ಕರುನಾಡಿಗರ ಮನ ಗೆದಿದ್ದ ಬಾಲ ಪ್ರತಿಭೆ ಈಗ ದೂರ… ಬಲುದೂರ… ತುಂಟು ಮಾತಿಂದಲೇ ನಗಿಸಿದ್ದ ಸಮನ್ವಿ ಇನ್ನು ನೆನಪು ಮಾತ್ರ…

ನಮ್ಮಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾಲ ಪ್ರತಿಭೆ ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ನಿಜಕ್ಕೂ ಆಘಾತಕಾರಿ ವಿಷಯ. ತಾಯಿ ಮಗಳಿಬ್ಬರೂ ಹೋಗುತ್ತಿದ್ದ ವೇಳೆ ಕೋಣನಕುಂಟೆ ರಸ್ತೆಯಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಆರು ವರ್ಷದ ಮುಗ್ಧ ಬಾಲಕಿ ಸಮನ್ವಿ ಅಸುನೀಗಿದ್ದು ನಿಜಕ್ಕೂ ವಿಪರ್ಯಾಸ. ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು ಅನ್ನುವುದು ವಿಶೇಷ. ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಸಮನ್ವಿ, ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಕಿರುತೆರೆ ಲೋಕದಲ್ಲಿ ಮಿಂಚಿದ್ದರು

ಹೌದು… ಆಗಷ್ಟೇ ಚಿಗುರುತ್ತಿದ್ದ ಸುಪ್ತ ಪ್ರತಿಭೆಯೊಂದು ಕಣ್ಮರೆಯಾಗಿದೆ. ಅದು ಕೇವಲ ಕುಟುಂಬಕ್ಕೆ ಮಾತ್ರವಲ್ಲ ಕನ್ನಡ ಕಿರುತೆರೆ ಲೋಕಕ್ಕೇ ತುಂಬಲಾರದ ನಷ್ಟವೂ ಹೌದು. ನಮ್ಮಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾಲ ಪ್ರತಿಭೆ ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ನಿಜಕ್ಕೂ ಆಘಾತಕಾರಿ ವಿಷಯ. ನಟಿ ಅಮೃತಾ ನಾಯ್ಡು ಅವರ ಪುತ್ರಿ ಸಮನ್ವಿ. ಇವರಿಬ್ಬರೂ ಗುರುವಾರ ಸಂಜೆ ಸ್ಕೂಟಿಯಲ್ಲಿ ತಾಯಿ ಮಗಳಿಬ್ಬರೂ ಹೋಗುತ್ತಿದ್ದ ವೇಳೆ ಕೋಣನಕುಂಟೆ ರಸ್ತೆಯಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಆರು ವರ್ಷದ ಮುಗ್ಧ ಬಾಲಕಿ ಸಮನ್ವಿ ಅಸುನೀಗಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.
ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು ಅನ್ನುವುದು ವಿಶೇಷ. ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಸಮನ್ವಿ, ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಕಿರುತೆರೆ ಲೋಕದಲ್ಲಿ ಮಿಂಚಿದ್ದರು. ಅಷ್ಟೇ ಅಲ್ಲ, ನೋಡುಗರ ಮನ ಗೆದ್ದಿದ್ದರು. ಇದೀಗ ಈ ದುರ್ಘಟನೆ ಸಂಭವಿಸಿದೆ. ಅವರ ತಾಯಿ ಅಮೃತಾ ಅವರೂ ಸಹ ಈ ಘಟನೆಯಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ತಿಳಿಯುತ್ತಿದ್ದಂತೆಯೇ ಕಿರುತೆರೆ ಲೋಕ ದುಃಖದ ಮಡುವಿನಲ್ಲಿ ಮುಳುಗಿದೆ. ಅದರಲ್ಲೂ ಆ ಶೋನ ತೀರ್ಪುಗಾರರಾಗಿದ್ದ ನಟಿ ತಾರಾ, ಅನುಪ್ರಭಾಕರ್ ಮತ್ತು ಸೃಜನ್ ಲೋಕೇಶ್ ಸೇರಿದಂತೆ ಇತರರು ಸಮನ್ವಿ ನಿಧನದಿಂದ ಅಘಾತಗೊಂಡಿದ್ದಾರೆ. ನಟಿ ತಾರಾ ಅವರಿಗೆ ಈ ಘಟನೆ ಕುರಿತಂತೆ ಹಲವರು ಫೋನ್‌ ಮಾಡಿದಾಗಲೇ ಅವರಿಗೊಂದು ರೀತಿ ಆತಂಕ ಶುರುವಾಗಿತ್ತಂತೆ. ಅದರಲ್ಲೂ, ಸಮನ್ವಿ ಇನಿಲ್ಲ ಎಂಬ ಸುದ್ದಿ ಕೇಳಿದಾಕ್ಷಣ, ತಾರಾ ಅವರು ನಂಬಲೇ ಇಲ್ಲ. ಕಾರಣ, ಕಳೆದ ಏಳೆಂಟು ವಾರಗಳ ಕಾಲ ಆ ಹುಡುಗಿ ತಾರಾ ಅವರೊಂದಿಗೇ ಇದ್ದಳು. ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಹನ್ನೆರೆಡು ಮಂದಿ ಅಮ್ಮಂದಿರು, ಅವರ ಹನ್ನೆರೆಡು ಮಕ್ಕಳು ಜೊತೆಯಲ್ಲಿದ್ದರು. ಅವರ ಒಡನಾಟ ಹೆಚ್ಚಾಗಿತ್ತು. ಒಂದು ರೀತಿ ಆ ಶೋನಲ್ಲಿದ್ದ ಎಲ್ಲರೂ ಒಂದೇ ಕುಟುಂಬದಂತಿದ್ದರು. ಆದರೆ, ಪುಟ್ಟ ಪ್ರತಿಭೆ ಸಮನ್ವಿ ಇಲ್ಲ ಅನ್ನುವ ಸುದ್ದಿ ತಾರಾ ಸೇರಿದಂತೆ ಹಲವರಿಗೆ ಬರಸಿಡಿಲು ಬಡಿದಂತಾಗಿದೆ.


ಅಂದಹಾಗೆ, ಕಳೆದ ಎಪಿಸೋಡ್‌ನಲ್ಲಷ್ಟೆ ಅಮೃತಾ ನಾಯ್ಡು ಮತ್ತು ಸಮನ್ವಿ ಎಲಿಮಿನೇಟ್ ಆಗಿದ್ದರು. ಆ ಶೋನಿಂದ ಎಲಿಮಿನೇಟ್ ಆದಮೇಲೂ ಸಮನ್ವಿ ತಾಯಿ ಅಮೃತಾ ತಾರಾ ಅವರಿಗೆ ಫೋನ್‌ ಮಾಡಿ ಸಮನ್ವಿ ನಿಮ್ಮನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದಾಳೆ ಅಂದಿದ್ದರು. ಆಗ ತಾರಾ ಕೂಡ ಆಕೆಯನ್ನು ಸೆಟ್‌ಗೆ ಕರೆದುಕೊಂಡು ಬರುವಂತೆ ಹೇಳಿದ್ದರು. ಅದೇನೆ ಇರಲಿ, ಸಮನ್ವಿ ಪ್ರತಿಭಾವಂತೆ. ಆಕೆ ನಡೆಯುವುದು, ನಿಲ್ಲುವುದು, ಮಾತಾಡುವುದು ಎಲ್ಲವೂ ವಿಭಿನ್ನ ಮತ್ತು ವಿಶೇಷ ಎಂದು ಗುಣಗಾನ ಮಾಡಿರುವ ತಾರಾ, ಸಮನ್ವಿ ನೆನೆದು ಕಣ್ಣೀರಾಗಿದ್ದಾರೆ.

ಹಲವು ವರ್ಷಗಳಿಂದ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಸಮನ್ವಿ ತಾಯಿ ಅಮೃತಾ ನಾಯ್ಡು ಕೂಡ ನಟಿಸುತ್ತಿದ್ದಾರೆ. ಕನ್ನಡದ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ತನ್ನ ಮಗಳು ಸಮನ್ವಿ ಜೊತೆ ಕಾಣಿಸಿಕೊಂಡಿದ್ದು, ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು. ಕನ್ನಡದ ಮನೆ ಮನಗಳಲ್ಲಿ ನಮ್ಮಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಮಕ್ಕಳು ಸ್ಥಾನ ಪಡೆದುಕೊಂಡಿದ್ದಾರೆ. ವಾರಾಂತ್ಯ ಬಂದರೆ ಸಾಕು, ಮನೆಗಳಲ್ಲಿ ಆ ರಿಯಾಲಿಟಿ ಶೋ ಮುಂದೆ ಕೂತುಬಿಡುತ್ತಿದ್ದರು. ಅದರಲ್ಲೂ, ಅಲ್ಲಿ ಪಾಲ್ಗೊಂಡ ಮಕ್ಕಳ ಮಾತು ಕೇಳುವುದೇ ಖುಷಿಪಡಿಸುತ್ತಿತ್ತು. ಅಂತಹ ಮುದ್ದು ಮಕ್ಕಳಲ್ಲಿ ಕಲಾವಿದೆ ಅಮೃತಾ ನಾಯ್ಡು ಅವರ ಮಗಳು ಸಮನ್ವಿ ಕೂಡ ತನ್ನ ತುಂಟುತನದಿಂದಲೇ ಎಲ್ಲರ ಅಚ್ಚುಮೆಚ್ಚು ಎನಿಸಿಕೊಂಡಿದ್ದರು. ಆದರೆ, ವಿಧಿ ಅವಳನ್ನು ಬಿಡದೆ ಕರೆದೊಯ್ದಿದೆ. ಇದು ಕಿರುತೆರೆ ಮಾತ್ರವಲ್ಲ, ಇಡೀ ಕರುನಾಡೇ ಸಮನ್ವಿ ನೆನೆದು ದುಃಖ ಪಡುವಂತಾಗಿದೆ. ಎಲ್ಲರ ಮನಸ್ಸನ್ನೂ ಗಾಸಿಘೊಳಿಸಿಬಿಟ್ಟಿದೆ.

ಕೆಲವರು ಕಡಿಮೆ ಅವಧಿಯಲ್ಲೇ ಕೀರ್ತಿ ಗಳಿಸಿ ಸಂಭ್ರಮಿಸುವಂತೆ ಮಾಡಿಬಿಡುತ್ತಾರೆ. ಅಂತಹವರ ಸಾಲಿಗೆ ಈ ಸಮನ್ವಿ ಕೂಡ ಸೇರಿದ್ದಳು. ಆದರೆ, ಆ ಸಂಭ್ರಮ ಮಾತ್ರ ಹೆಚ್ಚು ದಿನ ಉಳಿಯಲೇ ಇಲ್ಲ. ಸಮನ್ವಿ ಜೀವ ಬಾರದ ಲೋಕಕ್ಕೆ ಹಾರಿ ಹೋಗಿದೆ.

ಸಮನ್ವಿ ಈಗ ನಮ್ಮೊಂದಿಗಿಲ್ಲ. ಆದರೆ, ಆಕೆಯ ತುಂಟಾದ ಮಾತುಗಳು, ಅವಳ ನಡೆ ಮತ್ತು ಮುಗ್ಧ ಪ್ರಶ್ನೆ ಉತ್ತರಗಳು ಮಾತ್ರ ಗುನಗುನಿಸುವಂತಿವೆ. ಚಿಕ್ಕವಯಸ್ಸಲ್ಲೇ ಸೈ ಎನಿಸಿಕೊಂಡು ನಕ್ಕು ನಲಿದಾಡುತ್ತಿದ್ದ ಸಮನ್ವಿ ಈಗ ಬರೀ ನೆನಪು ಮಾತ್ರ….

Related Posts

error: Content is protected !!