ಯುವ ರಾಜ ನಿಖಿಲ್ ಕುಮಾರ ಸ್ವಾಮಿ ಮತ್ತೆ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಲಹರಿ ಸಂಸ್ಥೆಯ ಬಹು ನಿರೀಕ್ಷಿತ ಸಿನಿಮಾ ‘ರೈಡರ್ ’ ಗ್ರಾಂಡ್ ರಿಲೀಸ್ ಗೆ ಸಜ್ಜಾಗಿದೆ. ಡಿಸೆಂಬರ್ ೨೪ ರಂದು ಬೆಳ್ಳಿತೆರೆ ಮೇಲೆ ನಿಖಿಲ್ ಕುಮಾರ್ ಸ್ವಾಮಿ ರೈಡಿಂಗ್ ಶುರು ಮಾಡಲಿದ್ದಾರೆ. ಕನ್ನಡ ದ ಮಟ್ಟಿಗೆ ರೈಡರ್ ಅನೇಕ ಕಾರಣಕ್ಕೆ ಕುತೂಹಲಹುಟ್ಟಿಸಿರೋ ಸಿನಿಮಾ. ‘ಮಹಾ ಕ್ಷತ್ರೀಯ’, ರೋಜಾ,’ ಗಣೇಶನ ಗಲಾಟೆ’ ಚಿತ್ರಗಳ ನಂತರ ಲಹರಿ ಸಂಸ್ಥೆ ನಿರ್ಮಾಣ ಮಾಡಿದ ಬಿಗ್ ಬಜೆಟ್ ಸಿನಿಮಾ ಎನ್ನುವುದರ ಜತೆಗೆ ಕನ್ನಡ, ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ.
ಹಾಗೆಯೇ ನಿಖಿಲ್ ಕುಮಾರ ಸ್ವಾಮಿ ನಾಯಕರಾಗಿರೋ ಈ ಚಿತ್ರಕ್ಕೆ ನವ ತಾರೆ ಕಾಶ್ಮೀರಿ ಪರದೇಶಿ ನಾಯಕಿ. ಹಾಗೆಯೇ ದೊಡ್ಡ ತಾರಾಗಣವೇ ಇಲ್ಲಿದೆ. ಚಿತ್ರ ತಂಡ ಮಾಹಿತಿ ಪ್ರಕಾರ ಕನ್ನಡದಲ್ಲಿಯೇ ಈ ಚಿತ್ರವೂ ೨೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಚಿತ್ರದ ರಿಲೀಸ್ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರ ತಂಡ ಇತ್ತೀಚೆಗೆ ಮಾಧ್ಯಮ ಮುಂದೆ ಬಂದಿತ್ತು. ಅಲ್ಲಿ ಚಿತ್ರದ ರಿಲೀಸ್ ಸಿದ್ದತೆಯ ಜತೆಗೆ ವಿಶೇಷತೆ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿತು.
ಮೊದಲು ಮೈಕ್ ಹಿಡಿದು ಮಾತಿಗೆ ನಿಂತಿದ್ದು ನಿರ್ಮಾಪಕರು ಆದ ಲಹರಿ ವೇಲು ಅವರು.’ ಲಹರಿ ಸಂಸ್ಥೆ ಈ ಹಿಂದೆ ಮಹಾ ಕ್ಷತ್ರಿಯ, ಗಣೇಶನ ಗಲಾಟೆ ಹಾಗೂ ತೆಲುಗಿನ ರೋಜ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಈಗ ಸುನೀಲ್ ಅವರ ಶಿವನಂದಿ ಎಂಟರ್ ಟೈನ್ ಮೆಂಟ್ ಜೊತೆಗೂಡಿ “ರೈಡರ್” ಚಿತ್ರ ನಿರ್ಮಾಣ ಮಾಡಿದ್ದೇವೆ. ನಮ್ಮ ಅಣ್ಣ ಮನೋಹರ ನಾಯ್ಡು ಅವರ ಮಕ್ಕಳಾದ ಚಂದ್ರು ಹಾಗೂ ನವೀನ್ ಈಗ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಗೆದ್ದಿದೆ. ಚಿತ್ರ ಕೂಡ ಯಶಸ್ವಿಯಾಗಲಿದೆ ಎಂದರು ಲಹರಿ ವೇಲು.
ಇನ್ನು ಲಹರಿ ಸಂಸ್ಥೆಯ ಜತೆಗೆ ಸೇರಿ ಸಿನಿಮಾ ಮಾಡಿದ ಅನುಭವ ಕುರಿತು ಶಿವನಂದಿ ಸಂಸ್ಥೆಯ ಸುನೀಲ್ ಗೌಡ ಮಾತನಾಡಿದರು.’ ಒಳ್ಳೆಯ ಸಿನಿಮಾ ಮಾಡಿದ್ದ ಖುಷಿ ಇದೆ. ಇದೇ ಡಿಸೆಂಬರ್ 24 ರಂದು ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ. ಮೋಜೊ ಆಪ್ ನಲ್ಲಿ ನಮ್ಮ ಚಿತ್ರದ ಹಾಡು 221 ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಅಪ್ಪು ಅವರನ್ನು ನೆನೆದು ಮಾತು ಆರಂಭಿಸಿದ ನಾಯಕ ನಿಖಿಲ್ ಕುಮಾರ್ , ಕಲಾವಿದರ ಸಂಘಕ್ಕೆ ಮೊದಲ ಬಾರಿಗೆ ಅಂಬರೀಶ್ ಅವರೊಡನೆ ಬಂದಿದ್ದನ್ನು ನೆನಪಿಸಿಕೊಂಡರು. ‘ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ನಡೆಯಬೇಕಾದಾಗ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಈ ಚಿತ್ರದ ಕಥೆ ಹೇಳಿದರು. ನಂತರ ಸುನೀಲ್ ಹಾಗೂ ಲಹರಿ ಸಂಸ್ಥೆ ಮೂಲಕ ಈ ಚಿತ್ರದ ನಿರ್ಮಾಣ ಆರಂಭವಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾವಿದ ಹಾಗೂ ತಂತ್ರಜ್ಞರನ್ನು ನಿಖಿಲ್ ಅವರು ಪ್ರತ್ಯೇಕವಾಗಿ ಅಭಿನಂದಿಸಿದರು. ಅರ್ಜುನ್ ಜನ್ಯರ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡುಗಳು ಹಿಟ್ ಆಗಿರುವುದು ಸಂತೋಷ ತಂದಿದೆ. ಇದೇ 24 ನೇ ತಾರೀಖು ನಮ್ಮ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಬೆಂಬಲವಿರಲಿ’ ಎನ್ನುತ್ತಾರೆ ನಾಯಕ ನಿಖಿಲ್ ಕುಮಾರ್.
ನಿರ್ದೇಶಕ ವಿಜಯ್ ಕುಮಾರ್ ಕೊಂಡ ಚಿತ್ರ ಉತ್ತಮವಾಗಿ ಬರಲು ಸಹಕರಿಸಿದ ತಂಡಕ್ಕೆ ಧನ್ಯವಾದ ತಿಳಿಸಿದರು. ವಿತರಕ ಸುಪ್ರೀತ್ ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡಿದರು. ನಟರಾದ ರಾಜೇಶ್ ನಟರಂಗ, ಗರುಡ ರಾಮ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ, ಮಂಜು ಪಾವಗಡ, ಗಿರೀಶ್, ಅರ್ಜುನ್ ಗೌಡ, ಸಂತು, ಚಿಲ್ಲರ್ ಮಂಜು, ಬೇಬಿ ಪ್ರಾಣ್ಯ, ಗೀತರಚನೆಕಾರ ಕವಿರಾಜ್, ನೃತ್ಯ ನಿರ್ದೇಶಕ ಭೂಷಣ್ ಹಾಗೂ ಸಾಹಸ ನಿರ್ದೇಶಕ ಚೇತನ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.