ನಾನು ಈ ಹಾಡನ್ನು ಪುನೀತ್ಗಾಗಿ ಎಂದಿಗೂ ಹೇಳಿರಲಿಲ್ಲ. ಇದೇ ಮೊದಲು ಮತ್ತು ಇದೇ ಕೊನೆ. ಈ ಹಾಡನ್ನು ಮತ್ತೆ ಹಾಡುವುದಿಲ್ಲ…
ಗೆಳೆಯ ಪುನೀತ್ ನೆನೆದು ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಭಾವುಕರಾಗಿ ಗೆಳೆಯ ಗೆಳೆಯ… ಅಂತ ಹೇಳಿದ ಹಾಡಿದು. ರಾಜ ಮೌಳಿ ನಿರ್ದೇಶನದ ಬಹು ನಿರೀಕ್ಷಿತ ಆರ್ ಆರ್ ಆರ್ ಜನವರಿ 7 ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಇದರ ಪ್ರಚಾರಕ್ಕಾಗಿ ಇಡೀ ತಂಡ ಶುಕ್ರವಾರ ಬೆಂಗಳೂರಿಗೆ ಆಗಮಿಸಿತ್ತು. ನಿರ್ದೇಶಕ ರಾಜ ಮೌಳಿ, ನಿರ್ಮಾಪಕ ದಾನಯ್ಯ, ನಾಯಕ ನಟರಾದ ರಾಮ್ ಚರಣ್ ತೇಜ್, ನಾಯಕಿ ಆಲಿಯಾ ಭಟ್ ಸೇರಿದಂತೆ ಜೂನಿಯರ್ ಎನ್ ಟಿ ಆರ್ ಕೂಡ ಬಂದಿದ್ದರು. ಈಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಅಪ್ಪು ನೆನೆದು ಭಾವುಕರಾದರು.
ಪುನೀತ್ ಇಲ್ಲದ ಕರ್ನಾಟಕ ನನಗೆ ಶೂನ್ಯವಾಗಿ ಕಾಣುತ್ತಿದೆ. ಅವರು ಎಲ್ಲೇ ಇದ್ದರೂ ಅವರ ಆಶೀರ್ವಾದ ನನ್ನ ಮೇಲಿರುತ್ತೆ ಎಂದು ಭಾವುಕರಾದರು. ಅವರಿಗಾಗಿ ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಹಾಡು ಹಾಡಿ ಕಣ್ಣೀರಾದರು. ‘ ನಾನು ಈ ಹಾಡನ್ನು ಪುನೀತ್ಗಾಗಿ ಎಂದಿಗೂ ಹೇಳಿರಲಿಲ್ಲ. ಇದೇ ಮೊದಲು ಮತ್ತು ಇದೇ ಕೊನೆ. ಈ ಹಾಡನ್ನು ಮತ್ತೆ ಹಾಡುವುದಿಲ್ಲ ಎಂದು ಗೆಳೆಯಾ ಗೆಳೆಯಾ’ ಎಂದು ಹಾಡಿ ಕಣ್ಣಾಲೆಗಳನ್ನು ತೇವ ಮಾಡಿಕೊಂಡರು. ಇನ್ನು ಎನ್ಟಿಆರ್ ಕುಟುಂಬಕ್ಕೂ ಹಾಗೂ ರಾಜ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಪುನೀತ್ ಅವರ ಪಾರ್ಥಿವ ಶರೀರದ ದರ್ಶನಕ್ಕೂ ಜ್ಯೂ.ಎನ್ಟಿಆರ್ ಆಗಮಿಸಿ, ಗೌರವನ ನಮನ ಸಲ್ಲಿಸಿದ್ದರು. ನಟ ಪುನೀತ್ ಇಲ್ಲದ ಈ ಕ್ಷಣ ಅವರನ್ನು ನೆನೆದು ಜೂನಿಯರ್ ಎನ್ ಟಿಆರ್ ಭಾವುಕರಾಗಿದ್ದಕ್ಕೂ ಕಾರಣ ಇದೆ.
ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯ ಸ್ಟಾರ್ಗಳ ಜೊತೆಯೂ ಅಪ್ಪು ಸ್ನೇಹ ಹೊಂದಿದ್ದವರು. ಅದೇ ರೀತಿ ಟಾಲಿವುಡ್ ನ ಹೆಸರಾಂತ ನಟ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಜತೆಗು ಅದೇ ಸ್ನೇಹ ಹೊಂದಿದ್ದರು. ಅದೇ ಗೆಳೆತನದ ಮೂಲಕ ಚಕ್ರವ್ಯೂಹ ಚಿತ್ರಕ್ಕೆ ಹಾಡಿದ್ದರು. ಅದೇ ರೀತಿ ಕನ್ನಡದ ಜತೆಗೂ ಜೂನಿಯರ್ ಅವರದ್ದು ಅವಿನಾಭಾವ ನಂಟು. ಅವರ ತಾಯಿ ಕುಂದಾಪುರದವರು. ಅದೇ ಕಾರಣಕ್ಕೆ ಅವರಿಗೇನು ಕನ್ನಡ ಹೊಸದಲ್ಲ. ಹಾಗಾಗಿಯೇ ಈಗ ಆರ್ ಆರ್ ಆರ್ ಚಿತ್ರದ ಕನ್ನಡದ ಅವತರಣಿಕೆಗೂ ಅವರದ್ದೇ ವಾಯ್ಸ್ ಡಬ್ ಮಾಡಿದ್ದಾರೆ. ಆ ಬಗ್ಗೆಯೂ ಅವರು ಅಲ್ಲಿ ಮಾತನಾಡಿದರು.
. ‘ ನಾನು ಕನ್ನಡದ ಅವತರಣಿಕೆಗೂ ವಾಯ್ಸ್ ಕೊಡ್ಬೇಕು ಅನ್ನೋದು ರಾಜಮೌಳಿ ಸರ್ ಅವರ ಅಭಿಲಾಶೆ ಆಗಿತ್ತು. ಅವರು ಆಸೆಯಂತೆ ನಾನು ಕನ್ನಡಕ್ಕೆ ಡಬ್ ಮಾಡಲು ಒಪ್ಪಿಕೊಂಡೆ. ಅವರಿಗೂ ಕನ್ನಡ ಗೊತ್ತು. ನಂಗೂ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು. ಅಮ್ಮ ನಿಂದಲೇ ಕಲಿತಿದ್ದು. ಅವರು ಕೂಡ ಇದಕ್ಕೆ ಸಪೊರ್ಟ್ ಮಾಡಿದರು. ಹಾಗೆಯೇ ವರದರಾಜ್ ಅವರು ನಮಗೆ ಹೆಲ್ಪ್ ಮಾಡಿದ್ರು. ಅದರಿಂದಲೇ ನಾನು ಡಬ್ ಮಾಡಿದ್ದೇನೆ. ಟ್ರೇಲರ್ ನೋಡಿದ್ದೇನೆ . ಚೆನ್ನಾಗಿ ಬಂದಿದೆ.’ ಎನ್ನುತ್ತಾ ನಗು ಬೀರಿದರು.
ಅಮ್ಮ ಕನ್ನಡದವರು , ಅವರೇನಾದ್ರು ಹೆಲ್ಪ್ ಮಾಡಿದ್ರ ಎನ್ನುವ ಪ್ರಶ್ನೆಗೆ, ಹೌದು ಎಂದು ಉತ್ತರಿಸಿದರು. ‘ ಹೌದು ನಿಂಗೆ ಕನ್ನಡ ಗೊತ್ತು. ಆದ್ರೆ ಚೆನ್ನಾಗಿ ಮಾತಾನಾಡ್ಬೇಕು. ಯಾಕಂದ್ರೆ ಕನ್ನಡ ನಮ್ಮೂರು, ಅಲ್ಲಿ ನಮ್ಮವರು ಇದ್ದಾರೆ ಅಂತ ಸಲಹೆ ಕೊಟ್ಟಿದ್ದ ನ್ನು ನೆನಪಿಸಿಕೊಂಡರು. ಆರ್ಆರ್ಆರ್ ಪ್ರಮೋಷನ್ ಕಾರ್ಯಕ್ರಮದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಬಾಲಿವುಡ್ ಬ್ಯೂಟಿ ಆಲಿಯಾ ಭಟ್, ನಿರ್ದೇಶಕ ರಾಜಮೌಳಿ ಉಪಸ್ಥಿತರಿದ್ದರು.