ. ಈ ಚಿತ್ರದ ಮೂಲಕ ಮತ್ತೆ ನಗುಮೊಗದ ನಟ ಪುನೀತ್ ರಾಜ್ಕುಮಾರ್ ಅವರನ್ನು ನೋಡಿ ಪುನೀತರಾಗಲು ಸಜ್ಜಾಗುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರ ಬಿಡುಗಡೆಯ ವಿಷಯದಲ್ಲಿ ದಾಖಲೆ ಬರೆಯುತ್ತಿದೆ. ‘ಜೇಮ್ಸ್’ ಚಿತ್ರಕ್ಕೆ ಸಿನಿಮಾ ಮಂದಿ ಹಾಗು ನೋಡುಗರು ಸಹ ದಾರಿ ಮಾಡಿ ಕೊಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಮೇಲಿನ ಪ್ರೀತಿ, ಅಭಿಮಾನಕ್ಕೆ ಅಂದು ಬೇರೆ ಯಾವ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಕರ್ನಾಟಕದಲ್ಲಿ ಆ ವಾರ ‘ಜೇಮ್ಸ್’ ಬಿಟ್ಟು ಬೇರೆ ಯಾವ ಚಿತ್ರ ಬರುತ್ತಿಲ್ಲ. ಒಂದು ವೇಳೆ ಪರಭಾಷೆ ಸಿನಿಮಾಗಳು ರಿಲೀಸ್ ಆದರೂ, ಕರ್ನಾಟಕದಲ್ಲಿ ಆ ಚಿತ್ರಗಳಿಗೆ ಹೆಚ್ಚು ಪ್ರಾಶಸ್ತ್ಯ ಇರೋದಿಲ್ಲ ಬಿಡಿ.
‘ಜೇಮ್ಸ್’ ಈಗ ಎಲ್ಲರಿಗೂ ವಿಶೇಷ ಮತ್ತು ಪ್ರೀತಿಯ ಸಿನಿಮಾ. ಯಾಕೆಂದರೆ ‘ಜೇಮ್ಸ್’ ಸಿನಿಮಾ ಜೊತೆಗೆ ಬೇರೆ ಯಾವ ಸಿನಿಮಾ ಬರುತ್ತಿಲ್ಲ. ಬಹುತೇಕ ಚಿತ್ರಮಂದಿರಗಳಲ್ಲೂ ‘ಜೇಮ್ಸ್’ ರಾರಾಜಿಸುತ್ತದೆ. ಹಾಗಾಗಿ ‘ಜೇಮ್ಸ್’ ಗಳಿಕೆಯಲ್ಲೂ ಕೂಡ ಹೊಸ ದಾಖಲೆ ಬರೆಯೋದು ಗ್ಯಾರಂಟಿ ಎಂಬ ಮಾತುಗಳು ಗಾಂಧಿನಗರದಲ್ಲಿ ಗುನುಗುತ್ತಿದೆ. ಹೌದು ‘ಜೇಮ್ಸ್’ ಸಿನಿಮಾ ನೋಡಲು ಸಣ್ಣ ಮಕ್ಕಳಿಂದ ಹಿಡಿದು, ವಯಸ್ಸಾದವರೂ ಎದುರು ನೋಡುತ್ತಿದ್ದಾರೆ. ಅದರಲ್ಲೂ ಪುನೀತ್ ಅವರಿಗೆ ಫ್ಯಾಮಿಲಿ ಆಡಿಯನ್ಸ್ ಹೇರಳವಾಗಿದ್ದಾರೆ. ಮೊದಲ ವಾರದಲ್ಲೇ ಜೇಮ್ಸ್ 100 ಕೋಟಿ ಗಳಿಕೆ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೊದಲ ನಾಲ್ಕೇ ದಿನದಲ್ಲಿ ‘ಜೇಮ್ಸ್’ 100 ಕೋಟಿಯತ್ತ ಸಾಗುತ್ತೆ ಎಂದು ಅಂದಾಜಿಸಲಾಗುತ್ತಿದೆ.
ಪುನೀತ್ ಸಿನಿಮಾ ಅಂದರೆ, ಅದು ಕೇವಲ ಕರುನಾಡಿಗೆ ಮಾತ್ರ ಸೀಮಿತವಲ್ಲ. ಪರ ರಾಜ್ಯ ಸೇರಿದಂತೆ ವಿದೇಶಗಳಲ್ಲೂ ಅವರ ಸಿನಿಮಾಗಳ ಅಬ್ಬರ ಜೋರು. ಹೀಗಾಗಿ ‘ಜೇಮ್ಸ್’ ಕೂಡ ವಿದೇಶದಲ್ಲಿ ಜೋರಾಗಿಯೇ ರಾರಾಜಿಸಲಿದೆ. ಈಗಾಗಲೇ ‘ಜೇಮ್ಸ್’ ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳ ಪಟ್ಟಿ ಕೂಡ ಬಿಡುಗಡೆಯಾಗಿದೆ. ಕೆನಡ, ನೆದರ್ಲ್ಯಾಂಡ್ನಲ್ಲಿ’ಜೇಮ್ಸ್’ ತೆರೆಕಾಣಲಿದೆ ಎನ್ನುವ ಪಟ್ಟಿ ಬಿಡುಗಡೆಯಾಗಿದೆ. ಅಪ್ಪುಗೆ ವಿಶ್ವಾದ್ಯಂತ ಅಭಿಮಾನಿಗಳು ಇರುವ ಕಾರಣ, ವಿದೇಶಗಳಲ್ಲೂ ಕೂಡ ‘ಜೇಮ್ಸ್’ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಅಪ್ಪು ಅವರನ್ನು ಜೇಮ್ಸ್ ಮೂಲಕ ಅಪ್ಪಿಕೊಳ್ಳಲು ಇಡೀ ಕರುನಾಡೇ ಸಜ್ಜಾಗಿರೋದಂತು ನಿಜ.
ಇನ್ನು, ಜೇಮ್ಸ್ ಚಿತ್ರ ಸುಮಾರು 4 ಸಾವಿರ ಪರದೆಗಳಲ್ಲಿ ರಾರಾಜಿಸಲಿದೆ ಎಂಬ ಮಾತಿದೆ. ಚಿತ್ರಕ್ಕೆ ಸಿಕ್ಕಿರುವ ಚಿತ್ರ ಮಂದಿರಗಳ ಸಂಖ್ಯೆ, ದಿನಗಳ ಲೆಕ್ಕಚಾರ ನೋಡಿದರೆ, ಜೇಮ್ಸ್ ಗಳಿಕೆ ವಿಚಾರದಲ್ಲೂ ಹೊಸದೊಂದು ದಾಖಲೆ ಬರೆದು ಮೈಲಿಗಲ್ಲು ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ ಬಿಡಿ.
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ