ಕನ್ನಡದಲ್ಲಿ ಸಾಕಷ್ಟು ಪ್ರತಿಭೆಗಳ ಆಗಮನವಾಗುತ್ತಲೇ ಇದೆ. ಚಂದನವನದಲ್ಲಿ ತಾರೆಯಾಗಿ ಮಿನುಗಬೇಕೆಂಬ ಆಸೆ ಯಾರಿಗಿಲ್ಲ ಹೇಳಿ? ಗಾಂಧಿನಗರಕ್ಕೆ ಬರುವ ಬಹುತೇಕರು ತಾನು ಗಟ್ಟಿನೆಲೆ ಕಾಣಬೇಕು ಅಂತ ನೂರಾರು ಆಸೆ- ಆಕಾಂಕ್ಷೆಯಿಂದಲೇ ನಂಬಿಕೆಯ ಹೆಜ್ಜೆ ಇಡುತ್ತಾರೆ. ಹಾಗೆ ಬಂದು ಮೆಲ್ಲನೆ ತನ್ನ ಪ್ರತಿಭೆ ಮೂಲಕ ಗುರುತಿಸಿಕೊಂಡಿರುವ ನಟಿ ಪದ್ಮಿನಿ.
ಹೌದು, ಪದ್ಮಿನಿ ಅಪ್ಪಟ ಕನ್ನಡದ ಬೆಡಗಿ. ಈ ನಟಿಗೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರಬೇಕೆಂಬ ಬಯಕೆ. ಆ ನಿಟ್ಟಿನಲ್ಲಿ ಪದ್ಮಿನಿ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಅಂದಹಾಗೆ ಈಗಾಗಲೇ ಅವರು ಕನ್ನಡದ ಚಿತ್ರಗಳಲ್ಲಿ ನಟಿಸಿದ್ದಾರೆ. ರೂಮ್ ಬಾಯ್ ಹಾಗು ಡಿಎಸ್ ಎಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿವೆ.
ಉಳಿದಂತೆ ಪದ್ಮಿನಿ ಅವರು ಕಿರುತೆರೆಯಲ್ಲೂ ಒಂದು ಹೆಜ್ಜೆ ಇಡುವ ಉತ್ಸಾಹದಲ್ಲಿದ್ದಾರೆ. ಸಿನಿಮಾದ ಜೊತೆ ಜೊತೆಯಲ್ಲೇ ಪದ್ಮಿನಿ ಕಿರುತೆರೆಗೂ ಲಗ್ಗೆ ಇಡುವ ಸೂಚನೆ ನೀಡುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಸೀರಿಯಲ್ಸ್ ಜೊತೆ ಮಾತುಕತೆಯೂ ನಡೆಯುತ್ತಿದೆ ಎಂಬುದು ಅವರ ಮಾತು.
ಪದ್ಮಿನಿ ಅವರು, ಸಿನಿಮಾ ಬರುವ ಮುನ್ನ, ಮಾಡೆಲಿಂಗ್ ಕ್ಷೇತ್ರದಲ್ಲಿದ್ದರು. 2019 ರಲ್ಲಿ ನಡೆದ ಮಿಸ್ ಕರ್ನಾಟಕ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ನಂತರ ಒಂದಷ್ಟು ರಿಯಾಲಿಟಿ ಶೋಗಳು ಹಾಗು ಯುನಿರ್ವಸಿಟಿ ಕಾಲೇಜ್ ವೊಂದರ ಜಾಹಿರಾತು ಸೇರಿದಂತೆ ಹಲವು ಜಾಹಿರಾತಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲ, ಬೇರೆ ಭಾಷೆಗಳಿಂದಲೂ ಇವರಿಗೆ ಅವಕಾಶಗಳಿವೆ. ಸದ್ಯ ಕನ್ನಡದಲ್ಲೇ ಕೆಲಸ ಮಾಡಿ, ಇಲ್ಲಿ ಒಪ್ಪಿಕೊಂಡ ಪ್ರಾಜೆಕ್ಟ್ ಮುಗಿಸಿ ನಂತರ ಪರಭಾಷೆ ಕಡೆಗೂ ಗಮನಹರಿಸುತ್ತೇನೆ ಎನ್ನುತ್ತಾರೆ.
ಈಗ ಒಂದೆರೆಡು ಸಿರಿಯಲ್ಸ್ ಮಾತುಕತೆಯೂ ಸೀರಿಯಸ್ ಆಗಿ ನಡೆಯುತ್ತಿದೆ. ಹಾಗೊಂದು ವೇಳೆ ಅವಕಾಶ ಸಿಕ್ಕರೆ ಅಲ್ಲೇ ವಾಲುತ್ತೆನೆ ಎನ್ನುವ ಪದ್ಮಿನಿ ಅವರಿಗೆ ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸುವಾಸೆ. ಅಷ್ಟೇ ಅಲ್ಲ, ಕನ್ನಡದಲ್ಲಿ ಪ್ರತಿಭೆ ಗುರುತಿಸುವ ಕೆಲಸ ಆಗುತ್ತಿಲ್ಲ. ಮೊದಲು ಪ್ರತಿಭಾವಂತರಿಗೆ ಒಳ್ಳೆಯ ವೇದಿಕೆ ಸಿಗಬೇಕು. ಇಲ್ಲಿನವರೇ ನಮ್ಮನ್ನು ಗುರುತಿಸದಿದ್ದರೆ ಹೇಗೆ? ಎಂದು ಪ್ರಶ್ನಿಸುವ ಪದ್ಮಿನಿ, ಒಂದೊಳ್ಳೆಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಪದ್ಮಿನಿ ಕೇವಲ ಮಾಡಲಿಂಗ್ ಮತ್ತು ನಟನೆಯಷ್ಟೇ ಅಲ್ಲ, ಅವರು ಮೇಕಪ್ ಬಗ್ಗೆಯೂ ಸಾಕಷ್ಟು ತಿಳಿದುಕೊಂಡಿದ್ದಾರೆ. ಬ್ಯೂಟಿಷಿಯನ್ ಕುರಿತಂತೆ ಇಂಟರ್ ನ್ಯಾಷನಲ್ ಕೋರ್ಸ್ ಕೂಡ ಮಾಡಿದ್ದಾರೆ.
ಹಾಗೆಯೇ ಕಾಸ್ಟ್ಯೂಮ್ ಸೆನ್ಸ್ ಕೂಡ ಅವರಿಗಿದೆ. ಅದೇನೆ ಇರಲಿ, ಕನ್ನಡ ಸಿನಿಮಾಗಳನ್ನು ನೋಡಿಕೊಂಡು ಬಂದಿರುವ ಈ ನಟಿಗೆ ಒಳ್ಳೆಯ ಅವಕಾಶ ಬೇಕಿದೆ. ತಾನೊಬ್ಬ ನಟಿ ಅನ್ನುವುದಕ್ಕಿಂತಲೂ ಕಲಾವಿದೆ ಎನಿಸಿಕೊಳ್ಳುವ ಆಸೆ ಇದೆ.