ಮೇಕೆದಾಟು ಪಾದಯಾತ್ರೆಗೆ ಫಿಲ್ಮ್‌ ಚೇಂಬರ್‌ ಬೆಂಬಲ; ನಿರ್ದೇಶಕಿ ರೂಪ ಅಯ್ಯರ್‌ ಆರೋಪ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾಂಗ್ರೆಸ್‌ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ ಬೆಂಬಲ ಸೂಚಿಸಿರುವುದನ್ನು ಪ್ರಶ್ನಿಸಿ ಮಂಡಳಿ ಸದಸ್ಯರೇ ವಿರೋಧಿಸಿದ್ದಾರೆ. ಅಷ್ಟೇ ಅಲ್ಲ, ನಿರ್ದೇಶಕಿ ರೂಪ ಅಯ್ಯರ್‌ ಕೂಡ ವಿರೋಧ ವ್ಯಕ್ತಪಡಿಸಿದ್ದು, ಒಂದು ಪಕ್ಷವನ್ನು ಓಲೈಸುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕನ್ನಡ ಚಿತ್ರರಂಗ ರಾಜಕೀಯಕ್ಕೆ ಕಾಲಿಡಬಾರದು. ಒಂದು ಪಕ್ಷವನ್ನು ಓಲೈಸಿ ಪತ್ರಿಕಾ ಗೋಷ್ಠಿ ಮಾಡಿದ್ದು ತಪ್ಪು ಎಂದು ಆರೋಪಿಸಿದ್ದಾರೆ. ಈ ಹಿಂದೆ ಯಾವ ಪಕ್ಷದೊಂದಿಗೂ ಗುರುತಿಸಿಕೊಳ್ಳುವುದಿಲ್ಲ ಎಂದು ಫಿಲ್ಮ್‌ ಚೇಂಬರ್‌ ಹೇಳಿಕೊಂಡಿದ್ದರೂ, ಕಾಂಗ್ರೆಸ್‌ ಪಾದಯಾತ್ರೆಗೆ ಬೆಂಬಲ ಸೂಚಿಸಿದೆ. ಇದು ಕಾಂಗ್ರೆಸ್‌ ಹೋರಾಟವಾಗಿದೆ ಎಂದು ನಿರ್ದೇಶಕಿ ರೂಪ ಅಯ್ಯರ್ ಆರೋಪಿಸಿದ್ದಾರೆ.


ವಾಣಿಜ್ಯ ಮಂಡಳಿಯ ಅನೇಕ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಫಿಲ್ಮ್ ಚೇಂಬರ್ ಯಾವುದೇ ಪದಾಧಿಕಾರಿಗಳಿಗೂ ಇಷ್ಟವಾಗಿಲ್ಲ. ಯಾರೂ ಕೂಡ ಇಂತಹ ವೇದಿಕೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಇದು ಕರ್ನಾಟಕದ ಹೋರಾಟ ಅಂತ ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್‌ ಮುಖಂಡರು ನೇತೃತ್ವ ವಹಿಸಿ ಮಾಡುತ್ತಿರುವ ಪ್ರತಿಭಟನೆ ಅದು. ಹಾಗಾಗಿ ಅದೊಂದು ಪಕ್ಷದ ಹೋರಾಟವಾಗುತ್ತೆ. ನಮಗೆ ಎಲ್ಲಾ ಸರ್ಕಾರಗಳೂ ಬೇಕು. ಸಬ್ಸಿಡಿ ಸೇರಿದಂತೆ ಇನ್ನಿತರೆ ಯಾವುದೇ ನೆರವು ಬೇಕಾದರೂ ಆ ಸಮಯಕ್ಕೆ ಇರುವ ಸರ್ಕಾರದ ಮೊರೆ ಹೋಗಬೇಕು. ಹಾಗಾಗಿ ನಾವು ಒಂದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದು ತಪ್ಪು ಎಂದು ರೂಪ ಅಯ್ಯರ್‌ ಆರೋಪಿಸಿದ್ದಾರೆ.

ಕನ್ನಡ ನಾಡು, ನುಡಿ, ಜಲದ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಆದರೆ, ಒಂದು ಪಕ್ಷಕ್ಕೆ ಸೀಮಿತವಾಗಿ ಫಿಲ್ಮ್ ಚೇಂಬರ್ ನಿಲ್ಲಬಾರದು. “ಫಿಲ್ಮ್ ಚೇಂಬರ್ ನೂರಾರು ಹೋರಾಟ ಮಾಡಬಹುದು. ಮೂರು ವರ್ಷದಿಂದ ಸಬ್ಸಿಡಿ ಕೊಡುತ್ತಿಲ್ಲ. ಎಷ್ಟೋ ಜನ ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಂಡರು. ಅಂತಹ ಸಮಸ್ಯೆ ನಿವಾರಿಸಲು ಮುಂದಾಗಬೇಕು. ಅದು ಬಿಟ್ಟು ಪಕ್ಷವೊಂದು ಕರೆದರೆ, ಹೋಗಿ ಯಾಕೆ ಪಾದಯಾತ್ರೆ ಮಾಡಬೇಕು ಎಂಬು ಪ್ರಶ್ನಿಸಿರುವ ಅವರು, ಫಿಲ್ಮ್ ಚೇಂಬರ್ ಹೆಸರು ಬಳಸಿಕೊಂಡು ಮೇಕೆದಾಟು ಪಾದಯಾತ್ರೆಗೆ ಚಿತ್ರರಂಗದ ಸಹಮತವಿದೆ ಎಂದು ಹೇಳುವುದು ಹೇಗೆ? ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಸಹಕಾರ ಸಂಘಗಳು ಹೇಗಿರಬೇಕೋ, ನೀತಿ ನಿಯಮಗಳು ಹೇಗಿರಬೇಕೋ ಅದರಂತೆ ನಡೆದುಕೊಳ್ಳಬೇಕು ಎಂದಿದ್ದಾರೆ.

Related Posts

error: Content is protected !!