ಮಗನಿಗೆ ಕೇಶಮುಂಡನ ಮಾಡಿಸಿದರು ಮೇಘನಾ ರಾಜ್-ಬಾಲ್ಡೆಡ್ ಲುಕ್‌ನಲ್ಲಿ ರಾಯನ್ ರಾಜ್ ಸರ್ಜಾ ಪೋಸ್ !

ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ತಮ್ಮ ಮುದ್ದು ಮಗನ ತಲೆ ಕೂದಲು ತೆಗೆಸಿದ್ದಾರೆ. ಇತ್ತಿಚೆಗಷ್ಟೇ ಅದ್ದೂರಿಯಾಗಿ ನಾಮಕರಣ ಮಾಡಿ ತನ್ನ ಕಂದನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದ ಮೇಘನಾ ರಾಜ್ ಇದೀಗ ಶಾಸ್ತ್ರದ ಪ್ರಕಾರ ಮಗನಿಗೆ ಕೇಶಮುಂಡನ ಮಾಡಿಸಿದ್ದಾರೆ. ಎಲ್ಲಿ? ಯಾವಾಗ? ಮಗನ ತಲೆ ಕೂದಲು ತೆಗೆಸುವ ಶಾಸ್ತ್ರವನ್ನು ಮಾಡಿದರು ಅನ್ನೋದನ್ನು ಡಿಸ್‌ಕ್ಲೋಸ್ ಮಾಡಿಲ್ಲ. ಆದರೆ, ಚಿರು ಫೋಟೋ ಮುಂದೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. `ನಮ್ಮ ಮನೆಯ ಮೊಟ್ಟೆ ಬಾಸ್’ ಎಂದು ಟ್ಯಾಗ್‌ಲೈನ್ ಕೊಟ್ಟು, ಕೇಶ ಮುಂಡನದ ನಂತರ ರಾಯನ್ ರಾಜ್ ಸರ್ಜಾ ಕೊಟ್ಟಿರುವ ಎಕ್ಸ್ ಪ್ರೆಷನ್ಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಡೆಡ್ ಲುಕ್ ನಲ್ಲಿ ಜೂನಿಯರ್ ಸಿಂಬನ ನೋಡಿದ ಅಭಿಮಾನಿಗಳು ದೃಷ್ಟಿ ತೆಗೆಯುತ್ತಿದ್ದಾರೆ.

ರಾಯನ್ ರಾಜ್ ಸರ್ಜಾನ ರಾಯಲ್ಲಾಗಿ ಬೆಳೆಸ್ಬೇಕು ಎನ್ನುವುದು ನಟಿ ಮೇಘನಾ ಕನಸು.ಮಗ ಬೆಳೆದು ದೊಡ್ಡವನಾದ್ಮೇಲೆ ನನ್ನ ಬಗ್ಗೆ ಹೆಮ್ಮೆ ಪಡಬೇಕು ಎನ್ನುವ ಆಸೆ ಮೇಘನಾಗಿದೆ.ಹೀಗಾಗಿಯೇ ಅಪ್ಪ ಮತ್ತು ಅಮ್ಮನ ಪ್ರೀತಿಯನ್ನು ಮೇಘನಾ ಒಬ್ಬರೇ ತುಂಬುತ್ತಿದ್ದಾರೆ.ತಂದೆಯಿಲ್ಲ ಎನ್ನುವ ಕೊರಗು ಕಾಡದಂತೆ ತಂದೆ-ತಾಯಿ ಇಬ್ಬರ ಪ್ರೀತಿಯನ್ನು ಕೊಡುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ‘ಚಿರು ನನ್ನ ಪಾಲಿನ ರಾಜನಾದರೆ, ನನ್ನ ಮಗ ರಾಯನ್ ನನ್ನ ಪಾಲಿಗೆ ಯುವರಾಜ’. ಯುವಸಾಮ್ರಾಟ ಚಿರಂಜೀವಿಯ ಅಗಲಿಕೆಯಿಂದ ಕತ್ತಲೆ ತುಂಬಿದ್ದ ಎರಡು ಕುಟುಂಬದಲ್ಲೂ ಬೆಳಕು ಮೂಡಿದ್ದೇ ರಾಯನ್ ಬಂದ್ಮೇಲೆ. ಹೀಗಾಗಿ, ರಾಯನ್ ರಾಜ್ ಸರ್ಜಾ ಮೇಲೆ ಎರಡು ಕುಟುಂಬಕ್ಕೂ ಅಘಾದವಾದ ಪ್ರೀತಿಯಿದೆ ಮತ್ತು ಹೆಮ್ಮೆಯಿದೆ. ದೀಪದಂತೆ ಕಾಪಾಡಿಕೊಳ್ಳಬೇಕು ಮತ್ತು ಮುಗಿಲೆತ್ತರಕ್ಕೆ ಬೆಳೆಸಬೇಕು ಎನ್ನುವ ಕನಸು ಹೆಮ್ಮರವಾಗಿ ಬೆಳೆದಿದೆ.

ದಿನೇ ದಿನೇ ರಾಯನ್ ಬೆಳೆದು ದೊಡ್ಡವನಾಗ್ತಿದ್ದಾನೆ. ಇಷ್ಟು ದಿನ ರಾಯನ್ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದ ಮೇಘನಾ ಈಗ ಬದುಕು ಕಟ್ಟಿಕೊಟ್ಟ ಸಿನಿಮಾ ಕಾಯಕದೆಡೆಗೆ ತಮ್ಮನ್ನು ತಾವು ತೊಡಗಿಸಿಕೊಳ್ತಿದ್ದಾರೆ. ಚಿರು ಗೆಳೆಯ ಪನ್ನಗಾಭರಣ ನಿರ್ಮಾಣ ಮಾಡ್ತಿರುವ ಚಿತ್ರದಲ್ಲಿ ನಟಿ ಮೇಘನಾ ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಯುವಸಾಮ್ರಾಟ್ ಚಿರುಗೆ ಡೈರೆಕ್ಟ್ ಮಾಡ್ಬೇಕು ಎನ್ನುವುದು ಪನ್ನಗಾಭರಣ ಕನಸಾಗಿತ್ತು. ಚಿರು ಹಾಗೂ ಪ್ರಜ್ವಲ್ ದೇವರಾಜ್ ಕಾಂಬಿನೇಷನ್‌ನಲ್ಲಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡ್ಬೇಕು ಎಂದುಕೊಂಡಿದ್ದರು.

ದುರದೃಷ್ಟವಶಾತ್ ಚಿರಂಜೀವಿಯನ್ನು ಆ ವಿಧಿ ಹೊತ್ತೊಯ್ದರಿಂದ ಸಿನಿಮಾ ಹಾಳಾಗಿ ಹೋಗಲಿ ಗೆಳೆಯನನ್ನು ಕಳೆದುಕೊಂಡು ಬದುಕೇ ಕತ್ತಲು ಎನ್ನುವಂತಾಯ್ತು. ಅಲ್ಲಿಂದ ಬಹುದೂರ ಸಾಗಿ ಬಂದು ವಾಯುಪುತ್ರನ ಆಶೀರ್ವಾದದೊಂದಿಗೆ ನಟಿ ಮೇಘನಾಗೆ ಸಿನಿಮಾ ಮಾಡುತ್ತಿದ್ದಾರೆ. ಯುವಪ್ರತಿಭೆ ವಿಶಾಲ್ ಆಕ್ಷನ್ ಕಟ್ ಹೇಳ್ತಿದ್ದಾರೆ, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಪಿ,ಬಿ ಸ್ಟುಡಿಯೋಸ್ ಲಾಂಛನದಲ್ಲಿ ತಯ್ಯಾರಾಗ್ತಿರೋ ಈ ಸಿನಿಮಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!