ಇಕ್ಕಟ್ ಸಿನಿಮಾ ಮೂಲಕ ಮನರಂಜನೆಯ ರಸದೌತಣ ಉಣಬಡಿಸಿದ್ದ ನಾಗಭೂಷಣ್ ನಟನೆಯ ಮೇಡ್ ಇನ್ ಚೈನಾ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದೆ.
ಲಾಕ್ ಡೌನ್ ಟೈಮ್ ನಲ್ಲಿ ವಿದೇಶದಲ್ಲಿ ಲಾಕ್ ಆಗುವ ಪತಿ, ಸ್ವದೇಶಿ ನೆಲದಲ್ಲಿ ಪತ್ನಿ. ಈ ಗಂಡ ಹೆಂಡ್ತಿ ನಡುವಿನ ಪ್ರೀತಿ-ಗೀತಿ-ಇತ್ಯಾದಿ ನಡುವೆ ಒಂದಷ್ಟು ಜಗಳ ಓವರ್ ಆಲ್ ಆಗಿ ಮೇಡ್ ಇನ್ ಚೈನಾ ಫ್ಯಾಮಿಲಿ ಡ್ರಾಮಾ ಅನ್ನೋದು ಟೀಸರ್ ನಲ್ಲಿ ಗೊತ್ತಾಗುತ್ತಿದೆ. ನಾಗಭೂಷಣ್ ಇದ್ದಾರೆ ಅಂದರೆ ಅಲ್ಲಿ ಕಾಮಿಡಿಗೆ ಕೊರತೆ ಇರೋದಿಲ್ಲ. ಕಚಗುಳಿ ಇಡುವ ಕಾಮಿಡಿ ಡೈಲಾಗ್ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ಅದ್ಭುತ ನಟನೆ ಗಮನಸೆಳೆತಿದೆ. ಅದ್ರಲ್ಲೂ ಟೀಸರ್ ನಲ್ಲಿ ಮೂಡಿಬಂದಿರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಗಮನ ಸೆಳೆಯುತ್ತಿದೆ.
ಅಂದಹಾಗೆ, ಮೇಡ್ ಇನ್ ಚೈನಾ ಕನ್ನಡದ ಮೊದಲ ವರ್ಚುವಲ್ ಸಿನಿಮಾವಾಗಿದ್ದು, ಅಯೋಗ್ಯ, ರತ್ನಮಂಜರಿ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿದ್ದ ಪ್ರೀತಮ್ ತೆಗ್ಗಿನಮನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದ ಜೊತೆಗೆ ಗ್ರಾಫಿಕ್, ಎಡಿಟಿಂಗ್ ಹಾಗೂ ಸಿನಿಮಾಟೋಗ್ರಾಫಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ನಾಗಭೂಷಣ್ ಹೀರೋ ಆಗಿ ಬಣ್ಣ ಹಚ್ಚಿದ್ದು, ನಾಗಭೂಷಣ್ ಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಉಳಿದಂತೆ ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಮುಂತಾದವರು ನಟಿಸಿದ್ದಾರೆ.
ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಮೇಡ್ ಇನ್ ಚೈನಾ ಸಿನಿಮಾಗೆ ಕಥೆ ಬರೆದಿದ್ದು, ವೀವಾನ್ ರಾಧಾಕೃಷ್ಣ ಸಂಗೀತವಿದೆ. ಎನ್ ಕೆ ಸ್ಟುಡಿಯೋಸ್ ಬ್ಯಾನರ್ ನಡಿ ನಂದಕಿಶೋರ್ ಸಿನಿಮಾಗೆ ಬಂಡವಾಳ ಹೂಡಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಡಿ ಟಿಆರ್ ಚಂದ್ರಶೇಖರ್ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ.