ಕಲಾವಿದ ಯತಿರಾಜ್ ನಿರ್ದೇಶಿಸಿ, ನಟಿಸಿರುವ “ಸೀತಮ್ಮನ ಮಗ” ಚಿತ್ರದ ಹಾಡುಗಳು ಹೊರಬಂದಿವೆ. ನಿರ್ದೇಶಕ ಕಮ್ ನಿರ್ಮಾಪಕ ಗುರು ದೇಶಪಾಂಡೆ ಸಾಂಗ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕೆಂಪೇಗೌಡ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲೇ ಈ ಚಿತ್ರ ನಿರ್ಮಾಣವಾಗಬೇಕಿತ್ತು. ಕಿಚ್ಚ ಸುದೀಪ್ ಅವರು ಸಹ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು. ಆದರೆ, ಕಾರಣಾಂತರದಿಂದ ಅದು ಆಗಲಿಲ್ಲ. ಈಗ ಕಾಲ ಕೂಡಿ ಬಂದಿದೆ. ನನ್ನ ಸ್ನೇಹಿತರೊಬ್ಬರ ಮೂಲಕ ಪರಿಚಿತರಾದ, ಉಪಾಧ್ಯಾಯರಾಗಿರುವ ಮಂಜುನಾಥ್ ನಾಯಕ್, ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ
ಚಿತ್ರದ ಚಿತ್ರೀಕರಣವನ್ನು ಚಿತ್ರದುರ್ಗದ ಬಳಿಯ ಪಂಡರಹಳ್ಳಿಯಲ್ಲಿ ಮಾಡಿದ್ದೇವೆ. ಸದ್ಯ ಸಂಗೀತ ನಿರ್ದೇಶಕ ವಿನು ಮನಸು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.
ಸದ್ಯದಲ್ಲೇ ನಮ್ಮ ಚಿತ್ರ ತೆರೆಗೆ ಬರಲು ಸಿದ್ದವಾಗಲಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ತಂತ್ರಜ್ಞರ ಕೈ ಚಳಕವೂ ಚೆನ್ನಾಗಿದೆ. ಎರಡು ಹಾಡುಗಳನ್ನು ಮಾನಸ ಹೊಳ್ಳ ಹಾಗೂ ಮೆಹಬೂಬ್ ಸಾಬ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇಸ್ಮು ಮ್ಯೂಸಿಕ್ ಮೂಲಕ ಈ ಹಾಡುಗಳು ಬಿಡುಗಡೆಯಾಗಿದೆ ಎಂದು ನಿರ್ದೇಶಕ ಯತಿರಾಜ್ ಸಿನಿಮಾ ಕುರಿತು ವಿವರಣೆ ನೀಡಿದರು.
ಮಕ್ಕಳ ಸಿನಿಮಾ ಮಾಡಬೇಕೆಂಬುದು ನನ್ನ ಬಹು ದಿನಗಳ ಕನಸು. ಅದರಲ್ಲೂ ನಮ್ಮ ಪಂಡರಹಳ್ಳಿಯಲ್ಲೇ ಚಿತ್ರೀಕರಣ ಮಾಡಬೇಕೆಂಬ ಆಸೆಯಿತ್ತು. ಬಹಳ ವರ್ಷಗಳ ನಂತರ ನನ್ನ ಆಸೆ ಈಡೇರಿದೆ. ನಾನು ಸಿನಿಮಾ ಆರಂಭಿಸುವುದಾಗಿ ಹೇಳಿದಾಗ ಸಾಕಷ್ಟು ಜನ ನಿರ್ದೇಶಕರು ಫೋನ್ ಮಾಡಿದ್ದರು. ಆದರೆ ನಾನು ಯತಿರಾಜ್ ಅವರಿಗೆ ಸಿನಿಮಾ ಮಾಡಲು ಹೇಳಿದೆ. ಯತಿರಾಜ್ ಬಿಟ್ಟರೆ ಯಾರಿಂದಲೂ ಇಷ್ಟು ಚೆನ್ನಾಗಿ ಚಿತ್ರ ನಿರ್ದೇಶನ ಮಾಡಲು ಆಗುತ್ತಿರಲಿಲ್ಲವೇನೋ? ಎಂಬುದು ನನ್ನ ಅನಿಸಿಕೆ ಎಂದರು ನಿರ್ಮಾಪಕ ಮಂಜುನಾಥ್ ನಾಯಕ್.
ಸಹ ನಿರ್ಮಾಪಕ ಸುಮಿತ್ ನಾಯಕ್, ಮುಪ್ಪಣ್ಣ ಗೌಡ್ರು, ಸಂಗೀತ ನಿರ್ದೇಶಕ ವಿನು ಮನಸು, ಇಸ್ಮು ಮ್ಯೂಸಿಕ್ ನ ಇಸ್ಮಾಯಿಲ್, ಸೀತಮ್ಮನ ಪಾತ್ರಧಾರಿ ಚೈತ್ರ ಶ್ರೀನಿವಾಸ್, ಸೀತಮ್ಮನ ಮಗನಾಗಿ ಅಭಿನಯಿಸಿರುವ ಚರಣ್ ಕಾಸಾಲ ಹಾಗೂ ನಟಿ ಸೋನು ಸಾಗರ ಚಿತ್ರದ ಕುರಿತು ಮಾತನಾಡಿದರು.