ಜಮಾಲಿ ಗುಡ್ಡದಲ್ಲಿ ಶ್ಯಾನೆ ಟಾಪಾಗಿರೋ ಹುಡ್ಗಿ ಜೊತೆ ಮಿಠಾಯಿ ಸೂರಿ ಎನ್ನುವ ಸುದ್ದಿ ನಿಮ್ಮ ಕಿವಿಗೆ ಬಿದ್ದಾಕ್ಷಣ ಲವ್ವು-ರೊಮ್ಯಾನ್ಸು-ಆಕ್ಷನ್ನು ಸೇರಿದಂತೆ ನೂರೆಂಟು ಕಲ್ಪನೆಗಳು ನಿಮ್ಮ ಕಣ್ಮುಂದೆ ಡ್ಯುಯೆಟ್ ಹಾಡೋದು ಖರ್ರೇ. ಆದರೆ, ಜಮಾಲಿ ಗುಡ್ಡದ ಖಬರ್ ಬ್ಯಾರನೇ ಐತಿ ಬಿಡ್ರಿಪಾ. ಹಾಗಾದ್ರೆ, ಮತ್ಯಾಕ್ ತಡ ಮಾಡೋಣು ತೋತಾಪುರಿ ಸುಂದರಿಯನ್ನು ಕರ್ಕೊಂಡು ಜಮಾಲಿ ಗುಡ್ಡ ಏರಿದ ನಟಭಯಂಕರನ ಸಸ್ಪೆನ್ಸ್ ವಿತ್ ರೊಮ್ಯಾನ್ಸ್ ಸ್ಟೋರಿನಾ ನೋಡಿಕೊಂಡು ಬರೋಣ ಬನ್ನಿ
‘ಶ್ಯಾನೆ ಟಾಪಾಗಿರೋ ಹುಡ್ಗಿ'ಹಾಗೂ ಮಿಠಾಯಿ ಸೂರಿ ಹೆಸರು ಕಿವಿಗೆ ಬಂದಾಕ್ಷಣ ನಟಿ ಅದಿತಿ ಪ್ರಭುದೇವ್ ಹಾಗೂ ಡಾಲಿ ಧನಂಜಯ್ ಇಬ್ಬರು ಕಣ್ಮುಂದೆ ಬಂದು ನಿಂತುಬಿಡ್ತಾರೆ.ಆದರೆ,ಜಮಾಲಿ ಗುಡ್ಡದ ಹೆಸರು ಕೇಳಿದ್ಮೇಲೆ ಎಲ್ಲಿದ್ದೀಯಪ್ಪ ಇದು? ಯಾವ ಭಾಗದಲ್ಲಿ ಬರುತ್ತೆ?ಈ ಹೆಸರನ್ನೂ ಕೇಳೇ ಇಲ್ಲವಲ್ಲ? ಹೀಗೆ ಪ್ರಶ್ನೆಗಳ ಸುರಿಮಳೆಯ ಜೊತೆ
‘ಜಮಾಲಿ ಗುಡ್ಡ’ ವನ್ನು ನೋಡುವ ಆಸೆ ಹುಟ್ಟುತ್ತೆ. ಆ ಗುಡ್ಡದಲ್ಲಿ ನಟ ರಾಕ್ಷಸ ಡಾಲಿಗೂ- ತೋತಾಪುರಿಯಂತಹ ಚೆಲುವೆ ಅದಿತಿಗೂ ಏನ್ ಕೆಲಸ? ಇಬ್ಬರು ಕೂಡಿ ಏನ್ಮಾಡಲಿದ್ದಾರೆ? ಇವರಿಬ್ಬರನ್ನೂ ಒಟ್ಟಿಗೆ ಸೇರಿಸಿರುವ ಜಮಾಲಿಗುಡ್ಡದ ವಿಶೇಷತೆ ಏನು? ನಿಮ್ಮ ಈ ಕೂತೂಹಲದ ಪ್ರಶ್ನೆಗೆ ಉತ್ತರ ಕೊಡುವ ಮೊದಲು ಡಾಲಿ-ಅದಿತಿ ಒಟ್ಟಾಗಿ `ಜಮಾಲಿ ಗುಡ್ಡ’ ಏರಿರುವುದು ಸಿನಿಮಾಗಾಗಿ ಎನ್ನುವುದು ಕ್ಲಿಯರ್ ಕಟ್ಟಾಗಿ ಹೇಳಿಬಿಡ್ತೇವೆ.
‘ಎಡಕಲ್ಲು ಗುಡ್ಡ'-
ಜೋಗಿ ಗುಡ್ಡ’ ಸೇರಿದಂತೆ ಹಲವು ಗುಡ್ಡಗಳನ್ನು ಬಿಗ್ಸ್ಕ್ರೀನ್ ಮೇಲೆ ನೀವು ನೋಡರ್ತೀರಿ.ಕೆಲವು ಗುಡ್ಡಗಳಿಗೆ ಖುದ್ದಾಗಿ ನೀವೇ ಭೇಟಿಕೊಟ್ಟು ಪ್ರಕೃತಿ ಸೌಂದರ್ಯವನ್ನು ಸವಿದಿರುತ್ತೀರಿ.ಅದೇ ರೀತಿ "ಒನ್ಸ್ ಅಪಾನ್ ಎ ಟೈಮ್
ಜಮಾಲಿ ಗುಡ್ಡ” ದಲ್ಲಿ ಏನ್ ನಡೀತು ಎನ್ನುವುದನ್ನು ನಿರ್ದೇಶಕ ಕುಶಾಲ್ಗೌಡ್ರು ಬೆಳ್ಳಿತೆರೆ ಮೇಲೆ ಕಟ್ಟಿಕೊಡುವುದಕ್ಕೆ ಹೊರಟಿದ್ದಾರೆ. ಈ ಹಿಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ" ಹೆಸರಿನ ಸಿನಿಮಾ ಮಾಡಿ ಒಂದು ಹಂತದ ಸಕ್ಸಸ್ ಕಂಡಿದ್ದರು.ಇದೀಗ ಭೂಮಿ ಮೇಲೆ ಎಲ್ಲಿಯೂ ಸಿಗದ, ಕಲ್ಪನೆಗೆ ನಿಲುಕಿದ
‘ಜಮಾಲಿ ಗುಡ್ಡ’ ವನ್ನು ಸಿನಿಮಾ ಪ್ರೇಕ್ಷಕರ ಕಣ್ಮುಂದೆ ತಂದು ನಿಲ್ಲಿಸೋದಕ್ಕೆ ಮನಸ್ಸು ಮಾಡಿದ್ದಾರೆ. ಹೀಗಾಗಿ, ಬಜಾರ್ನಲ್ಲಿ ಬಹುಬೇಡಿಕೆಯ ನಟ-ನಟಿಯಾಗಿ ಮಿಂಚುತ್ತಿರುವ ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ್ ಅವರನ್ನು ಸೆಲೆಕ್ಟ್ ಮಾಡಿಕೊಂಡು `ಜಮಾಲಿ ಗುಡ್ಡ’ವನ್ನು ಹತ್ತಿದ್ದಾರೆ.
ಮೇಲೆ ಹೇಳಿದಂತೆ ಜಮಾಲಿ ಗುಡ್ಡ ಕಾಲ್ಪನಿಕ ಗುಡ್ಡದ ಕಥೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ನಲ್ಲಿ ಡಾಲಿ ಹಾಗೂ ಪುಟ್ಟ ಮಗುವಿನ ಚಿತ್ರಣವನ್ನು ನೋಡಿದರೆ ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆ ಎಂದೆನಿಸುತ್ತೆ. ಆದರೆ, ಕಥೆ ಬಗ್ಗೆ ಹೆಚ್ಚೇನನ್ನು ಬಿಟ್ಟುಕೊಡದ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಮಾಡಿ ಕೂತೂಹಲ ಕೆರಳಿಸಿದ್ದಾರೆ. ನಟ ಭಯಂಕರ ಡಾಲಿ ಹಾಗೂ ಧೈರ್ಯಂ ಚೆಲುವೆ ಸ್ಕ್ರೀನ್ ಶೇರ್ ಮಾಡಿರುವುದು ಕೂಡ `ಜಮಾಲಿ ಗುಡ್ಡ’ದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
ಸಿದ್ಲಿಂಗು ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿಯಲ್ಲಿ ಡಾಲಿ ಹಾಗೂ ಅದಿತಿ ಅಭಿನಯಿಸಿದ್ದಾರೆ. ಆದರೆ ಜಮಾಲಿ ಗುಡ್ಡದಲ್ಲಿ ಫೇರ್ ಆಗಿ ಪಾಪ್ಕಾರ್ನ್ ತಿನ್ನಿಸಿ ಕೋಕ್ ಕುಡಿಸಲಿದ್ದಾರೆ. ಚಿಕ್ಕಮಂಗಳೂರು ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ಆರಂಭಗೊಂಡಿದ್ದು, ಟಗರು-ಸಲಗ ಸಿನಿಮಾ ಖ್ಯಾತಿಯ ಮಾಸ್ತಿಯವರು ಸಂಭಾಷಣೆ ಬರೆದುಕೊಟ್ಟಿದ್ದಾರೆ,ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. ಪ್ರಕಾಶ್ ಬೆಳವಾಡಿ, ಸತ್ಯಣ್ಣ, ಭಾವನ ರಾಮಣ್ಣ, ನಂದಗೋಪಾಲ್, ಯಶ್ ಶೆಟ್ಟಿ ಸೇರಿದಂತೆ ಪ್ರಮುಖ ಕಲಾವಿದರು ಈ ಚಿತ್ರದಲ್ಲಿದ್ದಾರೆ.
ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯುರೋ ಸಿನಿಲಹರಿ