ಹಿಂದಿ ಭಾಷೆಗೆ ದೊಡ್ಡ ಮೊತ್ತಕ್ಕೆ‌ ಮದಗಜ ಸೋಲ್ಡ್‌ಔಟ್ ! ರಿಲೀಸ್‌ ಮುನ್ನವೇ ಶ್ರೀಮುರಳಿ ಸಿನಿಮಾಗೆ ಬಂಪರ್!!

ಕನ್ನಡದಲ್ಲೀಗ “ಮದಗಜ” ಸಿನಿಮಾದ್ದೇ ಸುದ್ದಿ. ಆರಂಭದಿಂದಲೂ ಸಾಕಷ್ಟು ಸುದ್ದಿ ಮಾಡಿರುವ ಸಿನಿಮಾ ಡಿಸೆಂಬರ್‌ 3 ರಂದು ಗ್ರ್ಯಾಂಡ್‌ ರಿಲೀಸ್‌ ಆಗುತ್ತಿದೆ. ವಿಶೇಷವೆಂದರೆ, “ಮದಗಜ” ಮೂರು ಭಾಷೆಗಳಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಅದರಲ್ಲೂ 1500 ಕ್ಕೂ ಹೆಚ್ಚು ಪರದೆಗಳ ಮೇಲೆ ಮದಗಜನ ಆರ್ಭಟ ಇರಲಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಮುಂದಾಗಿರುವ ಚಿತ್ರತಂಡ, ಒಳ್ಳೊಳ್ಳೆಯ ಚಿತ್ರಮಂದಿರಗಳನ್ನೇ ಆಯ್ಕೆ ಮಾಡಿಕೊಂಡಿದೆ. ಇನ್ನು, ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಸೇರಿ ಮದಗಜ ಸುಮಾರು 600 ರಿಂದ 700 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 700 ರಿಂದ 800 ಸ್ಕ್ರೀನ್‌ನಲ್ಲಿ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ.‌


ನಟ ಶ್ರೀಮುರಳಿ ಅವರ ಹಿಂದಿನ ಸಿನಿಮಾಗಳು ಹೇಗೆ ಸದ್ದು ಮಾಡಿದ್ದವೋ ಅದಕ್ಕಿಂತಲೂ ತುಸು ಹೆಚ್ಚೇ ಸೌಂಡು ಮಾಡುತ್ತಿರುವ ಮದಗಜ ನೋಡಲು ಶ್ರೀಮುರಳಿ ಅವರ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಈ ಚಿತ್ರದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, “ಮದಗಜ” ಹಿಂದಿಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಅನ್ನೋದು.

ಹೌದು, ಚಿತ್ರಕ್ಕೆ ಹಿಂದಿ ಭಾಷೆಗೆ ಸಾಕಷ್ಟು ಬೇಡಿಕೆ ಬಂದಿದ್ದು, ನಿರ್ಮಾಪಕರು ಒಂದೊಳ್ಳೆಯ ಮೊತ್ತಕ್ಕೆ ಮದಗಜ ಚಿತ್ರವನ್ನು ಸೇಲ್‌ ಮಾಡಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ ನಿರ್ಮಾಪಕರೊಬ್ಬರು ಈ ಚಿತ್ರವನ್ನು ೮ಕೋಟಿಗೆ ಖರೀದಿಸಿದ್ದಾರೆ ಎಂಬುದು ಚಿತ್ರತಂಡದ ಮಾಹಿತಿ. ಕನ್ನಡದ ಸಿನಿಮಾಗಳಿಗೆ ಪರಭಾಷೆಗಳಲ್ಲೂ ಭಾರೀ ಬೇಡಿಕೆ ಇದೆ ಅನ್ನುವುದು ಮದಗಜ ಚಿತ್ರದ ಹಿಂದಿ ಭಾಷೆಗೆ ಸಿಕ್ಕ ಮೊತ್ತವೇ ಸಾಕ್ಷಿ. ಈಗಾಗಲೇ ಶ್ರೀಮುರಳಿ ಅಭಿನಯದ ಹಲವು ಸಿನಿಮಾಗಳು ಹಿಂದಿಗೆ ಡಬ್‌ ಆಗಿ ಪ್ರಸಾರವಾಗಿವೆ.

ಆ ಸಾಲಿಗೆ ಮದಗಜ ಸಿನಿಮಾ ಕೂಡ ದೊಡ್ಡ ಮೊತ್ತಕ್ಕೆ ಸೇಲ್‌ ಆಗಿರುವುದು ಚಿತ್ರತಂಡಕ್ಕೆ ಖುಷಿ ಹೆಚ್ಚಿಸಿದೆ. ನಿರ್ಮಾಪಕ ಉಮಾಪತಿ ಸದ್ಯ ಮದಗಜ ಚಿತ್ರ ಹಿಂದಿ ಭಾಷೆಗೆ ಅಷ್ಟೊಂದು ದೊಡ್ಡ ಮೊತ್ತಕ್ಕೆ ಸೇಲ್‌ ಆಗಿರುವುದಕ್ಕೆ ಖುಷಿಗೊಂಡಿದ್ದಾರೆ. ನಿರ್ದೇಶಕ ಮಹೇಶ್‌ ಕುಮಾರ್‌ ಅವರಿಗೂ ಸಿಕ್ಕಾಪಟ್ಟೆ ಖುಷಿ ಇದೆ. ಅಂದಹಾಗೆ, ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಶ್ರೀಮುರಳಿ ಅವರಿಗೆ ಜೋಡಿಯಾಗಿ ಆಶಿಕಾ ಇದ್ದಾರೆ. ಜಗಪತಿ ಬಾಬು ಕೂಡ ಇಲ್ಲಿ ಮುಖ್ಯ ಆಕರ್ಷಣೆ.

Related Posts

error: Content is protected !!