ಕನ್ನಡದಲ್ಲಿ”ಮಮ್ಮಿ”, “ದೇವಕಿ” ಯಂತಹ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್.ಹೆಚ್, “ಸೈತಾನ್” ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಪಾರ್ಥಿಬನ್ ಅವರು ನಿರ್ಮಾಣದಲ್ಲಿ ಲೋಹಿತ್ ಅವರಿಗೆ ಜೊತೆಯಾಗಿರುವುದು ವಿಶೇಷ. ಈ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಈ ವೇಳೆ ಅದಿತಿ ಪ್ರಭುದೇವ, ಭಾವನಾರಾವ್, ಸಮಾಜ ಸೇವಕಿ ಮಮತಾ ದೇವರಾಜ್, ಯುವರಾಜ್, ಸಂಭಾಷಣೆಕಾರ ಮಾಸ್ತಿ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅನುಶ್ರೀ ಅಭಿನಯಿಸುತ್ತಿರುವ ಈ ಚಿತ್ರವನ್ನು ಪ್ರಭಾಕರ್ ನಿರ್ದೇಶಿಸುತ್ತಿದ್ದಾರೆ.
ಲೋಹಿತ್ ಬಳಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಪ್ರಭಾಕರ್ ಅವರಿಗೆ ಇದು ಚೊಚ್ಚಲ ಚಿತ್ರ.
ನಾನು ನಿರೂಪಕಿಯಾಗಿ ಚಿತ್ರರಂಗಕ್ಕೆ ಬಂದಿದ್ದು. ಅನುಶ್ರೀ ಕೂಡ ನಿರೂಪಕಿಯಾಗಿ ಹೆಸರು ಮಾಡಿರುವವರು. ಲೋಹಿತ್ ಅವರ “ಮಮ್ಮಿ” ಚಿತ್ರ ನೋಡಿದ್ದೇನೆ. ಚಿಕ್ಕ ವಯಸ್ಸಿಗೆ ಉತ್ತಮ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಶೀರ್ಷಿಕೆ ಕೂಡ ಕುತೂಹಲ ಹುಟ್ಟಿಸಿದೆ. ಚಿತ್ರತಂಡಕ್ಕೆ ಒಳಿತಾಗಲಿ ಎಂದರು ನಟಿ ಅದಿತಿ ಪ್ರಭುದೇವ.
ನನ್ನ “ಗಾಳಿಪಟ” ಸಿನಿಮಾ ವೇಳೆಗೆ ಅನುಶ್ರೀ ಕೂಡ ವೃತ್ತಿ ಜೀವನ ಆರಂಭಿಸಿದ್ದು. ಆನಂತರ ನಿರೂಪಕಿಯಾಗಿ ಅವರು ಎಷ್ಟು ಹೆಸರು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಭಾವನಾರಾವ್.
ಮಾಸ್ತಿ, ಮಮತಾ ದೇವರಾಜ್ ಹಾಗೂ ಯುವರಾಜ್ ಸಹ ತಮ್ಮ ಪ್ರೋತ್ಸಾಹದ ಮಾತುಗಳ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಎಸ್ ಎಂ ಪಿ ಪ್ರೊಡಕ್ಷನ್ಸ್ ಹಾಗೂ ಲೋಹಿತ್ ಹೆಚ್ ಪ್ರೊಡಕ್ಷನ್ಸ್ ಮೂಲಕ ಗೆಳೆಯ ಪಾರ್ಥಿಬನ್ ಹಾಗೂ ನನ್ನ ಸೋದರ ಪುನೀತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನನ್ನ ಜೊತೆ ಕೆಲಸ ಮಾಡಿರುವ ಪ್ರಭಾಕರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅನುಶ್ರೀ ಅವರು ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲರ ಅಭಿನಯ ಚೆನ್ನಾಗಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮಾಸಾಂತ್ಯಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆ ಎಂದರು ಲೋಹಿತ್.
ನಾನು ಈ ಚಿತ್ರದಲ್ಲಿ ಅಭಿನಯಿಸಲು ಕಾರಣ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅವರೆ ನನಗೆ ಲೋಹಿತ್ ಅವರ ಪರಿಚಯ ಮಾಡಿಸಿದ್ದು. ಈ ಬಗ್ಗೆ ಇಮ್ರಾನ್ ನನಗೆ ಹೇಳಿದಾಗ ನಾನು ಬೇಡ ಅಂದೆ. ಕಿರುತೆರೆಯಲ್ಲಿ ಆರಾಮವಾಗಿದ್ದೀನಿ ಅಂತಲೂ ಹೇಳಿದ್ದೆ. ನಂತರ ಅವರು ಕಥೆ ಕೇಳಿ ಅಂದರು. ಲೋಹಿತ್ ಹೇಳಿದ ಕಥೆ ಕೇಳಿ ಅಭಿನಯಿಸಲು ಒಪ್ಪಿಕೊಂಡೆ. “ಉಪ್ಪು ಹುಳಿ ಖಾರ” ಚಿತ್ರದ ನಂತರ ಮತ್ತೊಮ್ಮೆ ನನ್ನ ರೀ ಎಂಟ್ರಿ ಅನ್ನಬಹುದು. ಇದರಲ್ಲಿ ಹೀರೋ, ಹೀರೋ ಇನ್ ಅಂತ ಏನು ಇಲ್ಲ. ಕಥೆಯೇ ನಿಜವಾದ ಹೀರೋ ಎನ್ನುತ್ತಾರೆ ಅನುಶ್ರೀ.
ಈ ಚಿತ್ರದಲ್ಲಿ ಅಭಿನಯಿಸಿರುವ ಗೌತಮ್ ಬಿ.ಎನ್, ಕೃತಿ, ಐಶ್ವರ್ಯ ಶಿಂಧೋಗಿ, ಸಾರಿಕಾ ರಾವ್, ಭಾರ್ಗವ ವೆಂಕಟೇಶ್, ಗ್ರೀಷ್ಮ ಶ್ರೀಧರ್, ಹರ್ಷ್, ಸಾರಿಕಾ ರಾವ್ ಮೊದಲಾದವರು ತಮ್ಮ ಅನುಭವ ಹಂಚಿಕೊಂಡರು.