ಕನ್ನಡ ಸಿನಿ ಜಗತ್ತಿನಲ್ಲಿ ಹೊಸಬರ ಹೊಸತನದ ಒಂದಷ್ಟು ಸಿನಿಮಾಗಳು ಸದ್ದು ಮಾಡುತ್ತಿವೆ. ಈ ಸಾಲಿಗೆ ‘ಖಾಸಗಿ ಪುಟಗಳು’ ಎಂಬ ಹೊಸಬರ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಕಡಲ ದಡಿಯಲ್ಲಿ ಕುಳಿತು ಎರಡು ಮುದ್ದಾದ ಜೋಡಿಗಳು ಹಸಿವು ನೀಗಿಸಿಕೊಳ್ಳುತ್ತಿರುವ ಮನಮುಟ್ಟುವ ಪೋಸ್ಟರ್ ಕುತೂಹಲದ ಕಾರ್ಮೋಡದಂತಿದೆ.
ಖಾಸಗಿ ಪುಟಗಳು ಎಂಬ ಗಮನಸೆಳೆಯುವ ಈ ಸಿನಿಮಾವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶನ ಮಾಡುತ್ತಿದ್ದು, ಇದು ಇವರ ಮೊದಲ ಸಿನಿಮಾವಾಗಿದೆ. ಒಂದಷ್ಟು ಶಾರ್ಟ್ಮೂವಿಯಲ್ಲಿ ನಟಿಸಿದ್ದ ವಿಶ್ವ ಹಾಗೂ ಹಿಂದಿಯಲ್ಲಿ ‘ವೈ’ ಅನ್ನುವ ಸಿನಿಮಾವೊಂದರಲ್ಲಿ ನಟಿಸಿರುವ ಶ್ವೇತಾ ಡಿಸೋಜಾ ಈ ಸಿನಿಮಾದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಚೇತನ್ ದುರ್ಗಾ, ನಂದಕುಮಾರ್, ನಿರೀಕ್ಷಾ ಶೆಟ್ಟಿ, ಮೈಸೂರು ದಿನೇಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಮಂಜು ಡಿ ರಾಜ್, ವೀಣಾ ಡಿ ರಾಜ್, ಮಂಜುನಾಥ್ ಡಿಎಸ್ ಖಾಸಗಿ ಪುಟಗಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ವಿಶ್ವಜಿತ್ ರಾವ್ ಛಾಯಾಗ್ರಾಹಣ, ಆಶಿಕ್ ಕುಸುಗೊಳಿ ಸಂಕಲನ, ವಾಸುಕಿ ವೈಭವ್ ಸಂಗೀತ, ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಹಾಗೂ ವಿಶ್ವಜಿತ್ ರಾವ್ ಸಾಹಿತ್ಯ ಸಿನಿಮಾಕ್ಕಿದೆ.
ಉಡುಪಿಯ ಚೆಂದದ ಕರಾವಳಿ ತೀರದಲ್ಲಿ ಹುಟ್ಟುವ ಕಾಲೇಜು ಹುಡುಗರ ಪ್ರೇಮವೇ ಪ್ರಧಾನ ಕಥಾಹಂದರದ ಖಾಸಗಿ ಪುಟಗಳು ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲಿಯೇ ಸಿನಿಮಾ ತಂಡ ಹಾಡುಗಳನ್ನು ರಿಲೀಸ್ ಮಾಡಲಿದೆ.