‘ಆರ್‌ಆರ್‌ಆರ್’ ಟ್ರೈಲರ್ ಬಿಡುಗಡೆ ಮುಂದೂಡಿಕೆ – `ದೋಸ್ತಿ’ ಚಿತ್ರ ಸಾಹಿತಿ ಅಗಲಿಕೆಯ ನೋವಲ್ಲಿ ಚಿತ್ರತಂಡ !

ಆರ್‌ಆರ್‌ಆರ್ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿತ್ತು. ಡಿಸೆಂಬರ್ ೦೩ರಂದು ಕನ್ನಡ-ತೆಲುಗು-ತಮಿಳು-ಮಲೆಯಾಳಂ ಹಾಗೂ ಹಿಂದಿಯಲ್ಲಿ ಒಟ್ಟಿಗೆ ಟ್ರೈಲರ್ ರಿಲೀಸ್ ಮಾಡೋದಾಗಿ ಫಿಲ್ಮ್ ಟೀಮ್ ಮಾಹಿತಿ ಹಂಚಿಕೊಂಡಿತ್ತು. ನಿರ್ದೇಶಕ ರಾಜಮೌಳಿ ಸೇರಿದಂತೆ ಇಡೀ ಸಿನಿಮಾ ತಂಡ ಟ್ರೈಲರ್ ಬಿಡುಗಡೆಯ ಸುದ್ದಿಯನ್ನು ತಿಳಿಸಿದ್ದೇ ತಡ ಚಿತ್ರಪ್ರೇಮಿಗಳು ಕೂತೂಹಲ ಹೊರಗಾಕಿದ್ದರು. ಥ್ರಿಬಲ್ ಆರ್ ಟ್ರೈಲರ್ ವೀಕ್ಷಣೆಗೆ ಕೌಂಟ್‌ಡೌನ್ ಶುರುಹಚ್ಚಿಕೊಂಡಿದ್ದರು. ಈ ಮಧ್ಯೆ ಆರ್‌ಆರ್‌ಆರ್ ತಂಡ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದೆ. ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಇದಕ್ಕೆ ಕಾರಣ ಅನಿರೀಕ್ಷಿತ ಬೆಳವಣಿಗೆಗಳು ಎನ್ನಲಾಗ್ತಿದೆ.

ಥ್ರಿಬಲ್ ಆರ್ ಇಡೀ ಜಗತ್ತು ಜಾತಕ ಪಕ್ಷಿಯಂತೆ ಕಾದು ಕುಳಿತಿರೋ ಸಿನಿಮಾ. ಜಕ್ಕಣ್ಣ ಕಲ್ಪನೆಯಲ್ಲಿ ಅರಳಿ ಬೆಳ್ಳಿತೆರೆಗೆ ಕಿಚ್ಚು ಹಚ್ಚಲು ಬರುತ್ತಿರುವ ‘ಆರ್‌ಆರ್‌ಆರ್'ಚಿತ್ರವನ್ನು ಕಣ್ತುಂಬಿಕೊಳ್ಳೋದಕ್ಕೆ ಕೂತೂಹಲಭರಿತರಾಗಿದ್ದಾರೆ.ಇತ್ತ ಚಿತ್ರತಂಡ ಸೂಪ್ ರೂಪದಲ್ಲಿ ಟೀಸರ್ ಬಿಟ್ಟು,ಸಲಾಡ್ ರೂಪದಲ್ಲಿ ಸಾಂಗ್ಸ್ ತೋರಿಸಿದ್ದರಿಂದ ಟ್ರೈಲರ್,ವೆಜ್ ರೂಪದಲ್ಲಿ ಬರುತ್ತಾ ಅಥವಾ ನಾನ್‌ವೆಜ್ ರೂಪದಲ್ಲಿ ನಿರೀಕ್ಷೆಯ ಬಾಳೆದೆಲೆಗೆ ಬೀಳುತ್ತಾ ಅಂತ ಕ್ಯಾಲುಕೇಷನ್ ಮಾಡ್ತಿದ್ದರು.ಇದೇ ಹೊತ್ತಿಗೆ ಚಿತ್ರತಂಡ ಟ್ರೈಲರ್ ರಿಲೀಸ್ ಡೇಟ್‌ನ ಅನೌನ್ಸ್ ಮಾಡಿತ್ತು.ಡಿಸೆಂಬರ್ ೦೩ರಂದು ಐದು ಭಾಷೆಗಳಲ್ಲೂ ‘ಆರ್‌ಆರ್‌ಆರ್’ ಟ್ರೈಲರ್ ಬಿಡುಗಡೆ ಮಾಡೋದಾಗಿ ತಿಳಿಸಿದ್ದರು. ಇದಾಗಿ ೨೪ ಗಂಟೆ ಕಳೆಯೋದ್ರೊಳಗೆ ಟ್ರೈಲರ್ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಇದಕ್ಕೆ ಕಾರಣ ತೆಲುಗು ಚಿತ್ರರಂಗದ ಖ್ಯಾತ ಗೀತ ರಚನೆಕಾರರಾದ ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರ ಅಗಲಿಕೆ ರ‍್ಬೋದು. ಅಂದ್ಹಾಗೇ, ಇವರು ‘ಆರ್‌ಆರ್‌ಆರ್' ಚಿತ್ರದ ‘ದೋಸ್ತಿ’ ಹಾಡಿಗೆ ಸಾಹಿತ್ಯ ಬರೆದು ಕೊಟ್ಟಿದ್ದರು.

ಹೌದು, ತೆಲುಗು ಚಿತ್ರರಂಗದ ಖ್ಯಾತ ರಚನೆಕಾರರಾದ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಯವರು ವಿಧಿವಶರಾಗಿದ್ದಾರೆ. ೬೬ ವರ್ಷ ವಯಸ್ಸಾಗಿತ್ತು, ಕಾನ್ಸರ್‌ನಿಂದ ಬಳಲುತ್ತಿದ್ದು ಹೈದ್ರಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನವೆಂಬರ್ ೩೦ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸೀತಾರಾಮ ಶಾಸ್ತ್ರಿಯವರ ಅಗಲಿಕೆಗೆ ಇಡೀ ಟಾಲಿವುಡ್ ಕಂಬನಿ ಮಿಡಿದಿದೆ. ತೆಲುಗು ಸಿನಿಮಾ ರಂಗಕ್ಕೆ ಇವರ ಕೊಡುಗೆ ಅಪಾರ. ೮೦೦ಕ್ಕೂ ಹೆಚ್ಚು ಸಿನಿಮಾಗಳು, ೩೦೦೦ಕ್ಕೂ ಹೆಚ್ಚು ಹಾಡುಗಳನ್ನು ಕಟ್ಟಿಕೊಟ್ಟಿದ್ದ ಸೀತಾರಾಮ ಶಾಸ್ತ್ರಿಯವರು ತೆಲುಗು ಸಿನಿಮಾ ಸಾಹಿತ್ಯಕ್ಕೆ ರಥಚಕ್ರವೇ ಆಗಿದ್ದರು ಅಂತ ಟಾಲಿವುಡ್‌ನ ಸೂಪರ್‌ಸ್ಟಾರ್‌ಗಳು-ನಿರ್ದೇಶಕರು-ನಿರ್ಮಾಪಕರು ಕಣ್ಣೀರಾಗುತ್ತಿದ್ದಾರೆ. ಖ್ಯಾತ ಕೊರಿಯೋಗ್ರಾಫರ್, ಹಿರಿಯ ನಟ ಶಿವಶಂಕರ್ ಮಾಸ್ಟರ್ ನಿಧನದ ಬೆನ್ನಲ್ಲೇ ಸೀತಾರಾಮ ಶಾಸ್ತ್ರಿಯವರ ಅಗಲಿಕೆ ಟಾಲಿವುಡ್‌ಗೆ ಆಘಾತ ತಂದೊಡ್ಡಿದೆ.

ಮೇಲೆ ಹೇಳಿದ ಹಾಗೇ ‘ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ'ಯವರು ‘ಥ್ರಿಬಲ್ ಆರ್’ ಚಿತ್ರದ ‘ದೋಸ್ತಿ'ಹಾಡಿಗೆ ಮುತ್ತಿನಂತೆ ಪದಗಳನ್ನು ಪೋಣಿಸಿಕೊಟ್ಟಿದ್ದರು. ಈಗಾಗಲೇ ಬಿಡುಗಡೆಯಾಗಿರುವ ದೋಸ್ತಿ ಹಾಡು ‘ಆರ್‌ಆರ್‌ಆರ್’ ಮೇಲಿನ ನಿರೀಕ್ಷೆಯನ್ನು ಒಂದು ತೂಕ ಜಾಸ್ತಿ ಮಾಡಿದೆ. ಎಂ.ಎಂ. ಕೀರವಾಣಿ ಸಂಗೀತದಲ್ಲಿ-ಸೆಂಥಿಲ್ ಕ್ಯಾಮೆರಾ ಕಣ್ಣಲ್ಲಿ ಧಗಧಗಿಸ್ತಿರೋ ಹಾಡು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದೆ. ಚಿತ್ರದ ಮೇಲೆ ಕ್ರೇಜ್ ಹೆಚ್ಚಾಗಲಿಕ್ಕೆ ಸೀತಾರಾಮ ಶಾಸ್ತ್ರಿಯವರು ಬರೆದುಕೊಟ್ಟಿರುವ ಸಾಲುಗಳು ಕೂಡ ಕಾರಣವಾಗಿರುವಾಗಿವೆ. ಈಗ ಅವರನ್ನು ಕಳೆದುಕೊಂಡು ದುಃಖದಲ್ಲಿರುವಾಗ ಟ್ರೈಲರ್ ಬಿಡುಗಡೆ ಮಾಡಿ ಸಂಭ್ರಮಿಸೋದು ಹೇಗೆ ಎನ್ನುವ ಕಾರಣಕ್ಕೆ ಚಿತ್ರತಂಡ ಟ್ರೈಲರ್ ಬಿಡುಗಡೆಯನ್ನು ಕ್ಯಾನ್ಸಲ್ ಮಾಡಿದೆ. ಅತೀ ಶೀಘ್ರದಲ್ಲೇ ಹೊಸ ಡೇಟ್‌ನ ಅನೌನ್ಸ್ ಕೂಡ ಮಾಡೋದಾಗಿ ಮಾಹಿತಿ ಹಂಚಿಕೊಂಡಿದೆ.

ಆರ್‌ಆರ್‌ಆರ್'ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕಥೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇತಿಹಾಸದ ಪುಟಗಳನ್ನು ತಿರುಚಿ ನೋಡಿ ಅಲ್ಲೂರಿ ಸೀತರಾಮರಾಜು ಹಾಗೂ ಕೊಮರಾಮ್ ಭೀಮ್ ಕಥೆಯನ್ನು ತಿಳಿದುಕೊಂಡಿರಬಹುದು.ಆದರೆ,ಜಕ್ಕಣ್ಣ ಕೆತ್ತಿರುವ ಕಥೆ ಹೇಗಿರಬಹುದು ಎನ್ನುವುದೇ ಇಡೀ ಸಿನಿಮಾ ಜಗತ್ತಿಗಿರುವ ಕೂತೂಹಲ.ಇಲ್ಲಿವರೆಗೂ ರಿಲೀಸ್ ಆಗಿರುವ ಚಿತ್ರದ ಒಂದೊಂದು ಪೋಸ್ಟರ್ ಕೂಡ ಒಂದೊಂದು ತೂಕವನ್ನು ಹೊತ್ತಿದೆ.ಟೀಸರ್-ಮೇಕಿಂಗ್-ಸಾಂಗ್ಸ್ ಗಳು ಪ್ರೇಕ್ಷಕಮಹಾಷಯರಿಗೆ ಹೈದ್ರಬಾದ್ ಬಿರಿಯಾನಿ ಫಿಕ್ಸು ಎನ್ನುತ್ತಿವೆ.

ಇನ್ನೇನಿದ್ರು ಟ್ರೈಲರ್ ರಿಲೀಸ್ ಆಗ್ಬೇಕು 'ಸೌತ್ ಟು ನಾರ್ತ್' ಸ್ಟಾರ್‌ಗಳನ್ನು ಹೊತ್ಕೊಂಡು ಬರುತ್ತಿರುವ ‘ಆರ್‌ಆರ್‌ಆರ್’ ಸ್ವಾಗತಿಸೋಕೆ ಪ್ರೇಕ್ಷಕ ಮಹಾಷಯರು ಸಜ್ಜಾಗಬೇಕು. ಅಂದ್ಹಾಗೇ, ಜನವರಿ ೦೭ರಂದು ಸಿನಿಮಾ ತೆರೆಗೆ ತರಲು ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದೆ. ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್ ತೇಜಾ, ಅಜಯ್ ದೇವ್‌ಗಾನ್, ಆಲಿಯಾ ಭಟ್ ಸೇರಿದಂತೆ ಹಾಲಿವುಡ್ ಸ್ಟಾರ್‌ಗಳು ಚಿತ್ರದಲ್ಲಿದ್ದಾರೆ. ಡಿ.ವಿ.ವಿ ದಾನಯ್ಯ ನಿರ್ಮಾಣದಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ಕನ್ನಡದಲ್ಲಿ ಕೆ.ವಿ.ಎನ್ ಪ್ರೊಡಕ್ಷನ್ ವಿತರಣೆ ಮಾಡ್ತಿದೆ. ಏಕಕಾಲಕ್ಕೆ ಐದು ಭಾಷೆಗಳಲ್ಲೂ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!