ಕೊರೊನಾದಿಂದ ಇಡೀ ಜಗತ್ತೇ ತತ್ತರಿಸಿದೆ ನಿಜ. ಅದರಿಂದ ಈಗಲೂ ಹೊರಬರಲಾಗದೆ ಹಲವು ಉದ್ಯಮಗಳು ಸಂಕಷ್ಟದಲ್ಲಿವೆ. ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಉದ್ಯಮಗಳೆಲ್ಲವೂ ಮತ್ತೆ ಕೊರೊನಾ ಭಯದಲ್ಲಿವೆ. ಹೌದು, ಎರಡನೇ ಅಲೆಯ ಹೊಡೆತಕ್ಕೆ ಭಾರೀ ಕಷ್ಟ-ನಷ್ಟಗಳನ್ನು ಅನುಭವಿಸಿದ್ದ ಮಂದಿ ಈಗ ಮತ್ತೊಂದು ಕೊರೊನಾ ಹೊಡೆತದ ಭೀತಿಯಲ್ಲಿರುವುದಂತೂ ನಿಜ. ಅದರಲ್ಲೂ ಚಿತ್ರರಂಗ ಇಂದಿಗೂ ಸಹ ಎರಡು ವರ್ಷಗಳಿಂದಲೂ ಸುಧಾರಿಸಿಕೊಳ್ಳುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಈಗ ಕೊರೊನಾ ಭಯ ಆವರಿಸಿದೆ. ಇತ್ತೀಚೆಗೆ ಕೊರೊನಾ ಸಂಖ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದ್ದು ನಿಜ. ಚಿತ್ರಮಂದಿರಗಳಲ್ಲಿ ಆಸನಗಳ ಭರ್ತಿ ಶೇ.೫೦ರಷ್ಟು ಇರಬೇಕೆಂಬ ನಿಯಮ ಜಾರಿಯಾಯ್ತು. ಅಲ್ಲದೆ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದರಿಂದ ದೊಡ್ಡ ಪೆಟ್ಟು ತಿನ್ನಬೇಕಾಯ್ತು.
ಚಿತ್ರಮಂದಿರಗಳತ್ತ ಸಿನಿಮಾ ಮಂದಿ ಮುಖ ಮಾಡುತ್ತಿದ್ದದ್ದೇ ವಿರಳ. ಹೇಗೋ, ಎರಡು ವರ್ಷಗಳ ಬಳಿಕ ಚಿತ್ರರಂಗ ಮೆಲ್ಲನೆ ಚೇತರಿಸಿಕೊಂಡಿತ್ತು. ಚಿತ್ರಮಂದಿರಗಳು ಬಾಗಿಲು ತೆರೆದವು. ಚಿತ್ರಗಳು ಬಿಡುಗಡೆಯಾದವು. ಜನರು ಹೋಗತೊಡಗಿದರು. ನೋಡ ನೋಡುತ್ತಿದ್ದಂತೆಯೇ, ಕೊರೊನಾ ಸಂಖ್ಯೆ ಮತ್ತೆ ಹೆಚ್ಚಿದ್ದರಿಂದ, ಈಗ ಮತ್ತೆ ಶೇ.೫೦ರಷ್ಟು ಇದ್ದ ಆಸನಭರ್ತಿ ಜಾರಿ ಆದೇಶ ಕೂಡ ರದ್ದಾಗಿ, ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಬೆಂಗಳೂರಲ್ಲಿ ಕಠಿಣ ರೂಲ್ಸ್ ಜಾರಿಯಾದರಂತೂ ಚಿತ್ರೋದ್ಯಮ ಮಾತ್ರವಲ್ಲ, ಇತರೆ ಕ್ಷೇತ್ರಗಳೂ ಆಘಾತಕ್ಕೊಳಗಾಗುತ್ತವೆ.
ಸದ್ಯ, ಸಿಎಂ ತುರ್ತು ಸಭೆ ಕರೆದಿದ್ದು, ಬಹುಶಃ ಕಠಿಣ ರೂಲ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ. ಮತ್ತೇನಾದರೂ, ಬಂದ್ ಆಗಿಬಿಟ್ಟರೆ, ಚಿತ್ರರಂಗದಲ್ಲಿರುವ ಕಾರ್ಮಿಕರು, ತಾಂತ್ರಿಕ ವರ್ಗದವರು, ಪೋಷಕ ಕಲಾವಿದರು, ಜೂನಿಯರ್ ನಟ,ನಟಿಯರಿಗೆ ನಿಜಕ್ಕೂ ಸಮಸ್ಯೆ ಎದುರಾಗುತ್ತೆ. ಕಳೆದ ಎರಡು ವರ್ಷಗಳಿಂದಲೂ ಈ ಸಮಸ್ಯೆಯಿಂದ ಹೊರಬರಲಾಗದೆ ಒದ್ದಾಡಲಾಗುತ್ತಿದೆ. ಈಗ ಮತ್ತದೇ ಸಮಸ್ಯೆ ಎದುರಾದರೆ ಗತಿ ಏನು? ಈ ಪ್ರಶ್ನೆ ಈಗ ಎಲ್ಲೆಡೆ ಗಿರಕಿ ಹೊಡೆಯುತ್ತಿದೆ.