ಗುರುರಾಜ ಕುಲಕರ್ಣಿ ನಿರ್ಮಾಪಕರು ಅನ್ನೋದು ಎಲ್ಲರಿಗೂ ಗೊತ್ತಿದೆ. ಈಗಾಗಲೇ, ಈಗಾಗಲೇ “ಆಕ್ಸಿಡೆಂಟ್” ಮತ್ತು “ಲಾಸ್ಟ್ ಬಸ್” ಎಂಬ ಸದಭಿರುಚಿಯ ಸಿನಿಮಾಗಳನ್ನು ಕೊಟ್ಟವರು. ಸಿನಿಮಾ ಮೇಲಿನ ಪ್ರೀತಿ ಇರುವುದರಿಂದಲೇ ಅವರೀಗ ಮತ್ತೊಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಬಾರಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೌದು, ಇದೇ ಮೊದಲ ಸಲ ಗುರುರಾಜ ಕುಲಕರ್ಣಿ ಅವರು ನಿರ್ದೇಶಕರಾಗಿದ್ದಾರೆ. ಅವರೊಂದಿಗೆ ಜಿ 9 ಕಮ್ಯುನಿಕೇಷನ್ಸ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಡಿ ಒಂದಷ್ಟು ಸಮಾನ ಗೆಳೆಯರ ಜೊತೆಗೂಡಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಂದಹಾಗೆ, ಅವರ ಚೊಚ್ಚಲ ನಿರ್ದೇಶನದ ಸಿನಿಮಾ “ಅಮೃತ ಅಪಾರ್ಟ್ಮೆಂಟ್ಸ್” ನವೆಂಬರ್ ೨೬ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಈಗಾಗಲೇ “ಅಮೃತ್ ಅಪಾರ್ಟ್ಮಮೆಂಟ್ಸ್” ಚಿತ್ರ ಶೀರ್ಷಿಕೆಯಿಂದ ಹಿಡಿದು, ಹಾಡು ಮತ್ತು ಟ್ರೇಲರ್ ಮೂಲಕ ಭರ್ಜರಿ ಕುತೂಹಲ ಮೂಡಿಸಿದೆ. “ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು” ಎಂಬ ಪ್ರೇಮಗೀತೆ ಕೂಡ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಅಂದಹಾಗೆ, ಚಿತ್ರದ ಶೀರ್ಷಿಕೆ ಕೇಳಿದವರಿಗೆ ಎಲ್ಲೋ ಒಂದು ಕಡೆ ಕುತೂಹಲ ಮೂಡಿಸುತ್ತದೆ. ಬಹುತೇಕರಿಗೆ ಅದೊಂದು ಅಪಾರ್ಟ್ಮೆಂಟ್ನಲ್ಲಿ ನಡೆಯೋ ಕಥೆ ಇರಬಹುದಾ ಎಂಬ ನೂರೆಂಟು ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ. ಆದರೆ, ಅದು ನಿಜಾನಾ ಎಂಬ ಪ್ರಶ್ನೆಗೆ ಸಿನಿಮಾ ನೋಡಲೇಬೇಕು. ಇದೊಂದು ಬೆಂಗಳೂರಿಗರ ಕಥೆ. ಅದರಲ್ಲೂ ಐಟಿಬಿಟಿ ಕಂಪೆನಿಯಲ್ಲಿ ಕೆಲಸ ಮಾಡುವ ಮಂದಿಯ ತಳಮಳ, ತೊಳಲಾಟ ಮತ್ತು ಒಂದಷ್ಟು ಗೊಂದಲಗಳ ನಡುವೆ ಸಾಗುವ ಕಥೆ. ಸಿನಿಮಾ ಸಸ್ಪೆನ್ಸ್ ಜೊತೆ ಥ್ರಿಲ್ಲರ್ ಆಗಿಯೂ ಸಾಗುತ್ತದೆ. ಇಲ್ಲಿ ಹಲವು ಪಾತ್ರಗಳಿದ್ದರೂ, ಪ್ರತಿ ಪಾತ್ರಗಳಿಗೂ ತನ್ನದೇ ಆದಂತಹ ಪ್ರಾಮುಖ್ಯತೆ ಇದೆ ಎಂಬುದು ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಮಾತು.
ಇಲ್ಲಿ ಎಲ್ಲಾ ವರ್ಗಕ್ಕೂ ತಲುಪುವ ಒಂದು ಸಂದೇಶವಿದೆ ಎನ್ನುವ ನಿರ್ದೇಶಕರು, ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇಲ್ಲಿವೆ. ತಾರಕ್ ಪೊನ್ನಪ್ಪ ಅವರಿಲ್ಲಿ ಹೀರೋ ಆಗಿದ್ದಾರೆ. ಬಾಲಾಜಿ ಮನೋಹರ್ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಊರ್ವಶಿ ಗೋರ್ವಧನ್ ನಾಯಕಿ. ಮಾನಸ ಜೋಷಿ ಇಲ್ಲೊಂದು ವಿಶೇಷ ಪೊಲೀಸ್ ಅಧಿಕಾರಿ [ಪಾತ್ರ ಮಾಡಿದ್ದಾರೆ. ಸೀತಾ ಕೋಟೆ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ. ಸಂಪತ್ ಕುಮಾರ್, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಇತರರು ಕೂಡ ಚಿತ್ರದ ಹೈಲೈಟ್ ಎಂದು ವಿವರ ಕೊಡುತ್ತಾರೆ ಗುರುರಾಜ ಕುಲಕರ್ಣಿ.
ಸಿನಿಮಾದಲ್ಲಿ ಗಟ್ಟಿ ಕಥೆ ಇದೆ. ಅದಕ್ಕೆ ತಕ್ಕಂತಹ ನಟರೂ ಇದ್ದಾರೆ. ಎಲ್ಲರೂ ಸಿಕ್ಕಾಪಟ್ಟೆ ಹೈಟ್ ಇರೋ ಕಲಾವಿದರೇ. ಕ್ಯಾಮೆರಾಮೆನ್ಗೆ ಚಿತ್ರೀಕರಣ ವೇಳೆ ಕೊಂಚ ಸಮಸ್ಯೆ ಕಾಡಿದ್ದಂತೂ ನಿಜ. ಯಾಕೆಂದರೆ, ಒಬ್ಬರಿಗಿಂತ ಒಬ್ಬರು ಹೈಟ್ ಆಗಿದ್ದರಿಂದ ಸ್ವಲ್ಪ ಸೆರೆ ಹಿಡಿಯೋಕೆ ಹರಸಾಹಸ ಮಾಡಬೇಕಾಯಿತು. ಅದೇನೆ ಇದ್ದರೂ, ಕೊಟ್ಟ ಪಾತ್ರವನ್ನು ನಿಜಕ್ಕೂ ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡುವಾಗ ಒಂದಷ್ಟು ತಯಾರಿ ಬೇಕು. ಅದರಲ್ಲೂ, ಒಳ್ಳೆಯ ಕಥೆ ಆಯ್ಕೆ ಮಾಡಿಕೊಳ್ಳಬೇಕು. ಅವೆಲ್ಲವನ್ನೂ ಈ ಚಿತ್ರಕ್ಕೆ ಅಳವಡಿಸಿಕೊಂಡಿದ್ದರಿಂದಲೇ ಚಿತ್ರ ನಾನು ನಿರೀಕ್ಷೆ ಮೀರಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ.
ಇದು ನಗರದ ಜೀವನ ಕಥೆ. “ಅಮೃತ್ ಅಪಾರ್ಟ್ ಮೆಂಟ್ಸ್” ಅಂದರೆ ಹಕ್ಕಿಗೆ ತಕ್ಕಂತ ಗೂಡು ಎನ್ನಬಹುದು. ಈಗಾಗಲೇ ಬಿಡುಗಡೆ ಪೂರ್ವವಾಗಿ ನಮ್ಮ ಚಿತ್ರ ನೋಡಿರುವ ಕೆಲವು ಸ್ನೇಹಿತರು ಭರವಸೆಯ ಮಾತುಗಳಾಡಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಮನಮುಟ್ಟುವಂತ ಅಭಿಪ್ರಾಯ ನೀಡಿದ್ದಾರೆ. ನಮ್ಮ ಚಿತ್ರವನ್ನು ಎಲ್ಲರು ನೋಡಿ ಹರಸಿ ಎಂದರು ಗುರುರಾಜ್ ಕುಲಕರ್ಣಿ.
ಚಿತ್ರದ ನಾಯಕ ತಾರಕ್ ಪೊನ್ನಪ್ಪ ಅವರಿಗೆ ಇಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇದು ಬೆಂಗಳೂರಿಗರ ಕಥೆ. ಪ್ರತಿಯೊಬ್ಬರೂ ಸಿನಿಮಾ ನೋಡಿದಾಗ, ಫೀಲ್ ಆಗುತ್ತೆ. ಅಂಥದ್ದೊಂದು ಕಂಟೆಂಟ್ ಇಲ್ಲುಂಟು. ನವೆಂಬರ್ ೨೬ರಂದು ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹರಸಿ ಎಂದ ಅವರು, ಇ ಎಂ ಐ ಮೂಲಕ ಮನೆಕೊಳ್ಳುವ ಮಧ್ಯಮವರ್ಗದ ದಂಪತಿಗಳ ಜೀವನದ ಕಥೆಯನ್ನು ನಿರ್ದೇಶಕರು ಈ ಚಿತ್ರದಲ್ಲಿ ಮನಮುಟ್ಟುವಂತೆ ತೋರಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕ ತಾರಕ್ ಪೊನ್ನಪ್ಪ. ನಾಯಕಿ ಮಾನಸ ಜೋಷಿ ಅವರಿಗೂ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಸಿಕ್ಕಿದೆಯಂತೆ. ಬಹಳ ದಿನಗಳಿಂದ ನನಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯಿತ್ತು. ಆ ಆಸೆಯನ್ನು ನಿರ್ದೇಶಕ ಗುರುರಾಜ್ ಕುಲಕರ್ಣಿ ಪೂರ್ಣಗೊಳಿಸಿದ್ದಾರೆ. ಈ ರೀತಿಯ ಪಾತ್ರ ಸಿಕ್ಕಿದ್ದು ಖುಷಿ ಕೊಟ್ಟಿದೆ. ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಈ ಚಿತ್ರ ಇಷ್ಟವಾಗುತ್ತೆ ಅಂದರು ಮಾನಸಿ.
ನಟ ಬಾಲಾಜಿ ಮನೋಹರ್ ಅವರಿಗೆ ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ಖುಷಿ ಇದೆಯಂತೆ. ಇದು ನಗರದಲ್ಲಿ ವಾಸಿಸುವ ದಂಪತಿಗಳ ಕಥೆ. ನಿರ್ದೇಶಕರು ಕಥೆ ಹೆಣೆದಿರುವ ರೀತಿ ಬಹಳ ಚೆನ್ನಾಗಿದೆ. ಎಲ್ಲರ ಅಭಿನಯವು ಸೊಗಸಾಗಿದೆ ಎಂದರು ಬಾಲಾಜಿ ಮನೋಹರ್.
ಸೀತಾಕೋಟೆ, ಮಹಂತೇಶ್, ರಾಜ್ ಹಾಗು ಸಂಕಲನಕಾರ ಬಿ.ಎಸ್.ಕೆಂಪರಾಜ್ ಸಿನಿಮಾ ಕುರಿತು ಮಾತಾನಾಡಿದರು. ಮುನ್ನೂರು ಸಿನಿಮಾಗಳಿಗೆ ಸಂಕಲನ ಕಾರ್ಯ ಪೂರೈಸಿದ ಹಿನ್ನೆಲೆಯಲ್ಲಿ ಸಂಕಲನಕಾರ ಕೆಂಪರಾಜ್ ಅವರಿಗೆ ಚಿತ್ರತಂಡ ಗೌರವಿಸಿತು.
ಚಿತ್ರಕ್ಕೆ ಎಸ್.ಡಿ.ಅರವಿಂದ ಸಂಗೀತ ನೀಡಿದ್ದಾರೆ.