ಪ್ರೋತ್ಸಾಹಿಸುವುದರಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಎತ್ತಿದ ಕೈ. ಮೊನ್ನೆ ಅಚಾನಕ್ ಜಿಲ್ಕಾ ಚಿತ್ರದ ಹೀರೋ ಕಮ್ ಡೈರೆಕ್ಟರ್ ಕವೀಶ್ ಶೆಟ್ಟಿ ಮೊಬೈಲ್ ಸದ್ದು ಮಾಡಿದೆ. ಕರೆ ರಿಸೀವ್ ಮಾಡಿದರೆ ಇನ್ನೊಂದು ಕಡೆಯಿಂದ ಹ್ಯಾಟ್ರಿಕ್ ಹೀರೋ ಶಿವಣ್ಣ! ಅವರ ಧ್ವನಿ ಕೇಳಿ ತಬ್ಬಿಬ್ಬಾಗಿದ್ದು ನಿಜ! ಅದರೊಂದಿಗೆ ಆಶ್ಚರ್ಯ ಕೂಡ ಆಯ್ತು ಎನ್ನುವ ಕವೀಶ್ ಶೆಟ್ಟಿ, ‘ಅಮೆಜಾನ್ ಪ್ರೈಮ್ ನಲ್ಲಿ ನಿಮ್ಮ ‘ಜಿಲ್ಕಾ’ ಸಿನಿಮಾ ನೋಡಿದೆ ತುಂಬಾ ಚೆನ್ನಾಗಿ ಮಾಡಿದ್ದೀರಿ, ಚಿತ್ರಕಥೆಯಿಂದ ಹಿಡಿದು ನಿಮ್ಮ ಅಭಿನಯ ಮತ್ತು ನಿರ್ದೇಶನ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಇಷ್ಟವಾಯ್ತು! ಹೆತ್ತವರು ಮತ್ತು ಹರೆಯದ ವಯಸ್ಸಿನ ಮಕ್ಕಳ ಜವಾಬ್ದಾರಿ ಮತ್ತು ತಪ್ಪುಗಳನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಚೆನ್ನಾಗಿ ವಿವರಿಸಿದ್ದೀರಿ’ ಎನ್ನುತ್ತಾ ಒಮ್ಮೆ ಭೇಟಿಯಾಗಲು ಕೂಡ ಹೇಳಿದ್ದಾರೆ.
ಶಿವಣ್ಣನ ಶಹಬ್ಬಾಸ್ ಇನ್ನಷ್ಟೂ ಹೆಚ್ಚಿನದನ್ನು ಮಾಡುವ ಉತ್ಸಾಹ ತುಂಬಿದೆ ಎನ್ನುವ ಕವೀಶ್ ಶೆಟ್ಟಿಯ ಮಾತಿನಲ್ಲಿ ಹೆಚ್ಚಿನ ಲವಲವಿಕೆಯಿತ್ತು. ಈಗಾಗಲೇ ಸಡಗರ ರಾಘವೇಂದ್ರ ನಿರ್ದೇಶನದ ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಕವೀಶ್ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೈಲಿಗಲ್ಲು ಸೃಷ್ಟಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣಿಸುತ್ತಿವೆ.