ಭಾವುಕ ಪಯಣದ ಭಾವಚಿತ್ರ! ಇಲ್ಲಿ ಆತ್ಮಕಥೆಯೇ ಸುಚಿತ್ರಾ!!

ಚಿತ್ರ ವಿಮರ್ಶೆ

ಚಿತ್ರ: ಭಾವಚಿತ್ರ
ನಿರ್ದೇಶಕ: ಗಿರೀಶ್ ಕುಮಾರ್
ನಿರ್ಮಾಣ: ವಿನಾಯಕ ನಾಡಕರ್ಣಿ
ತಾರಾಗಣ: ಚಕ್ರವರ್ತಿ, ಗಾನವಿ, ಗಿರೀಶ್ ಬಿಜ್ಜಳ್, ಅವಿನಾಶ್, ಗಿರೀಶ್ ಕುಮಾರ್, ಕಾರ್ತಿ, ವಿನಾಯಕ ನಾಡಕರ್ಣಿ ಇತರರು.

ಕನ್ನಡದಲ್ಲಿ ಈಗಾಗಲೇ ಮರುಜನ್ಮದ ಕಥೆ ಇರುವ ಅನೇಕ ಚಿತ್ರಗಳು ಬಂದಿವೆ. ಅಷ್ಟೇ ಅಲ್ಲ, ಆತ್ಮ ಕಥೆಗಳೂ ಬಂದಿವೆ. ಅಂಥದ್ದೇ ಸಾರವಿರುವ ಭಾವಚಿತ್ರ ಸಿನಿಮಾ ಈ ವಾರ ತರೆ ಕಂಡಿದೆ.

ಮೊದಲಿಗೆ ಒಂದು ಸ್ಪಷ್ಟನೆ: ಇದು ಹೊಸಬರ ವಿನೂತನ ಪ್ರಯತ್ನ. ಹೊಸಬರ ಕೆಲವು ಸಿನಿಮಾಗಳ ಕಥೆಗಳಲ್ಲಿ ಆತ್ಮವೇ ಇರಲ್ಲ. ಅಂದರೆ, ಅಲ್ಲಿ ವಿಷಯೇ ಗೌಣ. ಆದರೆ, ಈ ಹೊಸಬರ ಕಥೆಯಲ್ಲಿ ‘ಆತ್ಮ’ ಬಲವಾಗಿದೆ. ಹಾಗಾಗಿ ನೋಡುಗರಿಗೂ ಒಂದಷ್ಟು ಆತ್ಮಾಭಿಮಾನ ಹೆಚ್ಚಿಸಿದರೆ ಅಚ್ಚರಿ ಇಲ್ಲ. ಇಲ್ಲಿ ಕಥೆ ಸರಳ. ಅದನ್ನು ತಕ್ಕಮಟ್ಟಿಗೆ ಸಾವಧಾನದಿಂದ ನೋಡುವಂತೆ ನಿರ್ದೇಶಕರ ನಿರೂಪಣೆ ಒಂದಷ್ಟು ಕೆಲಸ ಮಾಡಿದೆ. ಆರಂಭದಲ್ಲಿಯೇ ಸಿನಿಮಾ ಹಳಿ ತಪ್ಪಿ ಹೋಗುತ್ತಿದೆಯಾ ಎಂಬ ಪ್ರಶ್ನೆ ಹುಟ್ಟುತ್ತೆ. ಅದಕ್ಕೆ ಕಾರಣ, ಹಿಡಿತ ತಪ್ಪಿದ ಚಿತ್ರಕಥೆ. ಹೇಗೋ ನೋಡಿಸಿಕೊಂಡು ಹೋಗುವ ಸಿನಿಮಾದ ಮೊದಲರ್ಧ, ಅಲ್ಲಲ್ಲಿ ಸಣ್ಣಪುಟ್ಟ ಕುತೂಹಲ ಬಿಟ್ಟರೆ ಅಷ್ಟೇನೂ ಗಂಭೀರತೆಗೆ ದೂಡುವುದಿಲ್ಲ. ಪ್ರೇಕ್ಷಕ ಗಂಭೀರವಾಗುವುದೇ ದ್ವಿತಿಯಾರ್ಧ. ಮಧ್ಯಂತರ ಬಳಿಕ ಭಾವಚಿತ್ರ, ಮತ್ತಷ್ಟು ಕುತೂಹಲ ಕಾಯ್ದುಕೊಂಡು ಸಾಗುತ್ತೆ. ಕೆಲವು ಕಡೆ ಸಣ್ಣ ಸಣ್ಣ ಎಡವಟ್ಟುಗಳನ್ನು, ತಪ್ಪುಗಳನ್ನು ಹೊರತು ಪಡಿಸಿದರೆ, ಸಿನಿಮಾ ಭಾವುಕ ಪಯಣಕ್ಕೆ ಕರೆದೊಯ್ಯುತ್ತದೆ.

ಇಲ್ಲಿ ಪ್ರೀತಿ, ಗೆಳೆತನ, ಸಂಬಂಧ, ಬಾಂಧವ್ಯಗಳ ಮೌಲ್ಯ ಹೈಲೆಟ್. ಇಷ್ಟಕ್ಕೂ ಭಾವಚಿತ್ರದೊಳಗಿನ ಗುಟ್ಟೇನು ಎಂಬ ಪ್ರಶ್ನೆಗೆ ಉತ್ತರವಿದು ; ಇದೊಂದು ಭಾವನೆಗಳ ಜೊತೆ ಸಾಗುವ ಚಿತ್ರ. ಆ ಭಾವಚಿತ್ರದ ಚೌಕಟ್ಟಿನೊಳಗೆ ನೂರೆಂಟು ವಿಷಯಗಳು ಅಡಗಿವೆ. ಒಂದು ಫೋಟೋ ಸಾಕಷ್ಟು ವಿಷಯ ಹೇಳುತ್ತೆ, ನೂರಾರು ನೆನಪು ಹೊರಹಾಕುತ್ತೆ. ಅಂಥದ್ದೊಂದು ಅರ್ಥಪೂರ್ಣ ಕಥೆ ಇಲ್ಲಿದೆ.

ಕಥೆ ಏನು?

ನಾಯಕ ವಿಷ್ಣುಗೆ ಫೋಟೋ ಹುಚ್ಚು. ಸಮಯ ಸಿಕ್ಕಾಗೆಲ್ಲ ತನ್ನ ಫೋಟೋ ಜೊತೆ ಲಾಂಗ್ ಡ್ರೈವ್ ಹೋಗಿ ಬರುವ ಅಭ್ಯಾಸ. ಹಾಗೆ ಸಿಕ್ಕ ಸಮಯದಲ್ಲೇ ಹೆಗಲಿಗೊಂದು ಬ್ಯಾಗು ಹಾಕಿಕೊಂಡು ಬುಲೆಟ್ ಏರಿ ದೂರದೂರಿಗೆ ಹೋಗುತ್ತಾನೆ. ಕಣ್ಣಿಗೆ ಕಂಡಿದ್ದೆಲ್ಲವನ್ನು ಸೆರೆಹಿಡಿಯುತ್ತಾನೆ. ಹಾಗೆ ಸೆರೆ ಹಿಡಿಯೋ ವಿಷ್ಣು, ದೊಡ್ಡ ಕಲ್ಲುಬಂಡೆಯ ಚಿತ್ರ ತೆಗೆದಾಗ, ಆ ಕ್ಯಾಮೆರಾದಲ್ಲಿ ಬಂಡೆ ಮುಂದೆ ಒಂದು ವ್ಯಕ್ತಿಯ ಭಾವಚಿತ್ರ ಮೂಡುತ್ತೆ! ನಂತರ ಆ ಭಾವಚಿತ್ರ ಕಾಣೆ. ಅಲ್ಲಿಂದ ಕಥೆ ಕುತೂಹಲಕ್ಕೆ ಕರೆದೊಯ್ಯುತ್ತೆ. ಅತ್ತ ಗಾಬರಿಯಾಗುವ ವಿಷ್ಣು, ಕುತೂಹಲಕ್ಕೆ ಇನ್ನೊಂದು ಫೋಟೋ ಕ್ಲಿಕ್ಕಿಸುತ್ತಾನೆ.ಆಗ ಹುಡುಗ, ಹುಡುಗಿ ಜೊತೆಗಿನ ಭಾವಚಿತ್ರ ಮೂಡುತ್ತೆ!

ಆದರೆ ಆ ಜಾಗದಲ್ಲಿ ಏನೂ ಇರಲ್ಲ. ಫೋಟೋದಲ್ಲಿ ಮಾತ್ರ ಸೆರೆಯಾಗುತ್ತೆ. ಅಲ್ಲಿಗೆ ಕಥೆ ಇನ್ನಷ್ಟು ಗಂಭೀರವಾಗುತ್ತೆ. ಆ ಭಾವಚಿತ್ರ ವಿಚಿತ್ರ ಕುತೂಹಲ ಕೆರಳಿಸುತ್ತೆ. ಹಾಗಾದರೆ, ಅದು ಆತ್ಮಗಳ ಭಾವಚಿತ್ರವಾ? ಹೀಗೊಂದು ಪ್ರಶ್ನೆ ಮೂಲಕವೇ ಕ್ಲೈಮ್ಯಾಕ್ಸ್ ಹಂತದವರೆಗೂ ನೋಡಿಸಿಕೊಂಡು ಹೋಗುತ್ತೆ. ಹಾಗಾದರೆ, ಇದು ಆತ್ಮಕಥೆನಾ? ಆ ಭಾವಚಿತ್ರ ಯಾರದ್ದು? ಈ ಪ್ರಶ್ನೆ ಎದುರಾದರೆ, ಒಮ್ಮೆ ಚಿತ್ರ ನೋಡಲಡ್ಡಿಯಿಲ್ಲ.

ತಾಂತ್ರಿಕವಾಗಿ ಹೇಗಿದೆ?

ಇಲ್ಲಿ ಪ್ರತಿ ಪಾತ್ರಗಳು ವಿಶೇಷ ಎನಿಸುತ್ತವೆ. ಮುಖ್ಯವಾಗಿ ಚಿತ್ರ, ವಿಷ್ಣು, ಶಂಕರ, ಬಾಲ ಪಾತ್ರಗಳು ಗಮನ ಸೆಳೆಯುತ್ತವೆ. ಸಂಗೀತ ಇನ್ನಷ್ಟು ರುಚಿಸಬೇಕಿತ್ತು. ಒಂದು ಹಾಡು ಮಾತ್ರ ಗುನುಗುವಂತಿದೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಛಾಯಾಗ್ರಹಣ ಭಾವಚಿತ್ರದ ಮೇಲೆ ಅಲ್ಲಲ್ಲಿ ‘ಗ್ರಹಣ’ಬಿದ್ದಂತಾಗಿದೆ. ಸಂಕಲನ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿದೆ.

ಯಾರು ಹೇಗೆ?

ನಾಯಕ ಚಕ್ರವರ್ತಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಗಾನವಿ ಮತ್ತು ಗಿರೀಶ್ ಕುಮಾರ್ ‘ಆತ್ಮ’ ತೃಪ್ತಿ ಯಾದಂತೇ ನಟಿಸಿದ್ದಾರೆ. ಗಿರೀಶ್ ಬಿಜ್ಜಳ್, ಅವಿನಾಶ್, ಕಾರ್ತಿ, ವಿನಾಯಕ ನಾಡಕರ್ಣಿ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ.

Related Posts

error: Content is protected !!