ಸೌತ್ ಸಿನಿಮಾ ಇಂಡಸ್ಟ್ರಿಯ ಸೆನ್ಸೇಷನಲ್ ‘ಆರ್ಆರ್ಆರ್'ಚಿತ್ರದ ಟ್ರೈಲರ್ ಹೊರಬಿದ್ದಿದೆ.ತೆಲುಗು ಸೇರಿದಂತೆ ಕನ್ನಡ-ತಮಿಳು-ಮಲೆಯಾಳಂ ಹಿಂದಿ ಭಾಷೆಯಲ್ಲಿ ಅನಾವರಣಗೊಂಡಿದ್ದು ಜಕ್ಕಣ್ಣ ಹಾಲಿವುಡ್ ಮಂದಿಯನ್ನೂ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ.೩ ನಿಮಿಷ ೭ ಸೆಕೆಂಡ್ ಇರುವ ಟ್ರೈಲರ್ ಥ್ರಿಬ್ಬಲ್ ಆರ್ ಭವಿಷ್ಯವನ್ನು ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾ ಮಂದಿಯ ತಾಕತ್ತೇನು ಎಂಬುದನ್ನೇ ಇಡೀ ಜಗತ್ತಿಗೆ ತೋರಿಸುತ್ತಿದೆ.ಜಕ್ಕಣ್ಣನ ಕಲ್ಪನೆಯ
‘ಥ್ರಿಬ್ಬಲ್ ಆರ್’ ಕಥೆಗೆ ಟ್ರೈಲ್ಲರ್ರೇ ಕನ್ನಡಿ ಹಿಡಿಯುತ್ತಿದೆ. ‘ರೌದ್ರ-ರಣ-ರುಧೀರ'ಸಿನಿಮಾ ಎಷ್ಟು ಅದ್ಭುತವಾಗಿ-ಅದ್ದೂರಿಯಾಗಿ-ವೈಭವೊಪೇತವಾಗಿ ಮೂಡಿಬಂದಿರಬಹುದು ಎನ್ನುವ ಕಲ್ಪನೆಗೆ ಟ್ರೈಲರ್ ಜೀವ ತುಂಬುತ್ತಿದೆ.ಮಲ್ಟಿಸ್ಟಾರರ್ ಸಿನ್ಮಾ ಅಂದ್ರೆ ಹಿಂಗರ್ಬೇಕು ಎನ್ನುವುದರ ಜೊತೆಗೆ
ಚಿತ್ರರಂಗ ಒಂದು ಕುಟುಂಬವಿದ್ದಂತೆ ಅಂತ ಬಾಯ್ ಮಾತಿಗೆ ಹೇಳದೇ, ಜೂನಿಯರ್ ಎನ್ಟಿಆರ್ ಹಾಗೂ ರಾಮ್ಚರಣ್ ತೇಜಾರಂತೆ ಒಟ್ಟಿಗೆ ಅಭಿನಯಿಸಿ ತೋರಿಸ್ಬೇಕು’ ಎನ್ನುವ ಸೂಕ್ಷ್ಮತೆಯನ್ನು ಕೂಡ ಟ್ರೈಲರ್ರೇ ಹೇಳ್ತಿದೆ.
ಜಕ್ಕಣ್ಣನ ಮೆದುಳಿನಲ್ಲಿ ಮಿನುಗಿ ದೃಶ್ಯರೂಪಕ ಪಡೆದುಕೊಂಡಿರುವ ತ್ರಿಬಲ್ಆರ್' ಟ್ರೈಲರ್ ಏಕ್ದಮ್ ಜಕ್ಕಾಸ್ ಅಷ್ಟೇ.ಬಾಹುಬಲಿ ಸಾರಥಿ ಎಸ್.ಎಸ್. ರಾಜಮೌಳಿಯ ಸಿನಿಮಾಗಳಂದ್ರೆ ಅಲ್ಲಿ ಅದ್ದೂರಿತನಕ್ಕೆ ಕೊರತೆಯಿರಲ್ಲ, ಕೂತೂಹಲಕ್ಕೆ ಮಿತಿಯಿರುವುದಿಲ್ಲ,ಚಿತ್ರಪ್ರೇಮಿಗಳು ನಿರೀಕ್ಷೆ ಮಾಡಿದ್ದಕ್ಕಿಂತ ಒಂದು ತೂಕ ಜಾಸ್ತಿನೇ ಟ್ವಿಸ್ಟ್ ಅಂಡ್ ಟರ್ನ್ಸ್ ಇಟ್ಟಿರುತ್ತಾರೆ.ಕಥೆ ಮೇಲೆ ಇಂಚಿಂಚೂ ವರ್ಕ್ ಮಾಡಿರುತ್ತಾರೆ,ಪ್ರತಿಪಾತ್ರಕ್ಕೂ ಭೂಮಿ ತೂಕದ ಬೆಲೆ ಬರುವಂತೆ ಕಟ್ಟಿಕೊಡುತ್ತಾರೆ,ಮಾತ್ರವಲ್ಲ ಕಲಾವಿದರ ಹಣೆ ಮೇಲೆ ಇಟ್ಟಿರುವ ಬೊಟ್ಟು ಕೂಡ ಒಂದು ಕಥೆ ಹೇಳುತ್ತೆ.ಅದನ್ನು ನಾವು ಈ ಹಿಂದಿನ ಸಿನಿಮಾಗಳಲ್ಲಿ ನೋಡಿದ್ದೇವೆ. ಹೀಗೆ ಕಥೆ-ಚಿತ್ರಕಥೆ-ಸಂಭಾಷಣೆ-ಪಾತ್ರವರ್ಗ-ಮೇಕಿಂಗ್ ಅಂತ ತಲೆಕೆಡಿಸಿಕೊಂಡು ಕಲೆಗೆ ಜೀವತುಂಬುವ, ಒಂದೊಂದು ಫ್ರೇಮ್ ಕೂಡ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ತೋರಿಸುವ ಕಲಾಕಾರ್ ಜಕ್ಕಣ್ಣ,
೩ ನಿಮಿಷ ೭ ಸೆಕೆಂಡ್’ ತ್ರಿಬಲ್ ಆರ್ ಟ್ರೈಲರ್ ಬಿಟ್ಟು ಇಡೀ ಜಗತ್ತು ವಾರೆವ್ಹಾ ಎನ್ನುವಂತೆ ಮಾಡಿರುವುದು ನಿಜಕ್ಕೂ ಗ್ರೇಟ್ನೆಸ್ ಅಲ್ಲದೇ ಮತ್ತೇನು ಹೇಳಿ.
'ಆರ್ಆರ್ಆರ್' ಇಡೀ ಜಗತ್ತು ಎದುರುನೋಡ್ತಿರುವ ಸಂಗತಿ ನಿಮ್ಮೆಲ್ಲರಿಗೂ ಗೊತ್ತಿದೆ.ಭಾರತೀಯ ಚಿತ್ರರಂಗ ಜಾತಕಪಕ್ಷಿಯಂತೆ ಕಾಯ್ತಿರೋ ಸಿನಿಮಾಗಳ ಪಟ್ಟಿಗೆ ಸೌತ್ ಸಿನಿಮಾ ಇಂಡಸ್ಟ್ರಿಯ
‘ಆರ್ಆರ್ಆರ್’ ಕೂಡ ಸೇರಿಕೊಳ್ಳುತ್ತೆ. ಇಷ್ಟೊಂದು ಕೂತೂಹಲದಿಂದ ಕಾಯೋದಕ್ಕೆ ಮೊದಲನೆಯ ಕಾರಣ ರಾಜಮೌಳಿಯ ನಿರ್ದೇಶನವಾದರೆ, ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಹಾಗೂ ಮೆಗಾಪ್ರಿನ್ಸ್ ರಾಮ್ಚರಣ್ ತೇಜಾ ಇಬ್ಬರು ಸ್ಕ್ರೀನ್ ಶೇರ್ ಮಾಡಿರುವುದು ಎರಡನೇ ಕಾರಣ. ಇವರಿಬ್ಬರು ಟಿಟೌನ್ ಅಂಗಳದಲ್ಲಿ ಸೂಪರ್ಸ್ಟಾರ್ಗಳು. ಇಬ್ಬರಿಗೂ ಆಕಾಶವನ್ನು ಅದುರಿಸುವಷ್ಟು ಅಭಿಮಾನಿಗಳಿದ್ದಾರೆ. ಇಬ್ಬರಿಗೂ ತಮ್ಮದೇ ಆದ ಸ್ಟಾರ್ಢಮ್ ಇದೆ ಹಾಗೂ ಬೇರೆ ಬೇರೆ ಇಮೇಜ್ ಇದೆ. ಅದೆಲ್ಲವನ್ನೂ ಬದಿಗಿಟ್ಟು ‘ಜಕ್ಕಣ್ಣ'ನ ಕಲ್ಪನೆಯ
‘ಆರ್ಆರ್ಆರ್’ಗೆ ಜೀವ ತುಂಬಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ನಲ್ಲಿ ಹುಲಿಯ ಸದ್ದನ್ನು ಅಡಗಿಸುವಷ್ಟರ ಮಟ್ಟಿಗೆ ಯಂಗ್ ಟೈಗರ್ ಘರ್ಜಿಸಿದ್ದಾರೆ. ಯಂಗ್ ರೆಬೆಲ್ಸ್ಟಾರ್ ರಾಮಚರಣ್ ಭರ್ಜರಿ ಆಕ್ಷನ್ ಗಿಂತ ಅವರು ಉರಿಗೊಳಿಸಿಕೊಂಡಿರುವ ದೇಹಸ್ವರೂಪಕ್ಕೆ ಮಾಸ್ ಪ್ರಿಯರು ಮಾತ್ರವಲ್ಲ ಮಹಾರಾಣಿ ಕಾಲೇಜ್ನ ಹುಡ್ಗೀಯರು ಹೃದಯ ಕೊಡ್ತಾರೆ.
ಚಿಂಕಿ-ಮಿಂಕಿ ಡ್ರಸ್ ತೊಟ್ಟು ಬಾರ್ಬಿಡಾಲ್ ಥರಹ ಮಿಂಚುತ್ತಿದ್ದ ಆಲಿಯಾ ಭಟ್ `ಆರ್ಆರ್ಆರ್’ ಚಿತ್ರದಲ್ಲಿ ಪಕದ್ಮನೆ ಹುಡುಗಿ ಥರ ಕಾಣಿಸಿಕೊಳ್ತಿದ್ದಾರೆ. ಬಿಡುಗಡೆಯಾಗಿರುವ ಟ್ರೈಲರ್ನಲ್ಲಿ ಒಂದೇ ಫ್ರೇಮ್ನಲ್ಲಿ ಬರುವ ಆಲಿಯಾ ಇಷ್ಟವಾಗ್ತಾರೆ. ಒಲಿವಿಯಾ ಮೋರಿಸ್ ಬ್ಯೂಟಿ ಕಣ್ಣಿಗೆ ಹೊಡೆಯುತ್ತೆ. ಶ್ರೇಯಾಶರಣ್ ಒಂದೇ ನೋಟದಲ್ಲೇ ಬೆಚ್ಚಿಬೀಳಿಸ್ತಾರೆ. ಬಾಲಿವುಡ್ ನಟ ಅಜಯ್ ದೇವಗನ್ ಕೈಲಿ ಬಂದೂಕು ಹಿಡಿದು ಎಗರೆಗರಿ ಹೊಡೆಯುತ್ತಾರೆ. ಕೈಲಿ ಬಂದೂಕು ಇದೆಯೆಂದು ಗುಂಡಿಗೆಗೆ ಗನ್ನಿಟ್ಟ ಹಾಲಿವುಡ್ ಸ್ಟಾರ್ಗಳು, ರಾಮ್ಚರಣ್ ರಾಮನ ಅವತಾರವೆತ್ತಿ ಬಂದಾಗ ಕಣ್ಣುಬಾಯಿಬಿಡ್ತಾರೆ. ಎಲ್ಲದಕ್ಕಿಂತ ಎಕ್ಸ್ಟ್ರಾಡಿನರಿ ಅಂದರೆ ರಾಮ್ಚರಣ್ ತೇಜಾರನ್ನ ಜೂನಿಯರ್ ಎನ್ಟಿಆರ್ ಹೆಗಲ ಮೇಲೆ ಹೊತ್ತು ಕುಣಿಯುವುದು. ಅಂದ್ಹಾಗೇ, ಪಿಕ್ಚರ್ನಲ್ಲಿ ಇವರಿಬ್ಬರು ಅಣ್ತಮ್ಮಾಸ್ ಆಗಿರಲಿ ಅಥವಾ ದೋಸ್ತಿಗಳೇ ಆಗಿರಲಿ. ಆದರೆ ಸ್ಟಾರ್ನಟರಿಬ್ಬರು ಒಂದೇ ಫ್ರೇಮ್ನಲ್ಲಿ ಈ ರೀತಿ ಕಂಡ್ರೆ ಅಭಿಮಾನಿಗಳಿಗೆ ಅದಕ್ಕಿಂತ ಹಬ್ಬ ಇನ್ನೊಂದು ಇಲ್ಲ ಬಿಡಿ.
ಒಟ್ನಲ್ಲಿ ಆರ್ಆರ್ಆರ್' ಟ್ರೈಲರ್ ಅದ್ಬೂತವಾಗಿ ಮೂಡಿಬಂದಿದೆ. ಭರ್ಜರಿ ಸ್ಟಂಟ್ಸ್-ಸಸ್ಪೆನ್ಸ್-ಸ್ನೇಹ-ಸಹೋದರತ್ವ-ಸ್ವಾತಂತ್ರ್ಯ-ಸ್ವಾಭಿಮಾನ-ಜನ ಹೀಗೆ ಹಲವು ಕಾರಣಕ್ಕೆ
ತ್ರಿಬಲ್ ಆರ್’ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ. ಇಬ್ಬರು ಫ್ರೀಡಂಫೈಟರ್ಗಳ ಸಾಹಸಗಾಥೆ ಇದಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜಾ ಕಾಣಿಸಿಕೊಂಡಿದ್ದಾರೆ. ಕೊಮರಂ ಭೀಮ್ ಪಾತ್ರವನ್ನು ಜೂನಿಯರ್ ಎನ್ಟಿಆರ್ ನಿಭಾಯಿಸಿದ್ದಾರೆ. ತಳ ಸಮುದಾಯದ ಜನರನ್ನು ರಕ್ಷಿಸುವ ಕೊಮರಂ ಭೀಮ್ ನ ಶಿಕ್ಷಿಸುವ ಬ್ರಿಟಿಷ್ ಅಧಿಕಾರಿ ಅಲ್ಲೂರಿ ಸೀತರಾಮ ರಾಜು ಮುಂದೆ ಭೀಮ್ ಜೊತೆಗೆ ಕೈಜೋಡಿಸ್ತಾರೆ.
ಮೊದಲು ವಿರೋಧಿಗಳಾಗಿದ್ದವರು ಅನಂತರ ಸ್ನೇಹಿತರಾಗ್ತಾರೆ. ಇಬ್ಬರು ಜೊತೆಯಾಗಿ ಬ್ರಿಟಿಷರ ವಿರುದ್ದ ಸಿಡಿದೇಳುತ್ತಾರೆ. ಇಷ್ಟು ಕಥೆ ಸದ್ಯಕ್ಕೆ ಟ್ರೈಲರ್ನಿಂದ ಗೊತ್ತಾಗುತ್ತೆ. ಅಸಲಿ ಕಥೆ ಏನು? ಎಂತ? ಎನ್ನುವುದು ಜನವರಿ ೦೭ರಂದು ಗೊತ್ತಾಗಲಿದೆ. ೧೦೦೦ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಡಿ.ವಿವಿ ದಾನಯ್ಯ ನಿರ್ಮಾಣದಲ್ಲಿ ಕೋಟ್ಯಾನುಕೋಟಿ ವೆಚ್ಚದಲ್ಲಿ ಆರ್ಆರ್ಆರ್' ರೆಡಿಯಾಗಿದೆ. ದೊಡ್ಡಮಟ್ಟದಲ್ಲಿ ಇಡೀ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಸದ್ಯ, ಪ್ರಮೋಷನ್ ಕೆಲಸದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ನಾಳೆ ಅಂದ್ರೆ ಶುಕ್ರವಾರ ಬೆಳಗ್ಗೆ ಟಿಫನ್ ಮುಗಿಸಿ ಬೆಂಗಳೂರಿನಲ್ಲಿ
ಆರ್ಆರ್ಆರ್’ ತಂಡ ಪ್ರಮೋಷನ್ ಮಾಡ್ತಿದೆ.
ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ