ವೀರಕಪುತ್ರ ಶ್ರೀನಿವಾಸ್ ಅಂದಾಕ್ಷಣ ಥಟ್ಟನೆ ನೆನಪಾಗೋದೆ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಹೌದು, ವಿಷ್ಣುವರ್ಧನ್ ಅವರ ಕುರಿತ ಅನೇಕ ಉಪಯುಕ್ತ ಕೆಲಸ ಮಾಡಿದವರು. ದಾದಾ ಅಭಿಮಾನಿಗಳನ್ನು ತಮ್ಮೊಟ್ಟಿಗೆ ಕಟ್ಟಿಕೊಂಡು ಹಲವು ವರ್ಷಗಳಿಂದಲೂ ಜನಪರ ಕೆಲಸ ಮಾಡಿದವರು. ಈಗಲೂ ಅದೇ ಕಾಯಕದಲ್ಲಿದ್ದಾರೆ. ಇನ್ನೂ ಒಂದಷ್ಟು ಹೊಸ ಹೆಜ್ಜೆ ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಹಲವು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ. ವಿಷ್ಣುವರ್ಧನ್ ಹೆಸರಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋ ಡೀಟೆಲ್ಸ್ ಇಲ್ಲಿದೆ…
ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದ ಡಾ.ವಿಷ್ಣು ಸೇನಾ ಸಮಿತಿಯ ಸಭೆ ಇತ್ತೀಚೆಗೆ ನಡೆಯಿತು. ಕಳೆದ ಐದು ವರ್ಷದಿಂದ ಪ್ರತಿವರ್ಷವೂ ಸಭೆ ಸೇರಿ ಹಿಂದಿನ ಸಾಲಿನ ಚಟುವಟಿಕೆಗಳ ಪರಾಮರ್ಶೆ ಮತ್ತು ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತವಾಗುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದೆ. ಅದರಂತೆ ಈ ವರ್ಷವೂ ಹಲವು ಯೋಜನೆಗಳನ್ನು ಮುಂದಿನ ವರ್ಷದಲ್ಲಿ ಕೈಗೆತ್ತಿಕೊಳ್ಳುವ ನಿರ್ಧಾರಕ್ಕೆ ಸಮಿತಿ ಬಂದಿದೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್/ಕೆಎಎಸ್ ತರಬೇತಿ ಒದಗಿಸುವ ಸಲುವಾಗಿ ಡಾ.ವಿಷ್ಣುವರ್ಧನ ಕೋಚಿಂಗ್ ಅಕಾಡೆಮಿ ಸ್ಥಾಪಿಸುವುದು. ಡಾ.ವಿಷ್ಣುವರ್ಧನ ಅವರ ಬದುಕು ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಡೆಗೆ ವಿಷ್ಣುವರ್ಧನ ಎಂಬ ಯೋಜನೆ ರೂಪಿಸುವುದು. ಆ ಯೋಜನೆಯಂತೆ ರಾಜ್ಯದ ಎಲ್ಲಾ ಪ್ರಾಥಮಿಕ , ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಡಾ.ವಿಷ್ಣುವರ್ಧನ ಬದುಕು ಸಾಧನೆಗಳ ಕುರಿತಾದ ಕಿರುಹೊತ್ತಿಗೆಯನ್ನು ವಿತರಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದಾದರೂ ಪ್ರಮುಖ ರಸ್ತೆಗೆ ಅಥವಾ ಕಲಾಭವನಕ್ಕೆ ಡಾ.ವಿಷ್ಣುವರ್ಧನ ಅವರ ಹೆಸರನ್ನು ಇಡಬೇಕೆಂದು ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುವುದು.
ಡಾ.ವಿಷ್ಣು ಕುಟುಂಬದ ಜೊತೆಗಿನ ಬಿನ್ನಾಭಿಪ್ರಾಯ ಮರೆತು ಅವರ ಎಲ್ಲಾ ವಿಚಾರ ಮತ್ತು ಯೋಜನೆಗಳಿಗೆ ಜೊತೆಯಾಗಿ ನಿಲ್ಲುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಆನಂದ್ ರಾಚ್, ಮಲ್ಲಿಕಾರ್ಜುನ್, ಯದುನಂದನ್, ರಘು ಎಸ್, ವಿಷ್ಣುಪ್ರಕಾಶ್, ರಾಧಾ ಗಂಗಾಧರ್, ಕೆ.ವಿನಯ್ ಸೇರಿದಂತೆ ವಿಷ್ಣು ಅಭಿಮಾನಿಗಳು ಇದ್ದರು.