“ಡೋಸ್” ಇದು ಕೊರೊನೊ ವ್ಯಾಕ್ಸಿನೇಷನ್ ಡೋಸ್ ಅಲ್ಲ. ಬದಲಾಗಿ ಚಿತ್ರವೊಂದರ ಹೆಸರು. ಹೌದು ಉತ್ಸಾಹಿ ಯುವ ತಂಡವೊಂದರ ವಿಶಿಷ್ಟ ಆಲೋಚನೆಯ ಚಿತ್ರವಿದು. ತಮ್ಮದೇ ಆದ ರೀತಿಯಲ್ಲಿ ಹೊಸದೊಂದು ಕಥಾ ಪ್ರಪಂಚವನ್ನು ಸಿನಿರಸಿಕರಿಗೆ ಕಟ್ಟಿಕೊಡುವ ಪ್ರಯತ್ನವನ್ನು “ಡೋಸ್” ಸಿನಿಮಾ ಮೂಲಕ ಹೊಸಬರ ತಂಡ ಮಾಡಲು ಹೊರಟಿದೆ.
ಆ ಪ್ರಯತ್ನದ ಮೊದಲ ಭಾಗವಾಗಿ ಚಿತ್ರದ ಮೊದಲ ಥೀಮ್ ಪೋಸ್ಟರ್ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಈ ಪೋಸ್ಟರ್ ರೀಲೀಸ್ ಮಾಡಿದ್ದಾರೆ. ಕಾನಿ ಸ್ಟುಡಿಯೋ ಡಿಸೈನ್ ಮಾಡಿರುವ ಈ ಪೋಸ್ಟರ್ ಹೊಸತನದ ಸ್ಪರ್ಶ ಹೊಂದಿದೆ. ಚಿತ್ರದ ಥೀಮ್ ಪೋಸ್ಟರ್ ಬಗ್ಗೆ ಈಗಾಗಲೇ ತುಂಬಾ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ಸಿಂಪಲ್ ಸುನಿ, ಜಯತೀರ್ಥ, ಭಜರಂಗಿ ಲೋಕಿ, ಗುರು ಶಿಷ್ಯರು ಜಡೇಶ್ ಕುಮಾರ್ ಮುಂತಾದವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ
ಧನಂಜಯ ದಿಡಗ ಈ ಚಿತ್ರದ ನಿರ್ದೇಶಕರು. ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ಕನ್ನಡದದ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ, ಗೀತರಚನೆಕಾರರಾಗಿ ಕೆಲಸ ಮಾಡಿದ್ದಾರೆ. ಸ್ವತಂತ್ರ ನಿರ್ದೇಶಕರಾಗಿ ಈಗಾಗಲೇ ಚಿತ್ರವೊಂದನ್ನು ನಿರ್ದೇಶಿಸಿದ್ದು, ಇದು ಇವರ ಎರಡನೇ ಚಿತ್ರವಾಗಿದೆ. “ಡೋಸ್” ಚಿತ್ರದಲ್ಲಿ ಅತ್ಯಂತ ವಿಭಿನ್ನ ರೀತಿಯ ಕಥೆಯ ಎಳೆಯನ್ನು ಇಟ್ಟುಕೊಂಡು, ಹೊಸ ತರದ ನಿರೂಪಣೆಯ ಮೂಲಕ, ಅತ್ಯಂತ ಗಾಢವಾದ ಭಾವ ಪ್ರಪಂಚ ವನ್ನು ಕಟ್ಟಿಕೊಡುವ ಪ್ರಯತ್ನವಿದೆ. ಚಿತ್ರ ಸೂಪರ್ ನ್ಯಾಚುರಲ್, ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನಲ್ಲಿರಲಿದೆ.
ಗರುಡ ಗಮನ ವೃಷಭ ವಾಹನ ಚಿತ್ರದ ಖ್ಯಾತಿಯ ಗೋಪಾಲಕೃಷ್ಣ ದೇಶಪಾಂಡೆ, ಒನ್ ಲವ್ ಟು ಸ್ಟೋರಿ ಚಿತ್ರದ ನಾಯಕ ನಟರಾಗಿದ್ದ ಸಂತೋಷ್ ಕುಮಾರ್, ಲವ್ 360 ಚಿತ್ರದ ನಾಯಕ ನಟರಾಗಿದ್ದ ಅರ್ಜುನ್ ಕಿಶೋರ್ ಚಂದ್ರ, ಬಬ್ಲುಷ ಚಿತ್ರದ ನಾಯಕ ನಟರಾಗಿದ್ದ ಹರ್ಷ್ ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ
ಜೊತೆಗೆ ಸಾಯಿ ಹರ್ಷ, ಸಂತು ಗೌಡ, ದರ್ಶನ್, ಸವಿತಾ ಹಿರೇಮಠ, ಆರ್ಯ ಮುಂತಾದವರ ತಾರಾಬಳಗವಿದೆ. ನವೀನ್ ಸೂರ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಂಕಟೇಶ್ ಯುಡಿವಿ ಸಂಕಲನವಿದೆ. ಮತ್ತು ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿ ಭೀಮೇಶ್, ಹರ್ಷ, ಅಪ್ಪು ಶಂಕರ್, ಭರತ್, ರಂಜಿತ್,
ಕೆಲಸ ಮಾಡುತ್ತಿದ್ದಾರೆ.
ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಚಿತ್ರತಂಡ ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಹೊರಡುವ ತಯಾರಿಯಲ್ಲಿದೆ. ಕುಂದಾಪುರದ ಸುತ್ತಲಿನ ಪ್ರದೇಶಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.
.