ಕೆಲವು ಸಿನಿಮಾಗಳೇ ಹಾಗೆ. ಬಿಡುಗಡೆ ಮುನ್ನವೇ ಒಂದಷ್ಟು ಕುತೂಹಲ ಮೂಡಿಸಿಬಿಡುತ್ತವೆ. ಆ ಸಾಲಿಗೆ “ಕನ್ನೇರಿ” ಸಿನಿಮಾ ಕೂಡ ಅಂಥದ್ದೊಂದು ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ, ಈ ಹಿಂದೆ “ಮೂಕ ಹಕ್ಕಿ” ಚಿತ್ರ ನಿರ್ದೇಶಿಸಿದ್ದ ನೀನಾಸಂ ಮಂಜು. ಹೌದು, ನಿರ್ದೇಶಕ ನೀನಾಸಂ ಮಂಜು ಅವರು “ಮೂಕಹಕ್ಕಿ” ಮೂಲಕ ಒಂದೊಳ್ಳೆಯ ಕಥೆ ಹೇಳಿದ್ದರು. ಅದು ಎಲ್ಲರ ಮನ ಮುಟ್ಟಿತ್ತು. ಈಗ ಅವರು “ಕನ್ನೇರಿ” ಸಿನಿಮಾ ಮೂಲಕ ನೈಜ ಘಟನೆಯಾಧಾರಿತ ಕಥೆ ಹೇಳಲು ಸಜ್ಜಾಗಿದ್ದಾರೆ.
ಈಗಾಗಲೇ “ಬೆಟ್ಟ ಕಣಿವೆಗಳ ಹೊಟ್ಟೇಲಿ ಗೂಡುಕಟ್ಟಿ’ ಹಾಡಿನ ಮೂಲಕ ಗಮನಸೆಳೆದಿದ್ದ ಕನ್ನೇರಿ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. “ನೆಲೆ ಇರದ ಕಾಲು..” ಹಾಡು ರಿಲೀಸ್ ಆಗಿದೆ. ಈ ಲಿರಿಕಲ್ ವೀಡಿಯೋ ಎ2 ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ.
ಕಾಡ ಮಕ್ಕಳ ಒಡಲ ಬೇಗುದಿಯ ನೋವಿನ ಕಥೆ ಈ ಹಾಡಿನಲ್ಲಿದ್ದು ವಿ. ರಘು ಶಾಸ್ತ್ರಿ ಸಾಹಿತ್ಯ ಬರೆದು, ವಾಣಿ ಹರಿಕೃಷ್ಣ ಆ ಹಾಡಿಗೆ ದನಿಯಾಗಿದ್ದಾರೆ. ಸಾಕಷ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಿರುವ ‘ನೆಲೆ ಇರದ ಕಾಲು’ ಹಾಡನ್ನು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಅವರು ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ‘ಕನ್ನೇರಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅರ್ಚನಾ ಮಧು ಸೂಧನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅರುಣ್ ಸಾಗರ್, ಅನಿತಾ ಭಟ್, ಸರ್ದಾರ್ ಸತ್ಯ, ಎಂ.ಕೆ.ಮಠ್, ಕರಿಸುಬ್ಬು ಚಿತ್ರದಲ್ಲಿದ್ದಾರೆ.
ಕದ್ರಿ ಮಣಿಕಾಂತ್ ಸಂಗೀತವಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ಹಿಡಿದರೆ, ಸುಜಿತ್ ಎಸ್. ನಾಯಕ್ ಸಂಕಲನವಿದೆ. ಸದ್ಯ ಹಾಡಿನ ಮೂಲಕವೇ ಜೋರು ಸದ್ದು ಮಾಡುತ್ತಿರುವ ಕನ್ನೇರಿ ಹೊಸಬಗೆಯ ಸಿನಿಮಾವಂತೂ ಹೌದು. ಅಷ್ಟೇ ಅಲ್ಲ, ಮತ್ತೊಂದು ಭಾವುಕತೆ ಹೆಚ್ಚಿಸುವ ಸಿನಿಮಾ ಕೊಡುವ ಉತ್ಸಾಹದಲ್ಲಿ ನಿರ್ದೇಶಕರಿದ್ದಾರೆ.