ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದ್ದು, ಅಂಬರೀಶ್ ಅವರಿಗೇ ಸಿಕ್ಕಂತೆ ಎಂದು ನಟಿ ಹಾಗು ಸಂಸದೆ ಸುಮಲತಾ ಹೇಳಿದ್ದಾರೆ. ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಮತ್ತು ಪದ್ಮಶ್ರೀ ಪ್ರಶಸ್ತಿಗೂ ಕೂಗು ಕೇಳಿಬರುತ್ತಿರುವುದರ ಬಗ್ಗೆ ಅಂಬಿ ಫ್ಯಾನ್ಸ್ ಇಂತಹ ಗೌರವ ಅಂಬರೀಶ್ಗೂ ಸಿಗಬೇಕು. ಇಲ್ಲದಿದ್ದರೆ, ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಅಂಬರೀಶ್ ಅವರ ಸ್ಮಾರಕಕ್ಕೆ ಪೂಜೆ ನೆರವೇರಿಸಿದ ಬಳಿಕ ಸುಮಲತಾ ಪ್ರತಿಕ್ರಿಯಿಸಿ, ಹೇಳಿದ್ದಿಷ್ಟು.
ಅಂಬರೀಶ್ ಅಭಿಮಾನಿಗಳ ಪ್ರೀತಿ ಏನೆಂಬುದು ನನಗೆ ಅರ್ಥ ಆಗುತ್ತೆ. ನಾವು ಅದನ್ನು ಗೌರವಿಸುತ್ತೇವೆ ಹೊರತು ಕಡೆಗಣಿಸಲ್ಲ. ಅವರ ನೋವು ಹಂಚಿಕೊಳ್ಳುವ ಸಂದರ್ಭ ಬರುತ್ತೆ. ಅಂಬರೀಶ್ ಅವರ ಜೀವನದಲ್ಲಿ ನನಗೆ ಇಂಥದ್ದು ಬೇಕು ಎಂದು ಕೇಳಿದವರಲ್ಲಿ, ಪ್ರಶಸ್ತಿ ಇರಲಿ, ಎಂಪಿ, ಎಂಎಲ್ಎ ಟಿಕೆಟ್ ಇರಲಿ, ಎಲ್ಲೂ ಹೋಗದೆ, ಯಾರ ಬಳಿಯೂ ಕೇಳದೆ, ಲಾಬಿ ಮಾಡಿ ಪಡೆದವರಲ್ಲ. ಲೈಫಲ್ಲಿ ಅವರಿಗೆ ಸ್ವಾಭಿಮಾನವಿತ್ತು. ಅಭಿಮಾನಿಗಳಿಗೂ ನಾನು ಮನವಿ ಮಾಡ್ತೀನಿ. ನೀವು ಕೂಡ ಅವರ ಹಾದಿಯಲ್ಲೇ ನಡೆದುಕೊಂಡು ಬನ್ನಿ. ಈ ಸಮಯದಲ್ಲಿ ನಾನು, ನನ್ನ ಕುಟುಂಬ, ಕನ್ನಡಿಗರು ಅಪ್ಪು ಇರದ ಸಮಯದಲ್ಲಿ ಇಂತಹ ವಿಷಯ ಪ್ರಸ್ತಾಪ ಮಾಡುವುದು ಬೇಡ. ಹೋರಾಟ ಎಂಬ ಪದ ಉಪಯೋಗಿಸಲೂ ಬಾರದು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಂಬರೀಶ್ ಸುಮಾರು ೪೦ ವರ್ಷದ ಸ್ನೇಹಿತರು. ಅವರು ಎಷ್ಟು ಸಮಯ ಜೊತೆಗೆ ಜೊತೆ ಕಳೆದಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಅಂಬರೀಶ್ ಅವರಿಗೆ ಏನು ಗೌರವ ಕೊಡಬೇಕು ಅನ್ನೋದು ಅವರಿಗೆ ಬಿಟ್ಟಿದ್ದು. ಈಗಾಗಲೇ ಜನರ ಪ್ರೀತಿ ಸಿಕ್ಕಿದೆ. ಅದೇ ದೊಡ್ಡದು. ಅಪ್ಪುಗೆ ಕರ್ನಾಟಕ ಪ್ರಶಸ್ತಿ ಸಿಕ್ಕಿದೆ. ಅದು ಅಂಬರೀಶ್ಗೂ ಸಿಕ್ಕಂತೆ. ಅಂಬರೀಶ್ ಇದ್ದಿದ್ದರೆ, ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿರುವುದನ್ನು ಕೇಳಿ ಹೆಮ್ಮೆ, ಸಂತೋಷ ಪಡುತ್ತಿದ್ದರು. ಅಭಿಮಾನಿಗಳು ಇದನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ ಸುಮಲತಾ.