ಹರಿಕಥಾಮೃತ ಸಾರದಂತಹ ಮೇರುಕೃತಿ ನೀಡಿರುವ ದಾಸ ಶ್ರೇಷ್ಠ ಶ್ರೀಜಗನ್ನಾಥ ದಾಸರ ಕುರಿತಾದ “ಶ್ರೀ ಜಗನ್ನಾಥ ದಾಸರು” ಚಿತ್ರ ನಮ್ಮ ರಾಜ್ಯವಷ್ಟೇ ಅಲ್ಲದೇ, ಹೊರ ದೇಶದಲ್ಲೂ ಜನಮನಸೂರೆಗೊಂಡಿದೆ
ನಿರ್ದೇಶಕ ಮಧುಸೂದನ್ ಹವಾಲ್ದಾರ್, ಚಿತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಯಿಂದ ಖುಷಿಯಾಗಿದ್ದಾರೆ. ಈ ವೇಳೆ ಮಾತಾಡಿದ ಅವರು, ‘ ನಮ್ಮ ಚಿತ್ರಕ್ಕೆ ಸಿಕ್ಕಿರುವ ಪ್ರಶಂಸೆ ಕಂಡು ಆನಂದವಾಗಿದೆ. ಚಿತ್ರ ಆರಂಭಿಸಲು ಯೋಚನೆ ಮಾಡಿದಾಗ ನನ್ನ ಅನೇಕ ಸ್ನೇಹಿತರೆ, ಈಗಿನ ಕಾಲದಲ್ಲಿ ಈ ಸಿನಿಮಾ ಯಾರು ನೋಡುತ್ತಾರೆ ಎಂದಿದ್ದರು. ಆದರೆ ನಾನು ಧೃತಿಗೆಡಲಿಲ್ಲ. ಈ ಸಿನಿಮಾ ಮಾಡಿದ್ದೇನೆ. ಈ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ತ್ರಿವಿಕ್ರಮ ಜೋಶಿ ಅವರ ಸಹಕಾರ ಮುಖ್ಯ ಕಾರಣ. ಚಿತ್ರ ನೋಡಿರುವ ಪಂಡಿತ, ಪಾಮರರೆಲ್ಲರು ಈ ಚಿತ್ರದ ಎರಡನೇ ಭಾಗ ನೋಡುವ ಕಾತುರದಲ್ಲಿದ್ದೇವೆ ಎಂದರು. ಆದಷ್ಟು ಬೇಗ ಆರಂಭ ಮಾಡುತ್ತೇವೆ. ಕರ್ನಾಟಕ ಕಂಡ ಶ್ರೇಷ್ಠ ಹರಿದಾಸರಾದ ಶ್ರೀ ವಿಜಯದಾಸರು ಹಾಗೂ ಶ್ರೀ ಪ್ರಸನ್ನ ವೆಂಕಟದಾಸರ ಕುರಿತಾದ ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತಂತೆ ಸಿನಿಮಾ ಮಾಡುವ ಯೋಜನೆಯಿದೆ’ ಎಂದರು.
ನಮ್ಮ ಸಿನಿಮಾ ಇಷ್ಟು ಜನಪ್ರಿಯತೆ ಪಡೆಯಲು ಶ್ರೀ ಜಗನ್ನಾಥ ದಾಸರ ಆಶೀರ್ವಾದವೇ ಕಾರಣ. ಹೋದಲೆಲ್ಲಾ ಉತ್ತಮ ಚಿತ್ರ ನಿರ್ಮಾಣ ಮಾಡಿದ್ದೀರಿ ಎಂದು ಎಲ್ಲರೂ ಹೇಳುತ್ತಿರುವುದು ಕೇಳಿ ಕರ್ಣಾನಂದವಾಗಿದೆ. ಹಿಂದೆ ಮಂತ್ರಾಲಯ ಮಹಾತ್ಮೆ ಚಿತ್ರ ಬಿಡುಗಡೆಯಾದಾಗ ಜನ ಚಪ್ಪಲಿ ಬಿಟ್ಟು ಸಿನಿಮಾ ನೋಡಿದ್ದನ್ನು ಕೇಳಿದ್ದೆವು. ಈಗ ಈ ಚಿತ್ರವನ್ನು ಜನ ಹಾಗೆ ನೋಡುತ್ತಿದ್ದಾರೆ. ಕರ್ನಾಟಕದ ಜನರಿಗೆ ಎಷ್ಟು ಧನ್ಯವಾದ ತಿಳಿಸಿದರು ಸಾಲದು. ಸುಮಾರು ಹದಿನೆಂಟಕ್ಕು ಹೆಚ್ಚು ಹೊರದೇಶದಲ್ಲಿ ಈ ಚಿತ್ರ ವೀಕ್ಷಿಸಿದ್ದಾರೆ. ಇನ್ನೂ ಹೆಚ್ಚಿನ ದೇಶಗಳಲ್ಲಿ ಸದ್ಯದಲ್ಲೇ ಪ್ರದರ್ಶನವಾಗಲಿದೆ. ಕೆಲವು ಕಡೆ ದಾಸರ ವೇಷ ಧರಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಾ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಸಿನಿಮಾ ಆರಂಭಕ್ಕೂ ಒಂದು ಗಂಟೆ ಮುಂಚೆ ಭಜನಾ ಗೋಷ್ಠಿ ಏರ್ಪಡಿಸುತ್ತಿದ್ದಾರೆ. ಇದನೆಲ್ಲಾ ಕಂಡು ಕಣ್ತುಂಬಿ ಬರುತ್ತಿದೆ ಎನ್ನುತ್ತಾರೆ ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಶಿ.
ನನಗೆ ಇದು ಮೊದಲ ಚಿತ್ರ. ಈ ಚಿತ್ರದ ಸ್ಕ್ರಿಪ್ಟ್ ಕೊಟ್ಟಾಗ ಈಗಿನ ಟ್ರೆಂಡ್ ಬೇರೆ ಇದೆ. ಜನ ಒಪ್ಪಿಕೊಳ್ಳುತ್ತಾರಾ? ಎಂಬ ಆತಂಕವಿತ್ತು. ಈಗ ಆತಂಕ ದೂರವಾಗಿದೆ. ಚಿತ್ರ ಗೆದ್ದಿದೆ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ಜಗನ್ನಾಥ ದಾಸರ ಪಾತ್ರಧಾರಿ ಶರತ್ ಜೋಶಿ.
ನಟ ಪ್ರಭಂಜನ ದೇಶಪಾಂಡೆ, ಕಥೆ, ಚಿತ್ರಕಥೆ ರಚನೆಯಲ್ಲಿ ನಿರ್ದೇಶಕರಿಗೆ ನೆರವಾಗಿರುವ ಜೆ.ಎಂ.ಪ್ರಹ್ಲಾದ್, ಸಂಗೀತ ನಿರ್ದೇಶಕ ವಿಜಯ್ ಕೃಷ್ಣ ತಮ್ಮ ಅಭಿಪ್ರಾಯ ಹಂಚಿಕೊಂಡರು.