ಆರು ವರ್ಷ ಹತ್ತಾರು ಸಿನಿಮಾ, ಆದರೆ ಇದೇ ಮೊದಲು ನಾನೀಗ ನಿಮ್ಮಮುಂದೆ ಹೀರೋ….ಪ್ರೇಕ್ಷಕರಲ್ಲಿ ಆಶೀರ್ವಾದ ಬಯಸಿ ಹೀಗೆ ಹೇಳುವಾಗ ಯುವ ನಟ ಅಜಿತ್ ಜೈರಾಜ್ ಕೊಂಚ ಭಾವುಕರಾದರು. ಅದು ಸಹಜವೂ ಹೌದು. ಆರು ವರ್ಷದ ಪಯಣದಲ್ಲಿ ಸಿಹಿಗಿಂತ ಕಹಿ ಅನುಭವವನ್ನೇ ಹೆಚ್ಚು ಹೊತ್ತುಕೊಂಡು ಕೊನೆಗೊ ಒಂದು ಸಾಹಸದೊಂದಿಗೆ ಹೀರೋ ಆದ ಕಷ್ಟ ಸಾಹಸವನ್ನು ನೆನಪಿಸಿಕೊಂಡಾಗ ಎಂತಹವರಿಗೂ ಭಾವುಕತೆ ತುಂಬಿಕೊಳ್ಳುವುದು ಅಷ್ಟೇ ಸಹಜ. ನಟ ಅಜಿತ್ ಜಯರಾಜ್ ಕೂಡ ಪ್ರೇಕ್ಷಕರಾದ ನಿಮ್ಮಗಳ ಆಶೀರ್ವಾದ ಬಯಸಿ, ಭಾವುಕರಾಗಿದ್ದೆಲ್ಲಿ ಅಂತಹದ್ದೇನು ಅಚ್ಚರಿಯೇ ಇಲ್ಲ. ಅಂದ ಹಾಗೆ ಅವರು ಈ ಭಾವುಕ ಮಾತುಗಳೊಂದಿಗೆ ತಮ್ಮ ಸಿನಿ ಪಯಣದ ಹೊಸ ಹಾದಿಯನ್ನು ಬಿಚ್ಚಿಟ್ಟಿದ್ದು ‘ ರೈಮ್ಸ್ ‘ ಚಿತ್ರದ ಕುರಿತು.
ಡಾನ್ ಜೈರಾಜ್ ಪುತ್ರ ಅಜಿತ್ ಜೈರಾಜ್ ಅವರು ನಾಯಕನಾಗಿ ಆಭಿನಯಿಸಿರೋ ಚೊಚ್ಚಲ ಚಿತ್ರ ‘ ರೈಮ್ಸ್ ‘ಡಿಸೆಂಬರ್ ೧೦ ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಸಿಂಗಲ್ ಸ್ಕ್ರೀನ್ ಗೆ ಆದ್ಯತೆ ನೀಡದೆ ಪರಿಸ್ಥಿತಿಗೆ ತಕ್ಕಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ ಈ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಎಲ್ಲವೂ ತಂದುಕೊಂಡಂತೆಯೇ ಆಗಿದ್ದರೆ, ಇಷ್ಟೊತ್ತಿಗೆ ಈ ಚಿತ್ರ ರಿಲೀಸ್ ಆಗಿ ಹಳೇ ಮಾತೇ ಆಗುತ್ತಿತ್ತೆನೋ, ಆದರೆ ಕೊರೋನಾ ಕಾರಣಕ್ಕೆ ಚಿತ್ರ ತಂಡ. ಎರಡು ವರ್ಷಗಳ ನಂತರ ತೆರೆ ಮೇಲೆ ರೈಮ್ಸ್ ಕೇಳಿಸಲು ಸಜ್ಜಾಗಿದೆ. ರಿಲೀಸ್ ಸಿದ್ದತೆ ಜತೆಗೆ ತಮ್ಮ ಸಿನಿಮಾವನ್ನು ಪ್ರೇಕ್ಷಕರು ಯಾಕೆ ನೋಡಬೇಕು ಅಂತ ಹೇಳಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದ ಸಂದರ್ಭ ದಲ್ಲಿ ಜನಾಶಯ ಪ್ರಭಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ನಟ ಅಜಿತ್ ಜಯರಾಜ್ ತಮ್ಮ ಸಿನಿಬದುಕಿನ ಕಥೆ ಬಿಚ್ಚಿಟ್ಟರು.
‘ ಸರ್ ನಾನೀಗ ಸಿನಿಮಾ ರಂಗಕ್ಕೆ ಬಂದು ಇಲ್ಲಿಗೆ ಆರು ವರ್ಷ. ಒಬ್ಬ ನಟನ ಪಾಲಿಗೆ ಇದು ದೊಡ್ಡ ಹಾದಿ. ಈಹಾದಿಯಲ್ಲೀಗ ಹತ್ತಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇನೆ. ಅದರೆ ಅವೆಲ್ಲವೂ ಸಣ್ಣ ಸಣ್ಣ ಪಾತ್ರಗಳು. ಅಲ್ಲಿಂದೀಗ ಹೀರೋ ಆಗಿ ಇದೇ ಮೊದಲು ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ಹೀರೊ ಆಗಿ ಮೊದಲ ಸಿನಿಮಾವಾದರೂ, ಆರು ವರ್ಷಗಳ ನಟನೆಯ ಅನುಭವದ ಮೂಲಕವೇ ರೈಮ್ಸ್ ನಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ನಟನೆ ಹೇಗಿದೆ ಎನ್ನುವುದಕದಕ್ಕಿಂತ ಸಿನಿಮಾದ ಕಥೆ ಇಲ್ಲಿ ಹೀರೋ. ನಾನು ನಾಯಕನಾಗಿ ನಟಿಸಲು ಮನಸುಮಾಡಿದ್ದೇ ಇದೇ ಕಾರಣಕ್ಕೆ. ಕನ್ನಡಕ್ಕೆ ಈಕಥೆ ತೀರಾ ಹೊಸದು . ನಾರ್ಮಲ್ ಪ್ಯಾಟ್ರನ್ ದಾಟಿ, ಹೊಸ ರೀತಿಯ ಅನುಭವವನ್ನು ಕಟ್ಟಿಕೊಡಲಿದೆ ಈ ಸಿನಿಮಾ.ಅದೇ ಕಾರಣಕ್ಕೆ ಈ ಸಿನಿಮಾ ಗೆಲ್ಲುತ್ತೆ ಎನ್ನುವ ದೊಡ್ಡ ವಿಶ್ವಾಸವೂ ನನಗಿದೆ ಎಂದರು ಅಜಿತ್ ಜಯರಾಜ್.
ಅಲ್ಲಿಂದ ಅಜಿತ್ ಅವರ ಮಾತು ಚಿತ್ರದಲ್ಲಿನ ತಮ್ಮ ಪಾತ್ರದ ಕಡೆ ಹೊರಳಿತು.’ ನಾನಿಲ್ಲಿ ಒಬ್ಬ ಇನ್ವೇಸ್ಟಿಗೇಟಿವ್ ಪೊಲೀಸ್ ಆಫೀಸರ್. ಕೊಲೆ ಪ್ರಕರಣಗಳನ್ನು ಭೇದಿಸಲು ಆತ ಮುಂದಾಗುತ್ತಾನೆ. ಇಲ್ಲಿ ತನಿಖೆಯ ರೀತಿಯೇ ವಿಭಿನ್ನವಾಗಿದೆ. ನಾರ್ಮಲ್ ರೀತಿಯ ತನಿಖೆಯ ಶೈಲಿಯೇ ಇಲ್ಲಿ ಕಾಣದು. ಕೊಲೆಗಾರನಿಗೂ ಒಂದು ರೈಮ್ಸ್ ಗೂ ಇರುವ ನಂಟಿನ ಮೇಲೆ ಕೊಲೆ ಪ್ರಕರಣಗಳ ಹಿಂದಿನ ವ್ಯಕ್ತಿಯನ್ನು ಹಿಡಿಯಲಾಗುತ್ತದೆ . ಈ ಪಾತ್ರಕ್ಕೆ ನಾನು ಒಪ್ಪಿಕೊಂಡಾಗ ಪೊಲೀಸ್ ಕೆಲಸದಲ್ಲಿರುವ ನನ್ನದೇ ಕೆಲವು ಗೆಳೆಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.ಹಾಗೆಯೇ ತನಿಖೆಯ ವಿಧಾನಗಳ ಬಗ್ಗೆಸ್ಟಡಿಮಾಡಿದ್ದೇನೆ. ಹಾಗೆಯೇ ಒಂದಷ್ಟು ರಿಹರ್ಸಲ್ ಮೂಲಕವೇ ಈಪಾತ್ರ ನಿಭಾಯಿಸಿರುವೆ. ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ನಂಬಿಕೆನನಗಿದೆ ಎನ್ನುತ್ತಾರೆ ನಟ ಅಜಿತ್ ಜೈರಾಜ್.
ಜ್ಞಾನಶೇಖರ್, ರವಿಕುಮಾರ್ ಹಾಗೂ ರಮೇಶ್ ನಿರ್ಮಾಣದ ಈ ಚಿತ್ರಕ್ಕೆ ಯುವ ಪ್ರತಿಭೆ ಅಜಿತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಶುಂಭ ಪುಂಜಾ, ಸುಷ್ಮಾ ನಾಯರ್ ಇಲ್ಲಿ ನಾಯಕಿಯರು. ಹಾಗೆಯೇ ಹೊಸಬರ ದೊಡ್ಡ ತಂಡವೇ ಈ ಸಿನಿಮಾ ದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾ ಹಂದರದ ಈ ಚಿತ್ರವು ಈಗಾಗಲೇ ಟೀಸರ್, ಟ್ರೇಲರ್ ಹಾಗೂ ವಿಭಿನ್ನ ಶೈಲಿಯ ಪೋಸ್ಟರ್ಮೂಲಕವೂ ಕುತೂಹಲಮೂಡಿಸಿದೆ. ಇನ್ನೊಂದು ವಿಶೇಷ ಅಂದ್ರೆ ಕನ್ನಡದಲ್ಲಿ ಯೇ ಇದೇ ಮೊದಲು ಟ್ರೇಲರ್ ಅನ್ನು ತ್ರಿ ಡಿ ಮೂಲಕಲಾಂಚ್ ಮಾಡಿದೆ. ಹೊಸಬರ ಈ ಪ್ರಯತ್ನ ಫಲಿಸಬೇಕಾದರೆ ಪ್ರೇಕ್ಷಕರ ಬೆಂಬಲ ಅಗತ್ಯವೇ ಹೌದು.