ತುಮಕೂರಿನ ಶಿರಾ ತಾಲೂಕಿನ ಬ್ರಹ್ಮಸಂದ್ರದಲ್ಲಿ ಜನವರಿ 19ರಂದು ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣಗೊಳ್ಳಲಿದೆ. ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಸಲಹೆ ಮೂಲಕ ಪುತ್ಥಳಿ ಸಜ್ಜಾಗಿದೆ. ಅದರ ಪೂರ್ಣ ವೆಚ್ಚವನ್ನು ವೀರಕಪುತ್ರ ಶ್ರೀನಿವಾಸ್ ಅವರೇ ವಹಿಸಿದ್ದಾರೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಂತಸದ ವಿಷಯ…
ವೀರಕಪುತ್ರ ಶ್ರೀನಿವಾಸ್, ಹಾಗೊಮ್ಮೆ ಈ ಹೆಸರು ಕೇಳಿದವರಿಗೆ ಥಟ್ಟನೆ ನೆನಪಾಗೋದೇ ಡಾ. ವಿಷ್ಣುವರ್ಧನ್. ಹೌದು ಅಪ್ಪಟ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿರುವ ಇವರು, ವಿಷ್ಣುವರ್ಧನ್ ಅವರ ಕುರಿತು ಸದಾ ಒಂದಿಲ್ಲೊಂದು ಕಾರ್ಯಕ್ರಮ ಮಾಡುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ, ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾಗಿ ಈಗಾಗಲೇ ಮರೆಯಲಾರದ ಅನೇಕ ಕಾರ್ಯಕ್ರಮ ರೂಪಿಸಿ ಸೈ ಎನಿಸಿಕೊಂಡಿದ್ದಾರೆ. ಸದಾ ವಿಷ್ಣುವರ್ಧನ್ ಅವರ ಬಗ್ಗೆ ಅಪಾರ ಕಾಳಜಿಯ ಮಾತುಗಳ ಮೂಲಕ ವಿಷ್ಣುವರ್ಧನ್ ಫ್ಯಾನ್ಸ್ ಗೆ ಅಚ್ಚುಮೆಚ್ಚಾಗಿರುವ ವೀರಕಪುತ್ರ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಮತ್ತೊಂದು ಮಹತ್ತರ ಕಾರ್ಯವಾಗುತ್ತಿದೆ. ಅದು ಬೇರೇನೂ ಅಲ್ಲ, ಡಾ.ವಿಷ್ಣುವರ್ಧನ್ ಅವರ ಪುತ್ಥಳಿ.
ಡಾ.ವಿಷ್ಣುವರ್ಧನ್ ಅವರ ಸಿನಿಮಾ ಪಯಣದಲ್ಲಿ ವೀರಪ್ಪನಾಯ್ಕ ಸಿನಿಮಾ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ಅದರ ಪಾತ್ರಕ್ಕೆ ಅತ್ಯಂತ ಮಹತ್ವವೂ ಇದೆ. ದೇಶಪ್ರೇಮವನ್ನು ಸಾರುವಂತಹ ಪಾತ್ರವದು. ಅತ್ಯಂತ ಪರಿಣಾಮಕಾರಿಯಾಗಿ ತೋರಿದ ಸಿನಿಮಾ ಎಂಬ ಹೆಗ್ಗಳಿಕೆಯೂ ಇದೆ. ಡಾ.ವಿಷ್ಣುವರ್ಧನ್ ಅವರ ಈ ಪಾತ್ರಕ್ಕೆ ರಾಜ್ಯಪ್ರಶಸ್ತಿ ಲಭಿಸಿತ್ತು. ಭಾರತ ಕ್ರಿಕೆಟ್ ತಂಡದ ವಿದೇಶ ಪ್ರವಾಸಕ್ಕೂ ಮುನ್ನ ಅಂದಿನ ಪ್ರಧಾನಿ ವಾಜಪೇಯಿ ಅವರು ನಮ್ಮ ಕ್ರಿಕೆಟಿಗರಿಗೆ ಈ ಸಿನಿಮಾ ತೋರಿಸಿ ಅವರಲ್ಲಿ ದೇಶಪ್ರೇಮದ ಉತ್ಸಾಹವನ್ನು ತುಂಬಿ ಕಳುಹಿಸಿದ್ದನ್ನು ಕನ್ನಡಿಗರು ಎಂದಿಗೂ ಮರೆಯುವಂತಿಲ್ಲ.
ಅಂತಹ ಮಹತ್ವದ ಪಾತ್ರವನ್ನು ಪುತ್ಥಳಿ ರೂಪದಲ್ಲಿಯೂ ಜೀವಂತವಾಗಿಡುವ ಪ್ರಯತ್ನವನ್ನು ಡಾ.ವಿಷ್ಣು ಸೇನಾ ಸಮಿತಿ ಮಾಡಿದೆ ಅನ್ನೋದೆ ಖುಷಿಯ ವಿಷಯ. ವರ್ಣಸಿಂಧು ಎಂಬ ಶಿಲ್ಪಿ ಯು ಈ ಪುತ್ಥಳಿಗೆ ಜೀವ ತುಂಬಿದ್ದಾರೆ. ವೀರಕಪುತ್ರ ಶ್ರೀನಿವಾಸ ಅವರು ಕೆಲ ಸಲಹೆ ಮತ್ತು ಅದಕ್ಕೆ ಅಗತ್ಯವಿದ್ದ ಹಣಕಾಸು ನೆರವನ್ನು ಒದಗಿಸಿ ಪುತ್ಥಳಿ ಅನಾವರಣಗೊಳ್ಳಲು ಸಹಕಾರಿಯಾಗಿದ್ದಾರೆ.
ಅಂದಹಾಗೆ, ಈ ಪುತ್ಥಳಿಯು ತುಮಕೂರಿನ ಶಿರಾ ತಾಲೂಕಿನ ಬ್ರಹ್ಮಸಂದ್ರದಲ್ಲಿ ಜನವರಿ 19ರ ಬೆಳಗ್ಗೆ 11 ಗಂಟೆಗೆ ಅನಾವರಣಗೊಳ್ಳಲಿದೆ ಎಂದು ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ತಿಳಿಸಿದ್ದಾರೆ.