ವಿಭಿನ್ನ ತ್ರಿಕೋನ ಪ್ರೇಮಕಥೆಯ ಮನಸಾಗಿದೆ ಸಿನಿಮಾ ಮೂಲಕ ಅಭಯ್ ಎಂಬ ಯುವ ಪ್ರತಿಭೆ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಫೆಬ್ರವರಿ 25 ರಂದು ರಾಜ್ಯಾದ್ಯಂತ ಬಿಡುಗಡೆಗೆಯಾಗಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ಗೆ ನಟ ಶ್ರೀಕಿ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಟ ಅಭಯ್ ನಿರ್ಮಾಪಕ ಚಂದ್ರಶೇಖರ್ ಅವರ ಪುತ್ರ. ಇನ್ನು ನಿರ್ಮಾಪಕರೇ ಚಿತ್ರದ ಕಥೆ ಬರೆದಿದ್ದಾರೆ. ಶ್ರೀನಿವಾಸ ಶಿಡ್ಲಘಟ್ಟ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ಮೇಘಶ್ರೀ ಹಾಗೂ ಅಥಿರಾ ಚಿತ್ರದ ನಾಯಕಿಯರು.
ಚಿತ್ರದಲ್ಲಿ ಪ್ರೀತಿ ಹುಡುಕಿಕೊಂಡು ಹೊರಟ ನಾಯಕನಿಗೆ ಇನ್ನೊಂದು ಪ್ರೀತಿ ಎದುರಾಗುತ್ತೆ. ಆಗ ನಾಯಕನಿಗೆ ತಾನು ಅರಸಿಕೊಂಡು ಹೋದ ಪ್ರೀತಿ ಸಿಗುತ್ತಾ, ಅಥವಾ ಎದುರಾದ ಪ್ರೀತಿ ಒಲಿಯುತ್ತಾ ಎನ್ನುವುದೇ ಮನಸಾಗಿದೆ ಚಿತ್ರದ ಕಥಾಹಂದರ.
ಟ್ರೇಲರ್ ರಿಲೀಸ್ ಮಾಡಿದ ನಟ ಶ್ರೀಕಿ, ಅಭಯ್ ಒಬ್ಬ ಪ್ರಾಮಿಸಿಂಗ್ ಹೀರೋ, ಬರ್ತ್ ಚಿತ್ರದಲ್ಲಿ ನನ್ನ ತಮ್ಮನಾಗಿ ಅಭಿನಯಿಸಿದ್ದ, ಆ್ಯಕ್ಷನ್, ಲವ್ ಎಲ್ಲದರಲ್ಲೂ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾನೆ. ನನ್ನ ಒಲವೇ ಮಂದಾರ ಚಿತ್ರಕ್ಕೆ ಡೈಲಾಗ್ ಬರೆದಿದ್ದ ರಘು, ಈ ಸಿನಿಮಾಗೂ ಸಂಭಾಷಣೆ ಬರೆದಿದ್ದಾರೆ, ಎಲ್ಲರಿಗೂ ಒಳ್ಳೇದಾಗಲಿ ಎಂದರು.
ನಿರ್ಮಾಪಕ ಚಂದ್ರಶೇಖರ್ ಮಾತನಾಡಿ, ನಾನಿವತ್ತು ತುಂಬಾ ಖುಷಿಯಲ್ಲಿದ್ದೇನೆ. ಅದಕ್ಕೆ ಕಾರಣ ಅಭಯ್, ಸಿನಿಮಾದಲ್ಲಿ ಆತ ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾನೆ. ಆತ ಗೆದ್ದೇ ಗೆಲ್ಲುತ್ತಾನೆ ಎಂಬ ಭರವಸೆ ಮೂಡಿದೆ. ಚಿತ್ರದಲ್ಲಿ ಬರೀ ಲವ್ ಮಾತ್ರ ಇಲ್ಲ, ಸಸ್ಪೆನ್ಸ್, ಆ್ಯಕ್ಷನ್, ಕಾಮಿಡಿ ಎಲ್ಲದರ ಮಿಳಿತವಾಗಿದೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತೆ, ಮಾನಸಹೊಳ್ಳ ಅದ್ಭುತ ಮೆಲೋಡಿ ಟ್ರ್ಯಾಕ್ ಮಾಡಿದ್ದಾರೆ, ಚಿತ್ರದಲ್ಲಿ ನಟಿಸಿರುವ ಇಬ್ಬರೂ ನಾಯಕಿಯರು ಅಭಯ್‌ಗೆ ಸಾಥ್ ನೀಡಿದ್ದಾರೆ. ಹಿಂದೆ ಜನವರಿ 18 ಕ್ಕೆ ಚಿತ್ರ ರಿಲೀಸ್ ಮಾಡಬೇಕೆಂಬ ಪ್ಲಾನಿತ್ತು, ಕೋವಿಡ್‌ನಿಂದ ಸಾಧ್ಯವಾಗಲಿಲ್ಲ, ಈಗ ಫೆ.25 ರಂದು ರಿಲೀಸ್ ಆಗಲಿದೆ ಎಂದರು.
ನಿರ್ದೇಶಕ ಶ್ರೀನಿವಾಸ ಶಿಡ್ಲಘಟ್ಟ, “ಎಲ್ಲರೂ ಒಳ್ಳೇ ಮನಸಿಟ್ಟು ಈ ಸಿನಿಮಾ ಮಾಡಿದ್ದೇವೆ, ಗೆಲ್ತೀವಿ ಎನ್ನುವ ಭರವಸೆಯಿದೆ. ಹೆಸರೇ ಹೇಳುವ ಹಾಗೆ ಇದೊಂದು ಲವ್ ಸಬ್ಜೆಕ್ಟ್ ಆದರೂ ಬೇರೆ ಥರದಲ್ಲಿ ಕಥೆ ನಿರೂಪಿಸುವ ಪ್ರಯತ್ನ ಮಾಡಿದ್ದೇವೆ, ಈವರೆಗೆ ಬಂದ ಎಲ್ಲ ಲವ್ ಸ್ಟೋರಿಗಳನ್ನು ಬಿಟ್ಟು ಹೊಸ ಕಂಟೆಂಟ್ ಈ ಚಿತ್ರದಲ್ಲಿದೆ ತಣ್ಣನೆಯ ಕ್ರೌರ್ಯ, ಮಿಸ್ ಅಂಡರ್‌ಸ್ಟಾಂಡಿಂಗ್ ಕಥೆಯೂ ಇದೆ. ಇಲ್ಲಿ ಯಾವುದೇ ವಿಲನ್ ಇಲ್ಲ, ಕ್ಲೈಮ್ಯಾಕ್ಸ್ ನಲ್ಲಿ ನಾಯಕ ತೆಗೆದುಕೊಳ್ಳುವ ದೃಢ ನಿರ್ಧಾರ ಎಲ್ಲಾ ರೀತಿಯ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ.
ಥ್ರಿಲ್ಲರ್ ಮಂಜು ಅವರು ನೀವು ಟೈಟಲ್‌ನಲ್ಲೇ ಗೆದ್ದಿದ್ದೀರಿ ಎಂದು ಆರಂಭದಿಂದಲೂ ನಮ್ಮ ಬೆನ್ನುತಟ್ಟುತ್ತಲೇ ಬಂದರು, ನಮ್ಮ ಬಜೆಟ್‌ಗೆ ತಕ್ಕಂತೆ ವಿಶೇಷವಾದ ಆಕ್ಷನ್ ಸೀನ್‌ಗಳನ್ನು ಮಾಡಿಕೊಟ್ಟರು ಎಂದು ಚಿತ್ರದಲ್ಲಿ ಕೆಲಸಮಾಡಿದ ತಂತ್ರಜ್ಞರೆಲ್ಲರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ನಾಯಕ ಅಭಯ್, ಆರಂಭದಿಂದ ನನಗ ತಂದೆಯೇ ಬ್ಯಾಕ್‌ಬೋನ್ ಆಗಿ ನಿಂತರು, ಈಗ ಜನರ ಅಭಿಪ್ರಾಯಕ್ಕಾಗಿ ಕಾದಿದ್ದೇನೆ ಎಂದು ಹೇಳಿದರು. ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಮಾತನಾಡಿ ನನ್ನ ಟ್ಯಾಲೆಂಟ್ ತೋರಿಸಲು ಒಳ್ಳೇ ಅವಕಾಶವಿತ್ತು. ಚಿತ್ರದ ಎಲ್ಲಾ ಹಾಡುಗಳನ್ನು ಯುವಪ್ರತಿಭೆಗಳ ಕೈಲೇ ಹಾಡಿಸಿದ್ದೇನೆ ಎಂದರು